ಲಕ್ನೋ: ಇತರರಿಗೆ ನ್ಯಾಯ ನೀಡಬೇಕಾಗಿರುವ ನ್ಯಾಯಾಧೀಶೆಯೆ ನ್ಯಾಯಕಾಗಿ ಮೊರೆ ಇಡುವ ಪ್ರಸಂಗ ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಮಹಿಳಾ ಸಿವಿಲ್ ನ್ಯಾಯಾಧೀಶೆಯೊಬ್ಬರಿಗೆ ಎದುರಾಗಿದೆ. ಹಿರಿಯ ನ್ಯಾಯಾಧೀಶರಿಂದ ಲೈಗಿಂಕ ಶೋಷಣೆ ಎದುರಿಸುತ್ತಿರುವ ನ್ಯಾಯಾಧೀಶೆಯು ಸಿಜೆಐ ಡಿವೈ ಚಂದ್ರಚೂಡ್ ಅವರಿಗೆ ಬರೆದಿರುವ ಬಹಿರಂಗ ಪತ್ರದಲ್ಲಿ ತಮ್ಮ ಹಿರಿಯರಿಂದ ಲೈಂಗಿಕ ಕಿರುಕುಳ ಎದುರಿಸುತ್ತಿರುವುದನ್ನು ಆರೋಪಿಸಿದ್ದಾರೆ. “ಇನ್ನು ನನಗೆ ಬದುಕುವ ಇಚ್ಛೆ ಇಲ್ಲ” ಎಂದಿರುವ ಅವರು ನ್ಯಾಯಯುತವಾದ ವಿಚಾರಣೆಯನ್ನು ಪಡೆಯುವ ಭರವಸೆ ಇಲ್ಲದ ಕಾರಣ ತನ್ನ ಜೀವನವನ್ನು ಕೊನೆಗೊಳಿಸಲು ಅನುಮತಿ ಕೋರಿದ್ದಾರೆ.
ಗುರುವಾರ ಬಹಿಂಗವಾಗಿರುವ ಪತ್ರದಲ್ಲಿ, “ನನಗೆ ಇನ್ನು ಮುಂದೆ ಬದುಕುವ ಇಚ್ಛೆ ಇಲ್ಲ. ಕಳೆದ ಒಂದೂವರೆ ವರ್ಷದಲ್ಲಿ ನನ್ನನ್ನು ನಡೆದಾಡುವ ಶವವನ್ನಾಗಿ ಮಾಡಲಾಗಿದೆ. ಈ ಆತ್ಮವಿಲ್ಲದ ಮತ್ತು ನಿರ್ಜೀವ ದೇಹವನ್ನು ಇನ್ನು ಮುಂದೆ ಸಾಗಿಸುವುದರಲ್ಲಿ ಯಾವುದೇ ಉದ್ದೇಶವಿಲ್ಲ. ನನ್ನ ಜೀವನದಲ್ಲಿ ಯಾವುದೇ ಉದ್ದೇಶ ಉಳಿದಿಲ್ಲ. ನನ್ನ ಜೀವನವನ್ನು ಗೌರವಯುತವಾಗಿ ಕೊನೆಗೊಳಿಸಲು ದಯವಿಟ್ಟು ನನಗೆ ಅನುಮತಿಸಿ” ಎಂದು ಬರೆದುಕೊಂಡಿದ್ದಾರೆ.
ತನ್ನ ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸಲು ಆರು ತಿಂಗಳುಗಳು ಮತ್ತು ಸಾವಿರ ಇಮೇಲ್ಗಳನ್ನು ಬರೆದಿರುವ ಬಗ್ಗೆ ಹೇಳಿರುವ ಅವರು, ತನಗೆ ನ್ಯಾಯ ದೊರೆಯದಿರುವ ಬಗ್ಗೆ ಅಳಲು ತೋಡಿಕೊಂಡಿದ್ದಾರೆ ಎಂದು ಮಾಧ್ಯಮ ವರದಿಯಾಗಿದೆ.
ಅಲಹಾಬಾದ್ ಹೈಕೋರ್ಟ್ನ ಆಡಳಿತಾತ್ಮಕ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಾಧೀಶರಿಗೆ 2022 ರಲ್ಲಿ ದೂರು ಸಲ್ಲಿಸಿದ್ದರೂ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ವಾದಿಸಿದ್ದಾರೆ. ನಂತರ, ಜುಲೈ 2023 ರಲ್ಲಿ, ಅವರು ಹೈಕೋರ್ಟ್ನ ಆಂತರಿಕ ದೂರುಗಳ ಸಮಿತಿಗೆ ದೂರು ನೀಡಿದ್ದಾರೆ. ಸತ್ಯಾಂಶಗಳ ನ್ಯಾಯಯುತ ಪರೀಕ್ಷೆಗಾಗಿ ವಿಚಾರಣೆಯು ನಡೆಯುತ್ತಿರುವಾಗ ಜಿಲ್ಲಾ ನ್ಯಾಯಾಧೀಶರನ್ನು ವರ್ಗಾವಣೆ ಮಾಡುವಂತೆ ಅವರು ಕೇಳಿಕೊಂಡರೂ ಅವರ ಮನವಿಯನ್ನು ತಿರಸ್ಕರಿಸಲಾಗಿದೆ. ಎಂಟು ಸೆಕೆಂಡುಗಳ ವಿಚಾರಣೆಯ ನಂತರ ಭಾರತದ ಸುಪ್ರೀಂ ಕೋರ್ಟ್ ತನ್ನ ಪ್ರಕರಣವನ್ನು ವಜಾಗೊಳಿಸಿದೆ ಎಂದು ಮಹಿಳಾ ನ್ಯಾಯಾಧೀಶರು ಪತ್ರದಲ್ಲಿ ತಿಳಿಸಿದ್ದಾರೆ.
ತನ್ನನ್ನು ಅಮಾನವೀಯ ರೀತಿಯಲ್ಲಿ ನಡೆಸಿಕೊಂಡುವ ಬಗ್ಗೆ ಹಾಗೂ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಅವರು ಪತ್ರದಲ್ಲಿ ಬರೆದುಕೊಂಡಿದ್ದು, ತಾನು ಅತ್ಯಹತ್ಯೆಗೆ ಪ್ರಯತ್ನಿಸಿರುವ ಬಗ್ಗೆಯೂ ಉಲ್ಲೇಖಿಸಿದ್ದಾರೆ.
ಸಿಜೆಐ ಗುರುವಾರ ಅಲಹಾಬಾದ್ ಹೈಕೋರ್ಟ್ ಆಡಳಿತದಿಂದ ಉತ್ತರ ಪ್ರದೇಶದ ಮಹಿಳಾ ಸಿವಿಲ್ ನ್ಯಾಯಾಧೀಶರು ಮಾಡಿದ ಲೈಂಗಿಕ ಕಿರುಕುಳದ ಆರೋಪಗಳ ತನಿಖೆಯ ಸ್ಥಿತಿಗತಿಯ ವರದಿಯನ್ನು ಕೇಳಿರುವುದಾಗಿ ಮಾಧ್ಯಮ ವರದಿ ಹೇಳಿದೆ.