ಉಡುಪಿ: ವಿಶ್ವ ಕಂಡ ಶ್ರೇಷ್ಠ ದಾರ್ಶನಿಕ, ರಾಷ್ಟ್ರೀಯ ಏಕತೆ ಮತ್ತು ಸಾಂಸ್ಕೃತಿಕ ಜಾಗೃತಿಯ ಪ್ರತೀಕ, ಯುವ ಜನತೆಯ ಪ್ರೇರಣಾ ಶಕ್ತಿ ಸ್ವಾಮಿ ವಿವೇಕಾನಂದರವರ ಜನ್ಮ ದಿನ ಜನವರಿ12. ಅಂದು ಆಚರಿಸಲ್ಪಡುವ ‘ರಾಷ್ಟ್ರೀಯ ಯುವ ದಿನಾಚರಣೆ’ಯ ಅಂಗವಾಗಿ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಉಡುಪಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ‘ಯುವ ಸಂಗಮ’ದಲ್ಲಿ ಭಾಗಿಯಾಗಲು ಉತ್ತರ ಪ್ರದೇಶದ ಜನಪ್ರಿಯ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಜೀ ಯವರು ಉಡುಪಿಗೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಬಿಜೆಪಿ ಯುವ ಮೋರ್ಚಾದ ಸಮ್ಮಿಲನದೊಂದಿಗೆ ನಡೆಯಲಿರುವ ಈ ಬೃಹತ್ ಸಮಾವೇಶದಲ್ಲಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಿಂದ ಸುಮಾರು 2 ಲಕ್ಷಕ್ಕೂ ಮಿಕ್ಕಿ ಯುವ ಮೋರ್ಚಾ ಪ್ರತಿನಿಧಿಗಳು ಮತ್ತು ಯುವ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸುವ ಗುರಿಯೊಂದಿಗೆ ರಾಜ್ಯದಲ್ಲಿ ಪುನರಪಿ ಬಿಜೆಪಿ ನೇತೃತ್ವದ ಸರಕಾರ ರಚಿಸುವಲ್ಲಿ ಯುವ ಮೋರ್ಚಾ ಪ್ರಮುಖ ಪಾತ್ರ ವಹಿಸಲಿದೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.