ಉಪ್ಪಿನಕುದ್ರು ಒಂದನೇ ವಾರ್ಡ್: ಅಕ್ರಮವಾಗಿ ತಲೆಎತ್ತಿದ ವಾಣಿಜ್ಯ ಸಂಕೀರ್ಣ ಕಟ್ಟಡ ತೆರವಿಗೆ ತಲ್ಲೂರು ಗ್ರಾಮ ಸಭೆಯಲ್ಲಿ ನಿರ್ಣಯ

ಕುಂದಾಪುರ: ಉಪ್ಪಿನಕುದ್ರು ಒಂದನೇ ವಾರ್ಡ್ ಪರಿಸರದಲ್ಲಿ ಅಕ್ರಮವಾಗಿ ತಲೆಎತ್ತಿದ ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ತೆರವುಗೊಳಿಸುವಂತೆ ಹಿಂದೆ ನಡೆದಿರುವ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಇದುವರೆಗೂ ಕಟ್ಟಡವನ್ನು ತೆರವುಗೊಳಿಸಿಲ್ಲ. ಪಂಚಾಯತ್ ನಿರ್ಣಯ ಕೇವಲ ಕಡತಗಳಿಗಷ್ಟೇ ಸೀಮಿತವಾಗಿಬಿಟ್ಟದೆ. ಕಾನೂನುಬಾಹಿರವಾಗಿರುವ ಈ ಕಟ್ಟಡಕ್ಕೆ ವಿದ್ಯುತ್ ಅನ್ನು ಪೂರೈಕೆ ಮಾಡಲಾಗಿದೆ. ಪಂಚಾಯತ್ ಆಡಳಿತಕ್ಕೆ ಅಕ್ರಮವಾಗಿ ಕಟ್ಟಿರುವ ಕಟ್ಟಡ ತೆರವಿಗೊಳಿಸಲು ಸಾಧ್ಯವಾಗದಿರುವುದು ನಾಚಿಕೆಗೇಡಿನ ಸಂಗತಿ ಎಂದು ಗ್ರಾಮಸ್ಥ ಚಂದ್ರಮ ತಲ್ಲೂರು ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ಬೆಳಗ್ಗೆ ತಲ್ಲೂರು ಅಂಬೇಡ್ಕರ್ ಭವನದಲ್ಲಿ ನಡೆದ ತಲ್ಲೂರು ಗ್ರಾಮಪಂಚಾಯಿತಿ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.

ಗ್ರಾಮಸ್ಥ ಉದಯ ಉಪ್ಪಿನಕುದ್ರು ಮಾತನಾಡಿ, ಅಕ್ರಮ ಕಟ್ಟಡ ತೆರವುಗೊಳಿಸುವಂತೆ ಹಿಂದಿನ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಸುಳ್ಳು ದಾಖಲೆಗಳನ್ನು ನೀಡಿ ವಿದ್ಯುತ್ ಪೂರೈಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಆದರೂ ಈವರೆಗೂ ವಿದ್ಯುತ್ ಸ್ಥಗಿತಗೊಳಿಸಿಲ್ಲ. ಕಟ್ಟಡ ತೆರವುಗೊಳಿಸವ ನಿರ್ಣಯದ ಬಗ್ಗೆ ಪಂಚಾಯತ್ ಏನು ಕ್ರಮ ಕೈಗೊಂಡಿದೆ ಎನ್ನುವುದನ್ನು ನಮಗೆ ತಿಳಿಸಬೇಕು ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಪಂಚಾಯಿತಿ ಅಧ್ಯಕ್ಷ ಆನಂದ ಬಿಲ್ಲವ, ಈ ಬಗ್ಗೆ ಸಾಮಾನ್ಯ ಸಭೆ ಹಾಗೂ ಗ್ರಾಮಸಭೆಯಲ್ಲೂ ಸಾಕಷ್ಟು ಚರ್ಚೆ ನಡೆದಿದೆ. ಪಂಚಾಯಿತಿ ಮೂಲಕ ಸಂಬಂಧಪಟ್ಟ ಇಲಾಖೆಗೆ ನೋಟೀಸು ನೀಡಿದ್ದೇವೆ. ಆದರೆ ಅವರಿಂದ ಇದುವರೆಗೂ ನಮಗೆ ಯಾವುದೇ ಉತ್ತರ ಬಂದಿಲ್ಲ. ಅದೂ ಅಲ್ಲದೇ ಈ ಪ್ರಕರಣ ನ್ಯಾಯಾಲಯದಲ್ಲಿರುವಾಗ ನಮಗೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ನ್ಯಾಯಾಲಯದಲ್ಲಿ ನಮ್ಮ ಪರವಾಗಿ ತೀರ್ಪು ಬಂದ ಬಳಿಕ ತೆರವು ಮಾಡೋಣ ಎಂದರು.

ಇದೇ ವಿಚಾರವಾಗಿ ಚರ್ಚೆ ನಡೆಯುತ್ತಿರುವಾಗ ಸದಸ್ಯ ಉದಯಕುಮಾರ್ ತಲ್ಲೂರು ಮಧ್ಯಪ್ರವೇಶಿಸುತ್ತಿದ್ದಂತೆಯೇ ಸದಸ್ಯರ ಸಾಲಿನಲ್ಲಿ ವೇದಿಕೆಯಲ್ಲಿ ಕುಳಿತು ನೀವು ಪ್ರಶ್ನೆ ಕೇಳುವಂತಿಲ್ಲ ಎಂಬ ಅಧ್ಯಕ್ಷರ ಮಾತಿಗೆ ಸದಸ್ಯ ಉಯ ಕುಮಾರ್ ತಲ್ಲೂರು ಸಭಿಕರ ಸಾಲಿನಲ್ಲಿ ಕೂತು ಅಧ್ಯಕ್ಷರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಈ ವೇಳೆಯಲ್ಲಿ ಅಧ್ಯಕ್ಷ ಆನಂದ ಬಿಲ್ಲವ ಹಾಗೂ ಸದಸ್ಯ ಉದಯ ಕುಮಾರ್ ತಲ್ಲೂರು ನಡುವೆ ಬಿರುಸಿನ ವಾಕ್ಸಮರ ನಡೆಯಿತು.

ತಲ್ಲೂರು ಮೆಸ್ಕಾಂ ಸಹಾಯಕ ಇಂಜಿನಿಯರ್ ಸುರೇಶ್ ಬಾಬು ಮಾತನಾಡಿ, ನಮಗೆ ವಿದ್ಯುತ್ ಪೂರೈಸಲು ಅನುಮತಿ ಇದೆ, ಆದರೆ ನೀಡಿರುವ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಲು ಅಧಿಕಾರ ಇಲ್ಲ. ಈಗಾಗಲೇ ಪ್ರಕರಣ ಡಿಸಿ ಕೋರ್ಟ್‌ನಲ್ಲಿದೆ ಎಂದರು. ಮೆಸ್ಕಾಂ ಸಹಾಯಕ ಇಂಜಿನಿಯರ್ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಉದಯ ಕುಮಾರ್ ತಲ್ಲೂರು, ಸಭೆಗೆ ತಪ್ಪು ಮಾಹಿತಿ ಕೊಡಬೇಡಿ. ಈ ಪ್ರಕರಣ ಡಿಸಿ ಕೋರ್ಟ್‌ನಲ್ಲಿ ಎಲ್ಲಿದೆ. ನೀವೆ ಅವರಿಗೆ ಡಿಸಿ ಕೋರ್ಟ್‌ಗೆ ಹೋಗಲು ದಾರಿ ಮಾಡಿಕೊಡುತ್ತೀರಾ ಎಂದು ಪ್ರಶ್ನಿಸಿದರು.

ಎಮ್‌ಡಿ ಡೆವಲಪರ್ಸ್ ವಾಣಿಜ್ಯ ಸಂಕೀರ್ಣದ ತ್ಯಾಜ್ಯ: ಗ್ರಾಮಸ್ಥರ ಆಕ್ರೋಶ
ತಲ್ಲೂರಿನಲ್ಲಿ ಕಾರ್ಯಾಚರಿಸುತ್ತಿರುವ ಎಮ್‌ಡಿ ಡೆವಲಪರ್ಸ್ ವಾಣಿಜ್ಯ ಸಂಕೀರ್ಣದ ಶೌಚಾಲಯದಿಂದ ಹೊರಬರುವ ತ್ಯಾಜ್ಯ ನೇರವಾಗಿ ಸಾರ್ವಜನಿಕ ಚರಂಡಿಗೆ ಬಿಡಲಾಗುತ್ತಿದೆ. ಇದರಿಂದ ಸಾರ್ವಜನಿಕರು ರಸ್ತೆಯಲ್ಲಿ ಮೂಗುಮುಚ್ಚಿ ತಿರುಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹಿಂದಿನ ಸಭೆಯಲ್ಲೂ ಈ ಬಗ್ಗೆ ಪ್ರಸ್ತಾಪ ಆಗಿದೆ. ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಿ ಎಂದು ಗ್ರಾಮಸ್ಥ ಕೃಷ್ಣ ಆಗ್ರಹಿಸಿದರು.

ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳಿವೆ. ಆದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಯಾವುದೇ ಗ್ರಾಮಸಭೆಗೂ ಬಂದಿಲ್ಲ. ಇದು ದುರಂತ. ನಮ್ಮ ಸಮಸ್ಯೆಗಳನ್ನು ನಾವು ಯಾರಲ್ಲಿ ಹೇಳಿಕೊಳ್ಳಲಿ ಎಂದು ಗ್ರಾಮಸ್ಥ ಚಂದ್ರಮ ತಲ್ಲೂರು ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಆನಂದ ಬಿಲ್ಲವ, ಎಲ್ಲಾ ಇಲಾಖಾಧಾಕಾರಿಗಳಿಗೂ ಸಭೆಗೆ ಬರುವಂತೆ ನೋಟೀಸ್ ನೀಡಿದ್ದೇವೆ. ಪಂಚಾಯಿತಿ ಮಟ್ಟದ ಕೆಡಿಪಿ ಸಭೆಗೂ ಅಧಿಕಾರಿಗಳು ಬರುತ್ತಿಲ್ಲ. ಮೂರು ಮೂರು ಬಾರಿ ಖುದ್ದು ನಾನೇ ಲೆಟರ್ ಮಾಡಿ ಕಳುಹಿಸಿದ್ದೇನೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ನಿರಂತರ ಗೈರಿಗೆ ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದೇನೆ ಎಂದರು.

ವಿಜಯಾ ಬ್ಯಾಂಕ್ ಸಿಬ್ಬಂದಿಗಳು ಸಾರ್ವಜನಿಕರಿಗೆ ನಗುಮೊಗದ ಸೇವೆ ಕೊಡುತ್ತಿಲ್ಲ. ದಲಿತರು ಸಾಲಾಕ್ಕಾಗಿ ಬಂದರೆ ಅವರನ್ನು ಸತಾಯಿಸುತ್ತಿದ್ದಾರೆ. ಈ ಬಗ್ಗೆ ಹಿಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಚಂದ್ರಮ ತಲ್ಲೂರು ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಅಧ್ಯಕ್ಷ ಆನಂದ ಬಿಲ್ಲವ, ತಲ್ಲೂರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಅಂತ ಇರುವುದು ಒಂದೇ. ಬಡವರ ಸರ್ಕಾರಿ ಸೌಲಭ್ಯಗಳು ಬರುವುದು ಇದೇ ವಿಜಯಾ ಬ್ಯಾಂಕ್‌ಗೆ. ಬಡವರು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿರುತ್ತಾರೆ. ಮಾನವೀಯ ನೆಲೆಯಲ್ಲಾದರೂ ಅವರಿಗೆ ಸಹಕರಿಸಿ ಎಂದರು.

ವಿಜಯಾ ಬ್ಯಾಂಕ್ ತಲ್ಲೂರು ಶಾಖೆಯ ಮ್ಯಾನೇಜರ್ ಜೇನ್ ಡಿಸೋಜಾ ಮಾತನಾಡಿ, ನಾನು ಇಲ್ಲಿಗೆ ಅಧಿಕಾರ ತೆಗೆದುಕೊಂಡು ಎರಡು ತಿಂಗಳಾಗಿದೆ. ಈಗಾಗಲೇ ಎಕೌಂಟ್ ಕ್ಯಾಂಪೇನ್ ನಡೆಸಿದ್ದು, ಬುಧವಾರ ೫೩ ಮಂದಿ ಹೊಸ ಖಾತೆದಾರರು ಸೇರ್ಪಡೆಗೊಂಡಿದ್ದಾರೆ. ಇನ್ನುಮುಂದೆ ನಮ್ಮ ಸಿಬ್ಬಂದಿಗಳಿಂದ ಏನಾದರೂ ಸಮಸ್ಯೆಯಾದರೆ ನನ್ನ ಗಮನಕ್ಕೆ ತನ್ನಿ. ಕೂಡಲೇ ಸರಿಪಡಿಸುವೆ ಎಂದರು.

ಬಾಕ್ಸ್ ಐಟಂ:
ಸಾಕಷ್ಟು ವರ್ಷಗಳಿಂದ ನಮ್ಮೂರಿಗೆ ಸರ್ಕಾರಿ ಐಟಿಐ ಕಾಲೇಜು ಬಂದಿತ್ತು. ಜಾಗದ ಸಮಸ್ಯೆಯಿಂದಾಗಿ ಅದು ಬಿದ್ಕಲ್‌ಕಟ್ಟೆಗೆ ಸ್ಥಳಾಂತರವಾಯಿತು. ಆದರೆ ಇದೀಗ ತಲ್ಲೂರು ಗ್ರಾ.ಪಂ. ವ್ಯಾಪ್ತಿಗೆ ಐಟಿಐ ಕಾಲೇಜಿನ ಅಲ್ಪಾವಧಿ ಹಾಗೂ ದೀರ್ಘಾವಧಿ ತರಬೇತಿಯ ಅಂಗಸಂಸ್ಥೆ ಮಂಜೂರಾಗಿದೆ. ಇದಕ್ಕಾಗಿ ಪಂಚಾಯತ್‌ನಿಂದ ಜಾಗ ಕಾಯ್ದಿರಿಸಬೇಕು ಎಂದು ಗ್ರಾಮಸ್ಥರಾದ ಚಂದ್ರಶೇಖರ್ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ಆನಂದ ಬಿಲ್ಲವ, ಹೈಸ್ಕೂಲ್ ಕಟ್ಟಡದ ಪಕ್ಕದ ಸರ್ಕಾರಿ ಜಾಗ ಇದಕ್ಕೆ ಸೂಕ್ತವಾದ ಜಾಗ. ಕಂದಾಯ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಜಾಗವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.

ತಲ್ಲೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಎಕರೆಗಟ್ಟಲೆ ಸರ್ಕಾರಿ ಜಾಗಗಳು ಅಕ್ರಮವಾಗಿ ಒತ್ತುವರಿಯಾಗಿವೆ. ಈ ಹಿಂದೆಯೂ ಸಾಕಷ್ಟು ಬಾರಿ ಸಭೆಯಲ್ಲಿ ಚರ್ಚೆಯಾಗಿದೆ. ಒತ್ತುವರಿಯಾಗಿರುವ ಜಾಗವನ್ನು ತೆರವುಗೊಳಿಸಲು ಪಂಚಾಯತ್ ಏನು ಕ್ರಮ ಕೈಗೊಂಡಿದೆ ಎಂದು ಗ್ರಾಮಸ್ಥರಾದ ಉದಯ ಉಪ್ಪಿನಕುದ್ರು, ಚಂದ್ರಮ ತಲ್ಲೂರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಂಚಾಯಿತಿ ಅಧ್ಯಕ್ಷ ಆನಂದ ಬಿಲ್ಲವ, ಮೂರ್ನಾಲ್ಕು ಬಾರಿ ಕಂದಾಯ ಇಲಾಖೆಗೆ ಪತ್ರ ಬರೆದಿದ್ದೇವೆ. ಆದರೆ ಅವರಿಂದ ಇದುವರೆಗೂ ಯಾವುದೇ ಉತ್ತರ ಬಂದಿಲ್ಲ. ಪಂಚಾಯಿತಿ ವ್ಯವಸ್ಥೆ ಹಲ್ಲಿಲ್ಲದ ಹಾವಿನಂತಾಗಿದೆ. ನೋಟೀಸ್ ಮಾಡಲಷ್ಟೇ ಸೀಮಿತವಾಗಿದೆ. ಕ್ರಮಕೈಗೊಳ್ಳಲು ಸಾಧ್ಯವಾಗುವುದಿಲ್ಲ ಎಂದರು.

ಅರಣ್ಯ ಇಲಾಖೆಯ ಆರ್‌ಎಫ್‌ಒ ಉದಯ್, ಆರೋಗ್ಯ ಇಲಾಖೆಯಿಂದ ಉಪ್ಪಿನಕುದ್ರು ಉಪಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಕುಸುಮಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿ ಬೇಬಿ ಸಭೆಗೆ ವಿವಿಧ ಸರ್ಕಾರಿ ಸೌಲಭ್ಯಗಳ ಮಾಹಿತಿ ನೀಡಿದರು.

ಗ್ರಾ.ಪಂ ಅಧ್ಯಕ್ಷ ಆನಂದ ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ ಸದಸ್ಯ ಕರಣ್ ಪೂಜಾರಿ, ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷ ವೆಂಕಟ್, ಗ್ರಾ.ಪಂ ಸದಸ್ಯರಾದ ಚಂದ್ರ ದೇವಾಡಿಗ, ಸುನೀಲ್ ಖಾರ್ವಿ ಮೊದಲಾದವರು ಇದ್ದರು. ಪಿಡಿಒ ನಾಗೇಂದ್ರ ಸ್ವಾಗತಿಸಿದರು. ಕಾರ್ಯದರ್ಶಿ ವಾಸುದೇವ ಶ್ಯಾನುಭಾಗ್ ಪಾಲನವರದಿ ಓದಿದರು. ಸಿಬ್ಬಂದಿ ಮಂಜುಳಾ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳ ವಿವಿರ ನೀಡಿದರು.