ವಾಟ್ಸಾಪ್ (WhatsApp)ಬಳಕೆದಾರರು ಈಗ ನಾಲ್ಕು ಫೋನ್‌ಗಳಲ್ಲಿ ಒಂದು ಖಾತೆಯನ್ನು ಬಳಸಬಹುದು: ಹೇಗೆಂದು ತಿಳಿಯಿರಿ

ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನ ಸಿಇಒ ಮಾರ್ಕ್ ಜುಕರ್‌ಬರ್ಗ್, ವಾಟ್ಸಾಪ್ (WhatsApp) ಅಂತಿಮವಾಗಿ ಬಹು-ಸಾಧನ ಲಾಗಿನ್ ಬೆಂಬಲವನ್ನು ಪರಿಚಯಿಸುತ್ತಿದೆ ಎಂದು ಘೋಷಿಸಿದ್ದು, ಇದು ಬಳಕೆದಾರರಿಗೆ ಒಂದೇ ವಾಟ್ಸಾಪ್ ಖಾತೆಯನ್ನು ನಾಲ್ಕು ಬೇರೆ ಬೇರೆ ಫೋನ್‌ಗಳಲ್ಲಿ ಬಳಸಲು ಅನುವು ಮಾಡಿಕೊಡುತ್ತದೆ.

ವಾಟ್ಸಾಪ್ ಪ್ರಕಾರ, ಈ ವೈಶಿಷ್ಟ್ಯವನ್ನು ಮುಂಬರುವ ವಾರಗಳಲ್ಲಿ ಎಲ್ಲಾ ಬಳಕೆದಾರರಿಗೆ ಬಿಡುಗಡೆ ಮಾಡಲಾಗುವುದು. ಈ ಹಿಂದೆ, ಬಳಕೆದಾರರು ಒಂದೇ ಫೋನ್ ಮತ್ತು ಬಹು ಕಂಪ್ಯಾನಿಯನ್ ಡೆಸ್ಕ್‌ಟಾಪ್ ಸಾಧನಗಳಲ್ಲಿ ಒಂದು ವಾಟ್ಸಾಪ್ ಖಾತೆ ಬಳಸಲು ಸೀಮಿತರಾಗಿದ್ದರು.

ಈ ಹೊಸ ಬಹು-ಸಾಧನ ಲಾಗಿನ್ ಬೆಂಬಲ ವೈಶಿಷ್ಟ್ಯವು ಬಳಕೆದಾರರು ತಮ್ಮ ಖಾತೆಗೆ ನಾಲ್ಕು ಸಾಧನಗಳನ್ನು ಲಿಂಕ್ ಮಾಡಲು ಅನುಮತಿಸುತ್ತದೆ. ಪ್ರತಿಯೊಂದು ಲಿಂಕ್ ಮಾಡಲಾದ ಸಾಧನವು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ, ಪ್ರಾಥಮಿಕ ಸಾಧನವು ಇಂಟರ್ನೆಟ್‌ಗೆ ಸಂಪರ್ಕ ಹೊಂದಿಲ್ಲದಿದ್ದರೂ ಸಹ, ಸ್ವತಂತ್ರ ಸಾಧನಗಳಲ್ಲಿ ಸಂದೇಶಗಳನ್ನು ಸ್ವೀಕರಿಸುವುದನ್ನು ಖಾತ್ರಿಪಡಿಸುತ್ತದೆ. ಆದಾಗ್ಯೂ, ಪ್ರಾಥಮಿಕ ಸಾಧನ ಸೀಮಿತ ಕಾಲಾವಧಿಯವರೆಗೆ ಕಾರ್ಯಾಚರಣೆಯಲ್ಲಿಲ್ಲದಿದ್ದರೆ, ಖಾತೆಯು ಉಳಿದ ಸಾಧನಗಳಿಂದಲೂ ಸ್ವಯಂಚಾಲಿತವಾಗಿ ಲಾಗ್ ಔಟ್ ಆಗುತ್ತದೆ.

ನಾಲ್ಕು ಹೆಚ್ಚುವರಿ ಸಾಧನಗಳು ಸ್ಮಾರ್ಟ್‌ಫೋನ್‌ಗಳು, ಪರ್ಸನಲ್ ಕಂಪ್ಯೂಟರ್ಗಳು ಅಥವಾ ಎರಡರ ಸಂಯೋಜನೆಯಾಗಿರಬಹುದು, ವಿವಿಧ ಸಾಧನಗಳಲ್ಲಿ ತಮ್ಮ ವಾಟ್ಸಾಪ್ ಖಾತೆಗಳನ್ನು ಪ್ರವೇಶಿಸಲು ಬಳಕೆದಾರರಿಗೆ ಇದು ಅವಕಾಶ ನೀಡುತ್ತದೆ.

ವಾಟ್ಸಾಪ್ ಗೆ ಕಂಪ್ಯಾನಿಯನ್ ಫೋನ್‌ಗಳನ್ನು ಸಂಪರ್ಕಿಸಿ

  • ಪ್ರಸ್ತುತ ಮೊದಲನೆ ವಿಧಾನದಲ್ಲಿ ದ್ವಿತೀಯ ಸಾಧನದಲ್ಲಿ ಫೋನ್ ಸಂಖ್ಯೆಯನ್ನು ನಮೂದಿಸಬೇಕು ಮತ್ತು ನಂತರ ಪ್ರಾಥಮಿಕ ಸಾಧನದಲ್ಲಿ ಸ್ವೀಕರಿಸಿದ ಒಟಿಪಿ ಅನ್ನು ನಮೂದಿಸಬೇಕು.
  • ಎರಡನೇ ವಿಧಾನದಲ್ಲಿ ಬಳಕೆದಾರರು ಪ್ರಾಥಮಿಕ ಸಾಧನದಲ್ಲಿ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಕಂಪ್ಯಾನಿಯನ್ ಸಾಧನವನ್ನು ಸೇರಿಸಬೇಕು.
  • ಇದರರ್ಥ ಬಳಕೆದಾರರು ಆಂಡ್ರಾಯ್ಡ್ ಅಥವಾ ಐಓಎಸ್ ಸಾಧನದಲ್ಲಿ ವಾಟ್ಸಾಪ್ ಖಾತೆಯನ್ನು ಹೊಂದಬಹುದು ಮತ್ತು ನಂತರ ಆಂಡ್ರಾಯ್ಡ್ ಅಥವಾ ಐಓಎಸ್ ಸಾಧನದಲ್ಲಿ ಕಂಪ್ಯಾನಿಯನ್ ಸಾಧನವನ್ನು ಸೇರಿಸಬಹುದು.
  • ಈ ವೈಶಿಷ್ಟ್ಯವನ್ನು ಪ್ರವೇಶಿಸಲು, ನಿಮ್ಮ ಪ್ರಾಥಮಿಕ ಮತ್ತು ಕಂಪ್ಯಾನಿಯನ್ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ನ ಇತ್ತೀಚಿನ ಆವೃತ್ತಿಯನ್ನು ಡೌನ್‌ಲೋಡ್ ಮತ್ತು ಇನ್ ಸ್ಟಾಲ್ ಮಾಡುವುದು ಮುಖ್ಯವಾಗಿದೆ.
  • ಈ ವೈಶಿಷ್ಟ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಎರಡೂ ಸಾಧನಗಳು ವಾಟ್ಸಾಪ್ ನ ಅಪ್-ಟು-ಡೇಟ್ ಆವೃತ್ತಿಗಳನ್ನು ಹೊಂದಿರಬೇಕು.

ಈ ನವೀಕರಣವನ್ನು ಜಾಗತಿಕವಾಗಿ ಹೊರತರಲಾಗುತ್ತಿದೆ ಮತ್ತು ಮುಂಬರುವ ವಾರಗಳಲ್ಲಿ ಎಲ್ಲಾ ಸಾಧನಗಳನ್ನು ತಲುಪುತ್ತದೆ ಎಂದು ಮೆಟಾ ಭರವಸೆ ನೀಡಿದೆ.