ಯುಪಿಸಿಎಲ್ ಕಾರ್ಮಿಕ ಶೆಡ್ನಲ್ಲಿ ನಡೆದ ಶರಣಪ್ಪ ಕೊಲೆ ಆರೋಪಿಗೆ ಜೀವಾವಧಿ

ಉಡುಪಿ: ಕಳೆದ ಆರು ವರ್ಷಗಳ ಹಿಂದೆ ಯುಪಿಸಿಎಲ್‌ನ ಕಾರ್ಮಿಕರ ಶೆಡ್‌ನಲ್ಲಿ ನಡೆದ ಶರಣಪ್ಪ ಕೊಲೆ ಪ್ರಕರಣದ ಆರೋಪಿಗೆ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಬಸಪ್ಪ ದುರ್ಗಪ್ಪ ಯಾನೆ ಬಸು (45) ಶಿಕ್ಷೆಗೆ ಗುರಿಯಾದ ಆರೋಪಿ.
ಯುಪಿಸಿಎಲ್‌ನ ಸೋಜಾ ಕನ್‌ಸ್ಟ್ರಕ್ಷನ್‌ ಗುತ್ತಿಗೆ ಸಂಸ್ಥೆಯಲ್ಲಿ ಆರೋಪಿ ಬಸಪ್ಪ ದುರ್ಗಪ್ಪ ತಾತ್ಕಾಲಿಕವಾಗಿ ಗುತ್ತಿಗೆ ಕೆಲಸ ಮಾಡುತ್ತಿದ್ದ. ಈ ವೇಳೆ ಶರಣಪ್ಪ ಎಂಬಾತನು ಬಸಪ್ಪನಿಂದ 500ರೂ. ಸಾಲ ಪಡೆದುಕೊಂಡಿದ್ದನು. ಸಾಲದ ಮರುಪಾವತಿ
ವಿಚಾರದಲ್ಲಿ ಇಬ್ಬರ ನಡುವೆ ಆಗಾಗ ವೈಮನಸ್ಸು ಏರ್ಪಟ್ಟಿತ್ತು. ಇದರಿಂದ ಸಿಟ್ಟಿಗೆದ್ದ ಆರೋಪಿ ಬಸಪ್ಪ ಮತ್ತೊಬ್ಬ ಆರೋಪಿ ಸಂಗಯ್ಯ ಜತೆಗೂಡಿ 2013ರ ಆ. 25ರಂದು ಶೆಡ್‌ನಲ್ಲಿ ಮಲಗಿದ್ದ ಶರಣಪ್ಪನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯಕ್ಕೆ 2013ರ ನ. 25ರಂದು ದೋಷರೋಪಣಾ ಪಟ್ಟಿ ಸಲ್ಲಿಕೆಯಾಗಿತ್ತು.
ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿ ಆರೋಪಿಯ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಬಸಪ್ಪನಿಗೆ ಜೀವಿತಾವಧಿವರೆಗೆ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿದೆ. ಸರ್ಕಾರದ ಪರವಾಗಿ ಜಿಲ್ಲಾ ಸರ್ಕಾರಿ ಅಭಿಯೋಜಕಿ ಶಾಂತಿ ಬಾಯಿ ವಾದ ಮಂಡಿಸಿದರು. ಈ ಪ್ರಕರಣದ ಮತ್ತೊಬ್ಬ ಆರೋಪಿ ಯಲ್ಲಾಪುರ ನಿವಾಸಿ ಸಂಗಯ್ಯ (40) ಬಂಧನವಾದ ಒಂದು ವರ್ಷದಲ್ಲಿ ಮೃತಪಟ್ಟಿದ್ದನು.