ಉಡುಪಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಇಂದು ಉಡುಪಿಯಲ್ಲಿ ದಿಢೀರ್ ಆಗಿ ಮಳೆ ಸುರಿದಿದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಶುರುವಾದ ಮಳೆಯೂ ಒಂದು ತಾಸುಗಳ ಕಾಲ ಎಡೆಬಿಡದೆ ಸುರಿದಿದೆ.
ಏಕಾಏಕಿಯಾಗಿ ಸುರಿದ ಮಳೆಯಿಂದ ಸಾರ್ವಜನಿಕರು ಪರದಾಡುವಂತಾಯಿತು. ಭಾನುವಾರ ಆಗಿದ್ದರಿಂದ ಸಭೆ, ಸಮಾರಂಭ, ಶಾಪಿಂಗ್ ಗಳಿಗೆ ಹೋಗಿದ್ದ ಜನರಿಗೆ ವರುಣನ ಕಾಟ ಎದುರಿಸುವಂತಾಯಿತು. ದ್ವಿಚಕ್ರ ವಾಹನ ಸವಾರರು, ಸಾರ್ವಜನಿಕರು ಮಳೆಯಲ್ಲಿ ನೆನೆದುಕೊಂಡು ಹೋಗುತ್ತಿರುವ ದಶ್ಯ ನಗರದ ಅಲ್ಲಾಲ್ಲಿ ಕಂಡುಬಂತು.
ಕಳೆದ ಎರಡು ದಿನಗಳಿಂದಲೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಆದರೆ ಇಂದು ಉಡುಪಿಯಲ್ಲಿ ದಿಢೀರ್ ಆಗಿ ಮಳೆಯಾಗಿದೆ. ಬೆಳಿಗ್ಗಿನಿಂದ ಬಿಸಿಲಿನಿಂದ ಕೂಡಿದ್ದ ವಾತಾವರಣ ಮಧ್ಯಾಹ್ನ ಆಗುತ್ತಿದ್ದಂತೆ ಮೋಡದಿಂದ ಮುಸಿಕಿತ್ತು.
ಉಡುಪಿ ನಗರ ಸಹಿತ ಮಣಿಪಾಲ, ಬ್ರಹ್ಮಾವರ, ಕುಂದಾಪುರ, ಕಾಪು, ಕಾರ್ಕಳ, ಹೆಬ್ರಿ ತಾಲೂಕಿನ ಹಲವೆಡೆ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.












