ರೈತರ ಮೇಲೆ ಕೇಂದ್ರ ಸಚಿವರ ಪುತ್ರ ಕಾರು ಹರಿಸಿದ ಆರೋಪ: 8 ಮಂದಿ ಮೃತ್ಯು

ಲಖನೌ: ಇಲ್ಲಿನ ಲೆಖಿಂಪುರ್ ಖೆರಿ ಬಳಿ ರೈತರು ನಡೆಸುತ್ತಿದ್ದ ಪ್ರತಿಭಟನೆ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ.

ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ ಅವರ ಭೇಟಿಯ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ
ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರ ಬೆಂಗಾವಲು ಪಡೆಯ ಎರಡು ಎಸ್‌ಯುವಿ ಕಾರುಗಳು ರೈತರ ಮೇಲೆ ಹರಿಯಿತು. ಇದರಿಂದ ನಾಲ್ವರು ರೈತರು ಬಲಿಯಾದರು. ಆಕ್ರೋಶಗೊಂಡ ರೈತರು ಎರಡೂ ಎಸ್‌ಯುವಿಗಳನ್ನು ತಡೆದು ನಿಲ್ಲಿಸಿ, ಅವುಗಳಿಗೆ ಬೆಂಕಿ ಹಚ್ಚಿದರು. ಈ ಎಸ್‌ಯುವಿಗಳಲ್ಲಿ ಇದ್ದವರಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಲಖಿಂಪುರ್‌–ಖೇರಿ ಜಿಲ್ಲಾಧಿಕಾರಿ ಅರವಿಂದ ಕುಮಾರ್‌ ಚೌರಾಸಿಯಾ ತಿಳಿಸಿದ್ದಾರೆ.

ಕಾರು ಹರಿಸಿ ಹತ್ಯೆ: ಆರೋಪ
ಅಜಯ್‌ ಮಿಶ್ರಾ ಅವರ ಮಗನೇ ಒಂದು ಎಸ್‌ಯುವಿ ಚಾಲನೆ ಮಾಡಿದ್ದರು. ಅವರೇ ಕಾರು ಹರಿಸಿ ರೈತರನ್ನು ಹತ್ಯೆ ಮಾಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಆದರೆ ಅಜಯ್‌ ಮಿಶ್ರಾ ಅವರು ಈ ಆರೋಪವನ್ನು ಅಲ್ಲಗಳೆದಿದ್ದಾರೆ.

ಮೌರ್ಯ ಅವರು ಬಂಬಿರ್‌ಪುರ ಗ್ರಾಮಕ್ಕೆ ಭೇಟಿ ಕೊಡುವ ಕಾರ್ಯಕ್ರಮ ಇತ್ತು. ಇದು ಸಚಿವ ಅಜಯ್‌ ಮಿಶ್ರಾ ಅವರ ಊರು. ಮೌರ್ಯ ಅವರ ಭೇಟಿಯನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದರು.
ಸಚಿವ ಮಿಶ್ರಾ ಅವರ ಮಗ ಚಲಾಯಿಸಿದ ಕಾರಿನ ಅಡಿಗೆ ಸಿಲುಕಿ ಮೂವರು ರೈತರು ಮೃತಪಟ್ಟಿದ್ದಾರೆ ಎಂದು ಭಾರತೀಯ ಕಿಸಾನ್‌ ಯೂನಿಯನ್‌ (ಬಿಕೆಯು) ಟ್ವೀಟ್‌ ಮಾಡಿದೆ.

ಗಾಜಿಪುರ ಗಡಿಯಲ್ಲಿ ಪ್ರತಿಭಟನೆ ನಡೆಯುತ್ತಿರುವ ಸ್ಥಳದಲ್ಲಿದ್ದ ಬಿಕೆಯು ನಾಯಕ ರಾಕೇಶ್‌ ಟಿಕಾಯತ್‌ ಅವರು ಲಖಿಂಪುರ್‌–ಖೇರಿಗೆ ಧಾವಿಸಿದ್ದಾರೆ.