ಕಾರ್ಕಳ-ಬಂಟ್ವಾಳದಲ್ಲಿ ಉ.ಪ್ರ. ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಬೃಹತ್‌ ರೋಡ್‌ ಶೋ : ಹರಿದು ಬಂದ ಜನಸಾಗರ

ಕಾರ್ಕಳ : ಕರಾವಳಿಯ ಜಿಲ್ಲೆಗಳಾದ ಕಾರ್ಕಳ ಮತ್ತು ಬಂಟ್ವಾಳದಲ್ಲಿ ಉ.ಪ್ರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬೃಹತ್ ರೋಡ್ ನಡೆಸಿದರು. ಸುಮಾರು 15 ಸಾವಿರಕ್ಕೂ ಅಧಿಕ ಮಂದಿ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅವರನ್ನು ಸ್ವಾಗತಿಸಿ, ರೋಡ್ ಶೋದಲ್ಲಿ ಪಾಲ್ಗೊಂಡರು.

ಬಜರಂಗದಳದ ಸುದ್ದಿಗೇನಾದರೂ ಕಾಂಗ್ರೆಸ್ ಕೈ ಹಾಕಿದಲ್ಲಿ ಸಹಿಸುವ ಮಾತೇ ಇಲ್ಲ. ಬಜರಂಗದಳ ನಿಶೇಧ ಕುರಿತು ಕಾಂಗ್ರೆಸ್ ಯೋಚಿಸಿದ್ದು, ಅಂಥದ್ದೇನಾದರೂ ನಡೆಯದಂತೆ ಬಿಜೆಪಿಯನ್ನೇ ಜನರು ಆಯ್ಕೆ ಮಾಡಬೇಕು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಬಂಟ್ವಾಳಕ್ಕೆ ಸಮೀಪದ ಬಸ್ತಿಪಡ್ಪುವಿನ ವಿಶಾಲ ಮೈದಾನದಲ್ಲಿ ನಿರ್ಮಿಸಲಾದ ತಾತ್ಕಾಲಿಕ ಹೆಲಿಪ್ಯಾಡ್ ನಲ್ಲಿ ‌ಯೋಗಿ‌ ಆದಿತ್ಯನಾಥ್ ಆಗಮಿಸಿ ಬಳಿಕ ಕಾರಿನಲ್ಲಿ ರಸ್ತೆ ಮೂಲಕ ಬಿ.ಸಿ.ರೋಡಿನ ಕೈಕಂಬ‌ ಪೊಳಲಿ ದ್ವಾರದ ಬಳಿ ‌ತೆರಳಿ ಅಲ್ಲಿಂದ ತೆರೆದ ವಾಹನದಲ್ಲಿ ಬಸ್ ತಂಗುದಾಣದವರೆಗೆ ಸಾಗಿ ಬಂದರು. ಅಭ್ಯರ್ಥಿ ರಾಜೇಶ್ ನಾಯ್ಕ್ ಉಳೆಪಾಡಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ , ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಜೊತೆಗಿದ್ದರು.

ಕಾರ್ಕಳದಲ್ಲೂ ಭರ್ಜರಿ ರೋಡ್ ಶೋ

ಕಾರ್ಕಳದಲ್ಲಿ ಮಾತನಾಡಿದ ಅವರು, ಪ್ರಭು ಶ್ರೀರಾಮನ ಭಕ್ತನಾಗಿರುವ ಭಜರಂಗಿಯ ಜನ್ಮಸ್ಥಳಕ್ಕೆ ಬಂದಿದ್ದೇನೆ. ಹನುಮಂತನು ಶ್ರೀಲಂಕಾಕ್ಕೆ ಹೋಗಿ ಅಧರ್ಮದ ಕಾರ್ಯವನ್ನು ಸಮಾಪ್ತಿಗೊಳಿದಂತೆ ನೀವು ಕರ್ನಾಟಕದ ಕಾಂಗ್ರೆಸ್, ಜೆಡಿಎಸ್‌ ಪಕ್ಷಗಳ ಅಧರ್ಮಕ್ಕೆ ಪೂರ್ಣವಿರಾಮ ಹಾಕಬೇಕಿದೆ ಎಂದರು.

ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರಕಾರ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಭಾರತವು ಎಲ್ಲ ಕ್ಷೇತ್ರದಲ್ಲೂ ಅಭಿವೃದ್ದಿ ಹೊಂದುತ್ತಿದೆ. ಐಟಿ ಹಬ್ ಮೂಲಕ ಕರ್ನಾಟಕವೂ ಭಾರತದ ಅಭಿವೃದ್ಧಿಯಲ್ಲಿ ಮಹತ್ತರ ಕೊಡುಗೆ ನೀಡಿದೆ. ಕಾರ್ಕಳದ ಜನತೆ ಯಾವಾಗಲೂ ರಾಷ್ಟ್ರೀಯವಾದಕ್ಕೆ ಬೆಂಬಲ ನೀಡಿದ್ದೀರಿ. ಈ ಬಾರಿಯೂ ಬಿಜೆಪಿ ಅಭ್ಯರ್ಥಿ ಸುನಿಲ್‌ ಕುಮಾರ್‌ ಅವರಿಗೆ ಬೆಂಬಲ ನೀಡಿ ಗೆಲ್ಲಿಸಬೇಕೆಂದು ಯೋಗಿ ಮನವಿ ಮಾಡಿಕೊಂಡರು.

2024ರ ಜನವರಿಯಲ್ಲಿ ಅಯೋಧ್ಯೆಯ ರಾಮ ಮಂದಿರ ಲೋಕಾರ್ಪಣ

2024ರಲ್ಲಿ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯವು ಪೂರ್ಣಗೊಳ್ಳಲಿದೆ. ಅದರ ಲೋಕಾರ್ಪಣಾ ಕಾರ್ಯಕ್ರಮಕ್ಕೆ ತಮ್ಮೆಲ್ಲರನ್ನೂ ಆಮಂತ್ರಿಸುತ್ತಿದ್ದೇನೆ. ಈಗಾಗಲೇ ಕರ್ನಾಟಕ ರಾಜ್ಯದ ಭಕ್ತರಿಗೆ ಗೆಸ್ಟ್ ಹೌಸ್ ಸ್ಥಾಪಿಸಲು ಬಿ.ಎಸ್. ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿಯವರು ಅಯೋಧ್ಯೆ ಬಳಿ ಜಾಗ ಕಾಯ್ದಿರಿಸುವ ಕಾರ್ಯವನ್ನು ಮಾಡಿದ್ದಾರೆ. ಅದರ ನಿರ್ಮಾಣ ಕಾರ್ಯವೂ ಆರಂಭವಾಗಿದೆ ಎಂದರು.

Image

ಬಿಜೆಪಿ ರಾಜ್ಯಾ‍ಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಅಭ್ಯರ್ಥಿ ವಿ. ಸುನಿಲ್‌ ಕುಮಾರ್‌, ಬಿಜೆಪಿ ಮುಖಂಡರಾದ ಬೋಳ ಪ್ರಭಾಕರ್‌ ಕಾಮತ್‌, ಎಂ.ಕೆ. ವಿಜಯ ಕುಮಾರ್‌, ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಪ್ರಚಾರ ಸಮಿತಿ ಅಧ್ಯಕ್ಷ ಮಹೇಶ್‌ ಶೆಟ್ಟಿ ಕುಡುಪುಲಾಜೆ ಅವರು ಉಪಸ್ಥಿತರಿದ್ದರು.

ಯೋಗಿ ಆದಿತ್ಯನಾಥ್  ಕಾರ್ಕಳಕ್ಕೆ ಇದೇ ಮೊದಲ ಬಾರಿಗೆ ಕಾರ್ಕಳ ಆಗಮಿಸಿದ್ದರು. ಅನಂತಶಯನ ದೇವಾಲಯದಿಂದ ವೆಂಕಟರಮಣ ದೇವಸ್ಥಾನದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಸಹಸ್ರ ಸಂಖ್ಯೆಯಲ್ಲಿ ಜನ ಘೋಷಣೆ ಕೂಗುತ್ತ ಬಿಜೆಪಿ ಬಾವುಟವನ್ನು ಹಾರಿಸುತ್ತ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.