ಅಪರಿಚಿತ ವ್ಯಕ್ತಿಗಳ ಗುಂಡಿಗೆ ಮತ್ತೊಬ್ಬ ಭಯೋತ್ಪಾದಕ ಬಲಿ: ಎಲ್‌ಇಟಿ ಕಮಾಂಡರ್ ಹತ್ಯೆಗೈದ ಅಪರಿಚಿತ ಗನ್ ಮ್ಯಾನ್ ಗಳು

ಕರಾಚಿ: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಲಷ್ಕರ್-ಎ-ತೈಬಾ (ಎಲ್‌ಇಟಿ) ಕಮಾಂಡರ್ ಅಕ್ರಮ್ ಖಾನ್ ಘಾಜಿಯನ್ನು ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಘಾಜಿ ಹತ್ಯೆಯ ತನಿಖೆಗಾಗಿ ಪಾಕಿಸ್ತಾನದ ಏಜೆನ್ಸಿಗಳು ಸ್ಥಳೀಯ ವಿರೋಧಿಗಳ ಪಾತ್ರವನ್ನು ಮತ್ತು ಎಲ್ಇಟಿಯೊಳಗಿನ ಜಗಳಗಳನ್ನು ಪರಿಶೀಲಿಸುತ್ತಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಘಾಜಿ ಎಲ್‌ಇಟಿಯ ಕೇಂದ್ರ ನೇಮಕಾತಿ ಸೆಲ್‌ನ ಪ್ರಮುಖ ಸದಸ್ಯನಾಗಿದ್ದ ಮತ್ತು ಕಾಶ್ಮೀರ ಕಣಿವೆಯೊಳಗೆ ಭಯೋತ್ಪಾದಕರನ್ನು ನುಸುಳಿಸುವ ಜವಾಬ್ದಾರಿಯನ್ನು ಹೊಂದಿದ್ದ ಎನ್ನಲಾಗಿದೆ.

ಘಾಜಿಯ ಹತ್ಯೆಯು ಲಷ್ಕರ್‌ನ ಉನ್ನತ ಕಾರ್ಯಕರ್ತನ ಮೂರನೇ ಹತ್ಯೆಯಾಗಿದೆ ಮತ್ತು ಈ ವರ್ಷ ಗಡಿಯಾಚೆಯಿಂದ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆಯ ಉನ್ನತ ಕಮಾಂಡರ್‌ ಗಳ ಆರನೇ ಹತ್ಯೆಯಾಗಿದೆ.

2018 ರ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ಖ್ವಾಜಾ ಶಾಹಿದ್ ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆಯ ಬಳಿ ಶಿರಚ್ಛೇದಿತ ಸ್ಥಿತಿಯಲ್ಲಿ ಪತ್ತೆಯಾಗಿದ್ದ.ಧಾಂಗ್ರಿ ಭಯೋತ್ಪಾದನಾ ದಾಳಿಯ ಹಿಂದಿನ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ರಿಯಾಜ್ ಅಹ್ಮದ್ ಅಲಿಯಾಸ್ ಅಬು ಖಾಸಿಂನನ್ನು ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮಸೀದಿಯೊಂದರಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದರು.

ಮಾರ್ಚ್‌ನಲ್ಲಿ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಿಷೇಧಿತ ಹಿಜ್ಬುಲ್ ಮುಜಾಹಿದ್ದೀನ್‌ನ ಉನ್ನತ ಕಮಾಂಡರ್‌ನನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಫೆಬ್ರವರಿಯಲ್ಲಿ, ಬಂದರು ನಗರವಾದ ಕರಾಚಿಯಲ್ಲಿ ಅಪರಿಚಿತ ಬಂದೂಕುಧಾರಿಗಳು ಅಲ್-ಬದ್ರ್ ಮುಜಾಹಿದ್ದೀನ್ ಮಾಜಿ ಕಮಾಂಡರ್ ಸೈಯದ್ ಖಾಲಿದ್ ರಜಾ ನನ್ನು ಗುಂಡಿಕ್ಕಿ ಕೊಂದಿದ್ದರು. ಜಾಗತಿಕ ಭಯೋತ್ಪಾದನಾ ಗುಂಪು ಇಸ್ಲಾಮಿಕ್ ಸ್ಟೇಟ್‌ನ ಉನ್ನತ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಾಶ್ಮೀರಿ ಭಯೋತ್ಪಾದಕ ಐಜಾಜ್ ಅಹ್ಮದ್ ಅಹಂಗರ್ ನನ್ನು ತಾಲಿಬಾನ್ ಹತ್ಯೆಗೈದಿತ್ತು.

2020 ರಲ್ಲಿ ಭಾರತದಿಂದ ಗೊತ್ತುಪಡಿಸಿದ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟ ಹರ್ದೀಪ್ ಸಿಂಗ್ ನಿಜ್ಜರ್ ನನ್ನು ಜೂನ್‌ನಲ್ಲಿ ಕೆನಡಾದ ಸರ್ರೆಯಲ್ಲಿ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುರುದ್ವಾರದ ಹೊರಗೆ ಗುಂಡಿಕ್ಕಿ ಕೊಂದಿದ್ದರು.