ನೆವದೆಹಲಿ: ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್.ಪಿ.ಸಿ.ಐ) ಎಲ್ಲಾ ಯುಪಿಐ-ಆಧಾರಿತ ಅಪ್ಲಿಕೇಶನ್‌ಗಳು ತಮ್ಮ ಬಳಕೆದಾರರ ಲೊಕೇಶನ್ ಡೇಟಾವನ್ನು ಸಂಗ್ರಹಿಸುವ ಮೊದಲು ಇದಕ್ಕೆ ಬಳಕೆದಾರರ ಒಪ್ಪಿಗೆ ಪಡೆಯುವುದನ್ನು ಕಡ್ಡಾಯಗೊಳಿಸಿದೆ. ತಮ್ಮ ಲೊಕೇಶನ್ ಹಂಚಿಕೊಳ್ಳಲು ಸಮ್ಮತಿಯನ್ನು ಸಕ್ರಿಯಗೊಳಿಸುವ ಅಥವಾ ಹಿಂತೆಗೆದುಕೊಳ್ಳುವ ಆಯ್ಕೆಯನ್ನು ಅಪ್ಲಿಕೇಶನ್‌ಗಳು ತಮ್ಮ ಬಳಕೆದಾರರಿಗೆ ಕಡ್ಡಾಯವಾಗಿ ಒದಗಿಸಬೇಕು ಎಂದು ಅದು ಹೇಳಿದೆ.
“ಸೇವೆಗಳನ್ನು ಪಡೆದುಕೊಳ್ಳುವಾಗ ಆರಂಭದಲ್ಲಿ ಯುಪಿಐ ಅಪ್ಲಿಕೇಶನ್‌ಗಳಿಗೆ ಲೊಕೇಶನ್ ಹಂಚಿಕೊಳ್ಳಲು ಗ್ರಾಹಕರು ಈಗಾಗಲೇ ಒಪ್ಪಿಗೆ ನೀಡಿದ್ದರೆ ಮತ್ತು ನಂತರ ಸಮ್ಮತಿಯನ್ನು ಹಿಂಪಡೆಯಲು ಬಯಸಿದ್ದರೂ ಸಹ, ಗ್ರಾಹಕರಿಗೆ ಯುಪಿಐ ಸೇವೆಗಳನ್ನು ನಿರಾಕರಿಸದೆಯೇ ಅದನ್ನು ಅನುಮತಿಸಬೇಕು. ಅಪ್ಲಿಕೇಶನ್‌ಗಾಗಿ ಸ್ಥಳ/ಭೌಗೋಳಿಕ ವಿವರಗಳನ್ನು ಹಂಚಿಕೊಳ್ಳಲು ಗ್ರಾಹಕರು ಸಮ್ಮತಿಯನ್ನು ಹಿಂತೆಗೆದುಕೊಂಡ ನಂತರವೂ ಅಪ್ಲಿಕೇಶನ್‌ಗಳು ಯುಪಿಐ ಸೇವೆಗಳನ್ನು ಒದಗಿಸುವುದನ್ನು ಮುಂದುವರಿಸಬೇಕು, ”ಎಂದು ಜುಲೈ 5 ರಂದು ನೀಡಿದ ಹೇಳಿಕೆಯಲ್ಲಿ ಎನ್.ಪಿ.ಸಿ.ಐ ತಿಳಿಸಿದೆ.
ಆ್ಯಪ್‌ಗೆ ಸ್ಥಳ/ಭೌಗೋಳಿಕ ವಿವರಗಳನ್ನು ಸಂಗ್ರಹಿಸಲು ಗ್ರಾಹಕರು ಒಪ್ಪಿಗೆ ನೀಡಿದ ಎಲ್ಲಾ ಸಂದರ್ಭಗಳಲ್ಲಿ, ಅದನ್ನು ಸರಿಯಾಗಿ ಯುಪಿಐ ಗೆ ರವಾನಿಸಬೇಕು. ತಪ್ಪಾದ ಸ್ಥಳ ನಿರ್ದೇಶಾಂಕಗಳನ್ನು ಕಳುಹಿಸಿದಲ್ಲಿ ಸಂಸ್ಥೆ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳುತ್ತದೆ. ಗ್ರಾಹಕರು (ಪಾವತಿದಾರರು) ವಹಿವಾಟುಗಳನ್ನು ಪ್ರಾರಂಭಿಸುವ ವೈಯಕ್ತಿಕ ವ್ಯಕ್ತಿಗಳಿಗೆ ಮತ್ತು ದೇಶೀಯ ವಹಿವಾಟುಗಳಿಗೆ ಮಾತ್ರ ಮಾರ್ಗಸೂಚಿಗಳು ಅನ್ವಯಿಸುತ್ತವೆ ಎಂದು ಸಂಸ್ಥೆ ತಿಳಿಸಿದೆ.