ಉಡುಪಿ: ಕೌಶಲ್ಯ ಶಿಕ್ಷಣಕ್ಕೆ ಈಗಾಗಲೇ ಪ್ರಸಿದ್ಧಿ ಪಡೆದಿರುವ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯು ಇದೀಗ ಕರಾವಳಿ ಕರ್ನಾಟಕದ ಯುವಕ ಯುವತಿಯರಿಗೆ ಉತ್ತಮ ಉದ್ಯೋಗಾವಕಾಶ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಡಿಜಿಟಲ್ ಇಕಾನಮಿ ಮಿಷನ್ ( ಕೆ-ಡೆಮ್) ನೊಂದಿಗೆ ಮಂಗಳೂರಿನಲ್ಲಿ ಆಯೋಜನೆಗೊಂಡಿದ್ದ “ಟೆಕ್ನೋವಾಂಜ 3.0” ಮೇಳದಲ್ಲಿ ಒಪ್ಪಂದ ಮಾಡಿಕೊಂಡಿದೆ.
ಈ ಒಪ್ಪಂದದಂತೆ ಕರಾವಳಿ ಕರ್ನಾಟಕದಲ್ಲಿ ಅನೇಕ ಐಟಿ, ಬಿಟಿ, ಫಿನ್ ಟೆಕ್ ತಂತ್ರಜ್ಞಾನ ಸಂಬಂಧಿತ ಕಂಪೆನಿಗಳನ್ನು ಸ್ಥಾಪಿಸಲು ಕೆ-ಡೆಮ್ ಪ್ರಯತ್ನಿಸುತ್ತಿದ್ದು, ಈ ಕಂಪೆನಿಗಳಲ್ಲಿ ಸ್ಥಳೀಯರಿಗೆ
ಉತ್ತಮ ಉದ್ಯೋಗಾವಕಾಶ ಸೃಷ್ಟಿಸಲು ಉನ್ನತಿ ಸಂಸ್ಥೆಯ ಮೂಲಕ
ಕೌಶಲ್ಯ ತರಬೇತಿಗಳನ್ನು ನೀಡಲಿದೆ. ಇದಲ್ಲದೇ ಹೊಸ ತಂತ್ರಜ್ಞಾನ ಆಧಾರಿತ ಉದ್ದಿಮೆಗಳನ್ನು ಸ್ಥಾಪಿಸಲು ಆಸಕ್ತರಿರುವ ಯುವಕ ಯುವತಿಯರಿಗೂ ಉನ್ನತಿ ಸಂಸ್ಥೆಯು ಅನುಭವಿ ಮಾರ್ಗದರ್ಶಕರ ಮೂಲಕ ವಿವಿಧ ರೀತಿಯ ಸಹಕಾರವನ್ನೂ ನೀಡಲಿದೆ. ಈ ಒಪ್ಪಂದವು ಬೆಂಗಳೂರಿನ ನಂತರದ ಐಟಿ ಹಬ್ ಆಗಲು ಹೊರಟಿರುವ ಕರಾವಳಿ ಜಿಲ್ಲೆಗಳ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ವೇದಿಕೆಯಾಗಿ ಹೊರಹೊಮ್ಮಲಿದ್ದು, ಇದರ ಸದುಪಯೋಗವನ್ನು ಜಿಲ್ಲೆಯ ಕಾಲೇಜುಗಳು, ಉದ್ಯೋಗಾಕಾಂಕ್ಷಿ ಯುವಕ ಯುವತಿಯರು ಹಾಗೂ ಉದ್ಯಮಿಗಳು ಪಡೆದುಕೊಳ್ಳಬೇಕೆಂದು
ಸಂಸ್ಥೆಯ ಸ್ಥಾಪಕರಾದ ಪ್ರೇಮ್ ಪ್ರಸಾದ್ ಶೆಟ್ಟಿಯವರು ತಿಳಿಸಿದ್ದಾರೆ.
ಸಮಾರಂಭದಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೆಗೌಡ, ಐಟಿ ಬಿಟಿ ಪ್ರಧಾನ ಕಾರ್ಯದರ್ಶಿಗಳಾದ ಡಾ.ಏಕರೂಪ್ ಕೌರ್, ಕೆಡೆಮ್ ಸಿಇಒ ಸಂಜೀವ ಗುಪ್ತ, ಟೈ ಮಂಗಳೂರು ಚೇರ್ಮನ್ ರೋಹಿತ್ ಭಟ್, ಇನ್ನಿತರರು ಉಪಸ್ಥಿತರಿದ್ದರು.