ವಿಶ್ವಸಂಸ್ಥೆ: ಇಸ್ರೇಲ್- ಹಮಾಸ್ ಯುದ್ಧದಲ್ಲಿ ತಕ್ಷಣದ ಮಾನವೀಯ ಕದನ ವಿರಾಮಕ್ಕೆ ಒತ್ತಾಯಿಸಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್ಜಿಎ) ಈಜಿಪ್ಟ್ ಮಂಡಿಸಿದ ಕರಡು ನಿರ್ಣಯದ ಪರವಾಗಿ ಭಾರತ ಮತ ಚಲಾಯಿಸಿದೆ.ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ತಕ್ಷಣದ ಮಾನವೀಯ ಕದನ ವಿರಾಮ ಮತ್ತು ಎಲ್ಲಾ ಒತ್ತೆಯಾಳುಗಳನ್ನು ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸುವ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಕರಡು ನಿರ್ಣಯದ ಪರವಾಗಿ ಭಾರತ ಮತ ಹಾಕಿದೆ.
ಅಲ್ಜೀರಿಯಾ, ಬಹ್ರೇನ್, ಇರಾಕ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಪ್ಯಾಲೆಸ್ಟೈನ್ ಪರವಾದ ನಿರ್ಣಯವು ಗಾಜಾದಲ್ಲಿ ತಕ್ಷಣದ ಮಾನವೀಯ ಕದನ ವಿರಾಮವನ್ನು ಒತ್ತಾಯಿಸಿದೆ. ಎಲ್ಲಾ ರಾಷ್ಟ್ರಗಳು ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ತಮ್ಮ ಬಾಧ್ಯತೆಗಳನ್ನು ಅನುಸರಿಸಬೇಕು, ವಿಶೇಷವಾಗಿ ನಾಗರಿಕರ ರಕ್ಷಣೆಗೆ ಸಂಬಂಧಿಸಿದಂತೆ ತನ್ನ ಬೇಡಿಕೆಯನ್ನು ಪುನರುಚ್ಚರಿಸಲಾಯಿತು. ಮಾನವೀಯ ದೃಷ್ಟಿಯಿಂದ ಎಲ್ಲಾ ಒತ್ತೆಯಾಳುಗಳನ್ನು ತಕ್ಷಣವೇ ಮತ್ತು ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗಿದೆ.
ನಿರ್ಣಯದ ಪರ 153 ಮತಗಳ ಚಲಾವಣೆ: ಮಂಗಳವಾರ, 193 ಸದಸ್ಯರ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯ ತುರ್ತು ವಿಶೇಷ ಅಧಿವೇಶನದಲ್ಲಿ ಈಜಿಪ್ಟ್ ಪರಿಚಯಿಸಿದ ಕರಡು ನಿರ್ಣಯವನ್ನು ಅಂಗೀಕರಿಸಲಾಯಿತು. ಈ ನಿರ್ಣಯದ ಪರವಾಗಿ 153 ಮತಗಳು ಬಿದ್ದಿವೆ. ಆದರೆ, 23 ರಾಷ್ಟ್ರಗಳು ಗೈರು ಹಾಜರಾದವು. 10 ದೇಶಗಳು ಕರಡು ನಿರ್ಣಯದ ವಿರುದ್ಧ ಮತ ಚಲಾಯಿಸಿವೆ.
ಅಕ್ಟೋಬರ್ನಲ್ಲಿ, ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ತಕ್ಷಣದ ಮಾನವೀಯ ದೃಷ್ಟಿಯಿಂದ ಕದನ ವಿರಾಮ ಹಾಗೂ ಗಾಜಾ ಪಟ್ಟಿಯಲ್ಲಿ ಅಡೆತಡೆಯಿಲ್ಲದ ಮಾನವೀಯ ಪ್ರವೇಶಕ್ಕೆ ಕರೆ ನೀಡಿದ ನಿರ್ಣಯಕ್ಕೆ ಭಾರತವು ಸಾಮಾನ್ಯ ಸಭೆಯಿಂದ ದೂರ ಉಳಿದಿತ್ತು. ಜೋರ್ಡಾನ್-ಕರಡು ನಿರ್ಣಯವು ಗಾಜಾ ಪಟ್ಟಿಯಾದ್ಯಂತ ನಾಗರಿಕರಿಗೆ ತಕ್ಷಣದ, ನಿರಂತರವಾಗಿ ಮತ್ತು ಅಡೆತಡೆಯಿಲ್ಲದ ಅಗತ್ಯ ಸರಕುಗಳು ಮತ್ತು ಸೇವೆಗಳನ್ನು ಒದಗಿಸುವಂತೆ ಒತ್ತಾಯಿಸಿದೆ.
ಯುಎನ್ ಭದ್ರತಾ ಮಂಡಳಿ: ಇಸ್ರೇಲ್-ಹಮಾಸ್ ಸಂಘರ್ಷದ ಕುರಿತು ನಿರ್ಣಯವನ್ನು ಅಂಗೀಕರಿಸಲು ಯುಎನ್ ಭದ್ರತಾ ಮಂಡಳಿಯ 15 ರಾಷ್ಟ್ರಗಳು, ಮಂಗಳವಾರ ಯುಎನ್ಜಿಎಯಲ್ಲಿ ಮತ ಚಲಾಯಿಸಿದವು. ಯುನೈಟೆಡ್ ಅರಬ್ ಎಮಿರೇಟ್ಸ್ ಮಂಡಿಸಿದ ಯುಎನ್ಎಸ್ಸಿ ನಿರ್ಣಯಕ್ಕೆ 90ಕ್ಕೂ ಹೆಚ್ಚು ಸದಸ್ಯ ರಾಷ್ಟ್ರಗಳು ಬೆಂಬಲಿಸಿವೆ. ಯುನೈಟೆಡ್ ಕಿಂಗ್ಡಮ್ ದೂರವಿದ್ದರೂ ಕೂಡ ಅದರ ಪರವಾಗಿ 13 ರಾಷ್ಟ್ರಗಳು ಮತಗಳ ಚಲಾಯಿಸಿವೆ.
ಈ ನಿರ್ಣಯದಲ್ಲಿ ಹಮಾಸ್ ಅನ್ನು ಹೆಸರಿಸಲಿಲ್ಲ, ಜೊತೆಗೆ ಅಮೆರಿಕ ಕರಡು ನಿರ್ಣಯಕ್ಕೆ ತಿದ್ದುಪಡಿ ಮಾಡುವಂತೆ ಪ್ರಸ್ತಾಪಿಸಿದೆ. 7 ಅಕ್ಟೋಬರ್ 2023 ರಂದು ಇಸ್ರೇಲ್ನಲ್ಲಿ ಹಮಾಸ್ ಕಡೆಯವರು ನಡೆಸಿದ ಭೀಕರ ದಾಳಿ ಮತ್ತು ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಂಡಿರುವ ಕ್ರಮವನ್ನು ಖಂಡಿಸುವ ನಿರ್ಣಯಕ್ಕೂ ಭಾರತ ಪರವಾಗಿ ಮತ ಚಲಾಯಿಸಿದೆ.
ಗಾಜಾದಲ್ಲಿನ ಆರೋಗ್ಯ ಸಚಿವಾಲಯದ ಪ್ರಕಾರ, ಗಾಜಾದಲ್ಲಿ ಇದುವರೆಗೆ ಕನಿಷ್ಠ 18,205 ಪ್ಯಾಲೆಸ್ತಿನಿಯರು ಸಾವನ್ನಪ್ಪಿದ್ದಾರೆ. ಅವರಲ್ಲಿ ಸುಮಾರು 70 ಪ್ರತಿಶತದಷ್ಟು ಮಹಿಳೆಯರು ಮತ್ತು ಮಕ್ಕಳೇ ಇದ್ದಾರೆ ಎಂದು ಹೇಳಲಾಗುತ್ತದೆ. ಸುಮಾರು 49,645 ಜನರು ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಕಚೇರಿ ವರದಿ ತಿಳಿಸಿದೆ.ಅಕ್ಟೋಬರ್ 7ರಂದು ಹಮಾಸ್ ಮತ್ತು ಇತರ ಪ್ಯಾಲೇಸ್ತಿನಿಯನ್ ಸಶಸ್ತ್ರ ಗುಂಪುಗಳು ನಡೆಸಿದ ದಾಳಿಯಲ್ಲಿ ಇಸ್ರೇಲ್ನ 33 ಮಕ್ಕಳು ಸೇರಿದಂತೆ 1,200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಹಾಗೂ ಸಾವಿರಾರು ಜನರು ಗಾಯಗೊಂಡಿದ್ದರು.