ಲಕ್ನೋ: ಇತ್ತೀಚಿಗೆ ಉಡುಪಿಯ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನ ವಾಶ್ ರೂಂ ನಲ್ಲಿ ವಿದ್ಯಾರ್ಥಿನಿಯ ವೀಡಿಯೋ ಚಿತ್ರೀಕರಣ ಮಾಡಿದ ಸುದ್ದಿಯ ಬೆನ್ನಲ್ಲೇ ಅದೇ ಮಾದರಿಯ ಮತ್ತೊಂದು ಪ್ರಕರಣ ದೇಶದ ಇನ್ನೊಂದು ರಾಜ್ಯದಿಂದ ವರದಿಯಾಗಿದೆ. ಉತ್ತರ ಪ್ರದೇಶದ ಗಾಜಿಪುರದ ಸರ್ಕಾರಿ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ತನ್ನ ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿನಿಯರ ಆಕ್ಷೇಪಾರ್ಹ ಫೋಟೋಗಳು ಮತ್ತು ವೀಡಿಯೋಗಳನ್ನು ಚಿತ್ರೀಕರಿಸಿರುವ ಆರೋಪಕ್ಕೆ ಗುರಿಯಾಗಿದ್ದಾಳೆ.
ಕಾಲೇಜಿನ ಮೊದಲನೆ ವರ್ಷದ ವಿದ್ಯಾರ್ಥಿನಿಯನ್ನು ಮಂತಾಶಾ ಕಾಜ್ಮಿ ಎಂದು ಗುರುತಿಸಲಾಗಿದ್ದು, ತನ್ನ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿನಿಯರ ಅಕ್ಷೇಪಾರ್ಹ ಫೋಟೋಗಳನ್ನು ರಹಸ್ಯವಾಗಿ ಚಿತ್ರೀಕರಿಸಿದ ಮತ್ತು ವೀಡಿಯೊಗಳನ್ನು ತನ್ನ ಕಾಲೇಜಿನ ಹಿರಿಯ ವಿದ್ಯಾರ್ಥಿ ಮೊಹಮ್ಮದ್ ಅಮೀರ್‌ಗೆ ಕಳುಹಿಸಿದ ಆರೋಪವಿದ್ದು, ಫೋಟೋಗಳು ಮತ್ತು ವೀಡಿಯೊಗಳನ್ನು ಬಳಸಿಕೊಂಡು ಇವರು ವಿದ್ಯಾರ್ಥಿನಿಯರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು ಎಂದು ವರದಿಯಾಗಿದೆ.
ಸಂತ್ರಸ್ತ ವಿದ್ಯಾರ್ಥಿನಿಯರು ಕಾಲೇಜು ಆಡಳಿತ ಮತ್ತು ಸ್ಥಳೀಯ ಪೊಲೀಸರಿಗೆ ಔಪಚಾರಿಕವಾಗಿ ದೂರು ನೀಡಿದ ನಂತರ ಘಟನೆ ಆಗಸ್ಟ್ 7 ರಂದು ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳ ದೂರಿನ ಮೇರೆಗೆ ಕಾಲೇಜು ಆಡಳಿತ ಮಂಡಳಿ ತನಿಖೆ ನಡೆಸಿದ್ದು, ಆರೋಪ ದೃಢಪಟ್ಟಿದೆ. ಹೀಗಾಗಿ ಆರೋಪಿ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಆಯಾ ವರ್ಷಗಳಲ್ಲಿ ಬಿಎಚ್‌ಎಂಎಸ್ ವಿದ್ಯಾರ್ಥಿಗಳಾಗಿದ್ದ ಮಂತಾಶಾ ಕಾಜ್ಮಿ ಮತ್ತು ಮೊಹಮ್ಮದ್ ಅಮೀರ್ ಇಬ್ಬರನ್ನೂ ಆರು ತಿಂಗಳ ಅವಧಿಗೆ ಅಮಾನತುಗೊಳಿಸಲಾಗಿದೆ.
ಕಾಲೇಜಿನ ಹಂಗಾಮಿ ಪ್ರಾಂಶುಪಾಲ ಡಾ.ಬಿ.ಎನ್.ಸಾಹ್ನಿ ಪ್ರಕರಣದ ವಿವರಗಳನ್ನು ಬಹಿರಂಗಪಡಿಸಿದ್ದು, ಆರೋಪಿ ವಿದ್ಯಾರ್ಥಿಗಳನ್ನು ಆರು ತಿಂಗಳ ಕಾಲ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಆರೋಪಿ ವಿದ್ಯಾರ್ಥಿಗಳ ಫೋನ್‌ಗಳಿಂದ ಎಲ್ಲಾ ಆಕ್ಷೇಪಾರ್ಹ ಫೋಟೋಗಳು ಮತ್ತು ವೀಡಿಯೊಗಳನ್ನು ಅಳಿಸಲಾಗಿದೆ ಎಂದು ಸಾಹ್ನಿ ಹೇಳಿದ್ದಾರೆ.
ಏತನ್ಮಧ್ಯೆ, ಗಾಜಿಪುರದ ಪೊಲೀಸ್ ಅಧೀಕ್ಷಕ ಓಂವೀರ್ ಸಿಂಗ್ ಅವರು ದೂರು ದಾಖಲಿಸಲಾಗಿದೆ ಎಂದು ಖಚಿತಪಡಿಸಿದ್ದಾರೆ. ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪ್ರಸ್ತುತ ಕೂಲಂಕಷ ತನಿಖೆ ನಡೆಸುತ್ತಿದ್ದಾರೆ.
ಆದಾಗ್ಯೂ, ಆರೋಪಿ ವಿದ್ಯಾರ್ಥಿಗಳ ಮೊಬೈಲ್ ಫೋನ್‌ಗಳಿಂದ ಯಾವುದೇ ಅಶ್ಲೀಲ ಫೋಟೋಗಳು ಅಥವಾ ವೀಡಿಯೊಗಳನ್ನು ವಶಪಡಿಸಿಕೊಳ್ಳಲಾಗಿಲ್ಲ ಎಂದು ಅವರು ಹೇಳಿದ್ದು, ಮೊಬೈಲ್ ಫೋನ್‌ಗಳು ಫಾರ್ಮ್ಯಾಟ್ ಆಗಿರಬಹುದು ಎಂದು ಊಹಿಸಿದ್ದಾರೆ.