ಸ್ವಾವಲಂಬನೆಗಾಗಿ ಖಾದಿ-ಕೈಮಗ್ಗ ವಸ್ತ್ರಗಳನ್ನೇ ಹೆಚ್ಚಾಗಿ ಬಳಸಿ: ಅನೀಲ್ ಹೆಗ್ಡೆ ಕರೆ

ಕಿನ್ನಿಗೋಳಿ: ಎಪ್ಪತ್ತೈದನೇ ಸ್ವಾತಂತ್ರೋತ್ಸವದ ಸಂಭ್ರಮದೊಂದಿಗೆ ದ. ಕನ್ನಡ ಮತ್ತು ಉಡುಪಿ ಜಿಲ್ಲೆಯ ನೇಕಾರರಿಗಾಗಿ ಕಿನ್ನಿಗೋಳಿಯ ತಾಳಿಪಾಡಿ ನೇಕಾರ ಸಂಘದಲ್ಲಿ ರಾಜ್ಯ ಸಭಾ ಸದಸ್ಯ ಅನೀಲ್ ಹೆಗ್ಡೆ‌ ಮತ್ತು ಕದಿಕೆ ಟ್ರಸ್ಟ್ ಇವರ ನಬಾರ್ಡ್ ಬೆಂಬಲದೊಂದಿಗೆ ಕೈ ಮಗ್ಗ ಸಪ್ತಾಹ ದಿನಾಚರಣೆ ಆಚರಿಸಲಾಯಿತು.

ಖುದ್ದು ಖಾದಿ ಪ್ರಚಾರಕರಾಗಿರುವ ಅನೀಲ್ ಹೆಗ್ಡೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಸ್ವಾವಲಂಬನೆಗಾಗಿ ಖಾದಿ, ಕೈಮಗ್ಗ ವಸ್ತ್ರಗಳನ್ನೇ ಹೆಚ್ಚಾಗಿ ಬಳಸಿ ಎಂದು ಕರೆ ಕೊಟ್ಟರು.

ಈ ಸಂದರ್ಭದಲ್ಲಿ ನಡೆದ ಹಿರಿಯ ನೇಕಾರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ತಾಳಿಪಾಡಿ ನೇಕಾರ ಸಂಘದ ಬೂಬ ಶೆಟ್ಟಿಗಾರ ಅವರಿಗೆ ಕದಿಕೆ ಟ್ರಸ್ಟ್ ನೇಕಾರಿಕಾ ಕೌಶಲ್ಯಕ್ಕೆ ಕೊಡಮಾಡುವ ಅತ್ಯುನ್ನತ ಪ್ರಶಸ್ತಿಯಾದ ನೇಕಾರ ರತ್ನ ಪ್ರಶಸ್ತಿಯನ್ನು ನೀಡಿದ ಅನೀಲ್ ಹೆಗ್ಡೆ, ಕದಿಕೆ ಟ್ರಸ್ಟ್ ನಬಾರ್ಡ್ ಬೆಂಬಲದೊಂದಿಗೆ ನಡೆಸಿದ ಉಡುಪಿ ಸೀರೆ ನೇಕಾರಿಕೆಯ ಪುನಶ್ಚೇತನದ ಕೆಲಸವನ್ನು ಶ್ಲಾಘಿಸಿದರು.

ವಿಠಲ ಶೆಟ್ಟಿಗಾರ್ ಉಡುಪಿ ಸಂಘ, ಜಾರ್ಜ್ ಅಮ್ಮನ್ನ ಶಿವಳ್ಳಿ ಸಂಘ , ಬೂಬ ಶೆಟ್ಟಿಗಾರ್ ಪಡು ಪಣಂಬೂರು ಸಂಘ, ಮಾಲತಿ ಶೆಟ್ಟಿಗಾರ್ ತಾಳಿಪಾಡಿ ಸಂಘ ಇವರಿಗೆ ಕದಿಕೆ ಟ್ರಸ್ಟ್ ನಿರಂತರ ನೇಕಾರಿಕೆಗೆ ಕೊಡಮಾಡುವ ಉತ್ತಮ ನೇಕಾರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯ್ತು.

ಮಣಿಪಾಲದ ಪಾವನ ಆಚಾರ್ಯ ಅವರ ವಿಪಂಚಿ ತಂಡದಿಂದ ವೀಣಾ ವಾದನ ಮತ್ತು ಯುವ ನೇಕಾರರಿಂದ ಚರಕ,ರಾಟೆ ಜುಗಲಬಂದಿ ಕಾರ್ಯಕ್ರಮ ನಡೆಯಿತು. ತಾಳಿಪಾಡಿ ನೇಕಾರ ಸಂಘದ ಸದಸ್ಯರು ತಾವೇ ನೇಯ್ದ ಉಡುಪಿ ಸೀರೆಗಳನ್ನು ಧರಿಸಿ ರಾಂಪ್ ವಾಕ್ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಧಿಕಾರಿ ಸಾಯಿಶ್ ಚೌಟ , ಸೆಲ್ಕೋ ಫೌಂಡೇಶನ್ ಎ ಜಿ ಎಮ್ ಗುರುಪ್ರಕಾಶ್ ಶೆಟ್ಟಿ, ನಬಾರ್ಡ್ ಡಿ ಡಿ ಎಮ್ ಸಂಗೀತ ಕರ್ತ , ಮಂಗಳೂರು ವಿಶ್ವ ವಿದ್ಯಾಲಯ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಉದಯ ಕುಮಾರ್ ಇರ್ವತ್ತೂರ್ , ರಾಷ್ಟ್ರ ಮಟ್ಟದ ಪ್ರಶಸ್ತಿ ವಿಜೇತ ನೇಕಾರ ಸಸಿಹಿತ್ಲು ವ್ಯಾಸರಾಯ ಶೆಟ್ಟಿಗಾರ್ ಅವರು ಪ್ರಶಸ್ತಿಗಳನ್ನು ವಿತರಿಸಿದರು.

ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ , ಕದಿಕೆ ಟ್ರಸ್ಟ್ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡಿ , ನಬಾರ್ಡ್ ಬೆಂಬಲ ದೊಂದಿಗೆ ಟ್ರಸ್ಟ್ ಆರಂಭಿಸಿದ ವೆಬ್ ಸೈಟ್ www.udupisaree.org ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಎರಡೂ ಜಿಲ್ಲೆಯ ನೇಕಾರ ಸಂಘಗಳ ಪ್ರತಿನಿಧಿಗಳು ಮತ್ತು ನೇಕಾರರು ಮತ್ತು ಕದಿಕೆ ಟ್ರಸ್ಟ್ ನ ಟ್ರಸ್ಟಿಗಳು ಭಾಗವಹಿಸಿದ್ದರು.

ಕದಿಕೆ ಟ್ರಸ್ಟ್ ಕಾರ್ಯದರ್ಶಿ ಚಿಕ್ಕಪ್ಪ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ತಾಳಿಪಾಡಿ ನೇಕಾರ ಸಂಘದ ಆಡಳಿತ ನಿರ್ದೇಶಕ ಮಾಧವ ಶೆಟ್ಟಿಗಾರ್ ವಂದಿಸಿದರು.