ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿ ವತಿಯಿಂದ ವಿದ್ಯಾರ್ಥಿಗಳಿಗಾಗಿ ವಿಚಾರ ಸಂಕಿರಣ

ಉಡುಪಿ: ಕೌಶಲ್ಯಾಭಿವೃದ್ಧಿ ತರಬೇತಿಗಳಿಗೆ ಪ್ರಸಿದ್ಧ ಸಂಸ್ಥೆಯಾಗಿರುವ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ತರಬೇತಿ ಪಾಲುದಾರ ಸಂಸ್ಥೆಯಾದ ಉನ್ನತಿ ಕೆರಿಯರ್ ಅಕಾಡೆಮಿಯಲ್ಲಿ ಶನಿವಾರದಂದು
‘ಬಿಎಫ್ಎಸ್ಐ ಕ್ಷೇತ್ರದ ಭವಿಷ್ಯ ಮತ್ತು ಉದ್ಯೋಗಾವಕಾಶಗಳು’ ಕುರಿತ ವಿಷಯದ ಬಗ್ಗೆ ವಿಚಾರ ಸಂಕಿರಣ ಆಯೋಜಿಸಲಾಗಿತ್ತು.

ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಮಣಿಪಾಲ್ ಬಿಸಿನೆಸ್ ಸೊಲ್ಯೂಷನ್ಸ್ ನ ಆಪರೇಷನ್ಸ್ ಮ್ಯಾನೇಜರ್ ಶ್ರೀಮತಿ ಆರತಿ ಮಾತನಾಡಿ, “ಅತಿ ವೇಗವಾಗಿ ಬೆಳೆಯುತ್ತಿರುವ ಬಿಎಫ್ಎಸ್ಐ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ವಿಪುಲ ಉದ್ಯೋಗವಕಾಶಗಳಿವೆ. ಆದರೆ ವಿದ್ಯಾರ್ಥಿಗಳು ಪದವಿ ಮತ್ತು ಸ್ನಾತಕೋತ್ತರ ಪದವಿ ಹೊಂದಿದರಷ್ಟೇ ಸಾಲದು. ಇಂದಿನ ಆಧುನಿಕ ಬ್ಯಾಂಕಿಂಗ್- ಫೈನಾನ್ಶಿಯಲ್ ಕ್ಷೇತ್ರಗಳಲ್ಲಿ ಕೆವೈಸಿ , ಆಂಟಿ ಮನಿ ಲಾಂಡರಿಂಗ್ , ಕಸ್ಟಮರ್ ಸರ್ವಿಸ್, ಡಿಜಿಟಲ್ ಬ್ಯಾಂಕಿಂಗ್ ಹೀಗೆ ಅನೇಕ ಸ್ಪೆಶಲಿಸ್ಟ್ ವಿಷಯಗಳಲ್ಲಿ ಪರಿಣಿತಿ ಹೊಂದುವುದು ಅತಿ ಅವಶ್ಯಕವಾಗಿದೆ. ಈ ರೀತಿಯ ಸ್ಪೆಶಲಿಸ್ಟ್ ಕೋರ್ಸ್ ಗಳನ್ನು ಉನ್ನತಿ ಸಂಸ್ಥೆಯು ಬಿಎಫ್ಎಸ್ಐ ಕ್ಷೇತ್ರದ ಅನುಭವಿ ತಜ್ಞರ ಮೂಲಕ ತಯಾರಿಸಿ ವಿದ್ಯಾರ್ಥಿಗಳಿಗೆ ನೀಡುತ್ತಿರುವುದು ಉತ್ತಮ ಅವಕಾಶ” ಎಂದರು.

ಸಮಾರೋಪದಲ್ಲಿ ಮಾತನಾಡಿದ ಸಂಸ್ಥೆಯ ಸ್ಥಾಪಕ ಪ್ರೇಮ್ ಪ್ರಸಾದ್ ಶೆಟ್ಟಿ, ಕಾಲೇಜು ಶಿಕ್ಷಣದೊಂದಿಗೆ ವಿವಿಧ ಕ್ಷೇತ್ರದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವವೂ ಸಿಗುವಂತಾಗಬೇಕು. ತಮ್ಮ ಓದಿನ ಕ್ಷೇತ್ರದ ಯಾವುದಾದರೊಂದು ವಿಷಯದಲ್ಲಿ ಸ್ಪೆಶಲಿಸ್ಟ್ ಗಳಾಗಿ. ಉದ್ಯೋಗಾವಕಾಶ ಪಡೆಯಲು ನಮ್ಮ ಸಂಸ್ಥೆ ವೃತ್ತಿ ಮಾರ್ಗದರ್ಶನದೊಂದಿಗೆ ಉತ್ತಮ ತರಬೇತಿಯನ್ನೂ ಆಯೋಜಿಸುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಪೌರ್ಣಮಿ ಪ್ರೇಮ್ ಶೆಟ್ಟಿ, ತರಬೇತುದಾರರಾದ ನವೀನ್ ನಾಯಕ್, ಐನೀಶ್, ಸುಪ್ರೀತ, ಲಾಕ್ಸಿನ್, ರಾಜೇಶ್, ಯೋಗಿತ ಉಪಸ್ಥಿತರಿದ್ದರು. ಈ ವಿಚಾರ ಸಂಕಿರಣದಲ್ಲಿ ಸೈಂಟ್ ಮೆರಿಸ್ ಶಿರ್ವ, ಯುಪಿಎಂಸಿ, ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಕಾಲೇಜು, ಪಿಪಿಸಿ ಕಾಲೇಜು, ತೆಂಕನಿಡಿಯೂರು ಸ.ಪ್ರ ಕಾಲೇಜು, ಬಿ.ಡಿ.ಶೆಟ್ಟಿ ಮುಂತಾದ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶ್ನೋತ್ತರ ಅವಧಿಯಲ್ಲಿ ಪಾಲ್ಗೊಂಡರು.