ಅನ್ ಲಾಕ್ 4.0 ಮಾರ್ಗಸೂಚಿ ಪ್ರಕಟ: ಸೆ. 7ರಿಂದ ಮೆಟ್ರೋ ಆರಂಭ, ಶಾಲಾ ಕಾಲೇಜುಗಳಿಗಿಲ್ಲ ಅನುಮತಿ

ನವದೆಹಲಿ: ಕೇಂದ್ರ ಸರ್ಕಾರ ಅನ್ ಲಾಕ್ 4.0 ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದ್ದು, ಸೆಪ್ಟೆಂಬರ್ 7ರಿಂದ ಮೆಟ್ರೋ ಸಂಚಾರಕ್ಕೆ ಅನುಮತಿ ನೀಡಿದೆ. ಉಳಿದಂತೆ ಶಾಲಾ ಕಾಲೇಜು, ಚಿತ್ರಮಂದಿರ, ಈಜುಕೊಳ, ಮನೋರಂಜನಾ ಪಾರ್ಕ್ ಗಳಿಗೆ ವಿಧಿಸಿರುವ ನಿರ್ಬಂಧವನ್ನು ಮುಂದುವರಿಸಿದೆ.

ಹೊಸ ಮಾರ್ಗಸೂಚಿಯಂತೆ ಸೆ.​​ 7ರಿಂದ ಕರ್ನಾಟಕದ ಬೆಂಗಳೂರು ಸೇರಿದಂತೆ ದೇಶದಾದ್ಯಂತ ಮೆಟ್ರೋ ರೈಲು ಸಂಚಾರ ಆರಂಭಗೊಳ್ಳಲಿದೆ. ಆದರೆ, ಸೆಪ್ಬೆಂಬರ್‌ ತಿಂಗಳ ಅಂತ್ಯದವರೆಗೂ ಶಾಲಾ, ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಮಾರ್ಗಸೂಚಿಯ ಪ್ರಮುಖ ಅಂಶಗಳು:
* ಸೆಪ್ಟೆಂಬರ್‌ 21ರಿಂದ ಬಯಲು ರಂಗ ಮಂದಿರಗಳನ್ನು ಆರಂಭಿಸಬಹುದು
*ಆನ್‌ಲೈನ್‌ ತರಗತಿಗಳನ್ನು ನಡೆಸಲು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳಿಗೆ ಅನುಮತಿ. ಶೇ. 50ರಷ್ಟು  ಸಿಬ್ಬಂದಿಗೆ ಶಾಲಾ-ಕಾಲೇಜುಗಳಲ್ಲಿ ಅವಕಾಶ
*ಸಾಮಾಜಿಕ, ಶೈಕ್ಷಣಿಕ, ಕ್ರೀಡೆ, ಮನರಂಜನೆ, ಸಾಂಸ್ಕೃತಿಕ, ಧಾರ್ಮಿಕ ಮತ್ತು ರಾಜಕೀಯ ಕಾರ್ಯಕ್ರಮಗಳಲ್ಲಿ 100 ಜನರವರೆಗೆ ಸೇರಲು ಅನುಮತಿ ನೀಡಲಾಗಿದೆ. ಸೆಪ್ಟೆಂಬರ್‌ 21ರಿಂದ ಇದು ಅನ್ವಯವಾಗಲಿದೆ.
*ಸೆಪ್ಟೆಂಬರ್ 30ರವರೆಗೂ ಕಂಟೈನ್‌ಮೆಂಟ್‌ ಝೋನ್‌ಗಳಲ್ಲಿ ಕಠಿಣ ಲಾಕ್‌ಡೌನ್‌ ಮುಂದುವರಿಯಲಿದೆ.
*ಸಿನಿಮಾ ಮಂದಿರ, ಈಜುಕೊಳ, ಮನರಂಜನಾ ಪಾರ್ಕ್‌ಗಳು, ಒಳಾಂಗಣ ರಂಗಮಂದಿರಗಳು, ಅಂತಾರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ ಅವಕಾಶವಿಲ್ಲ.