ಉಡುಪಿ: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆಶಯದಂತೆ ನೂತನ ಕೇಂದ್ರ ಸಚಿವರನ್ನು ಪರಿಚಯಿಸುವ ಮತ್ತು ಸರಕಾರದ ವಿವಿಧ ಜನಪರ ಯೋಜನೆಗಳನ್ನು ಪ್ರಚಲಿತಗೊಳಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಜನಾಶೀರ್ವಾದ ಯಾತ್ರೆ ನಡೆಯಲಿದೆ.
ಇದೇ ಆಗಸ್ಟ್ 18ರಂದು ನೂತನ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆಯವರ ನೇತೃತ್ವದಲ್ಲಿ ಉಡುಪಿ ಜಿಲ್ಲೆಗೆ ಜನಾಶೀರ್ವಾದ ಯಾತ್ರೆ ಆಗಮಿಸಲಿದ್ದು, ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಹೆಬ್ರಿಯಲ್ಲಿ ಯಾತ್ರೆಯನ್ನು ಸ್ವಾಗತಿಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಆಗಸ್ಟ್ 19ರಂದು ಬೆಳಿಗ್ಗೆ 11ಗಂಟೆಗೆ ಉಡುಪಿ ಪುರಭವನದಲ್ಲಿ ಜನಾಶೀರ್ವಾದ ಯಾತ್ರೆ ಸಮಾವೇಶ ಹಾಗೂ ನೂತನ ಕೇಂದ್ರ ಸಚಿವರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ.
ಜನಾಶೀರ್ವಾದ ಯಾತ್ರೆಯ ವಿವರ:
ಆಗಸ್ಟ್ 18ರ ಬುಧವಾರ ಸಂಜೆ 5.30ಕ್ಕೆ: ಹೆಬ್ರಿಯಲ್ಲಿ ಸ್ವಾಗತ, 6ಕ್ಕೆ ಪೆರ್ಡೂರಿನಲ್ಲಿ, 6.15ಕ್ಕೆ: ಹಿರಿಯಡಕದಲ್ಲಿ ಸ್ವಾಗತಿಸಲಾಗುವುದು. ಸಂಜೆ 7ಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಪದಾಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ. ಸಂಜೆ 7.30ಕ್ಕೆ ಬಿಜೆಪಿ ಜಿಲ್ಲಾ ಕೋರ್ ಕಮಿಟಿ ಸಭೆ ನಡೆಯಲಿದೆ.
ಆಗಸ್ಟ್ 19ರ ಗುರುವಾರ ಬೆಳಿಗ್ಗೆ 8ಗಂಟೆಗೆ ಸಚಿವೆ ಶೋಭಾ ಕರಂದ್ಲಾಜೆ ಅವರು, ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುವರು. 8.30ಕ್ಕೆ ಸ್ವಾಮೀಜಿಯವರ ದರ್ಶನ ಪಡೆಯುವರು. 10ಕ್ಕೆ ಉಡುಪಿ ಅಜ್ಜರಕಾಡು ಸೈನಿಕರ ಹುತಾತ್ಮ ಸ್ಮಾರಕದಲ್ಲಿ ಪುಷ್ಪಾರ್ಚನೆ. ಬೆಳಿಗ್ಗೆ 11ಕ್ಕೆ ಉಡುಪಿ ಪುರಭವನದಲ್ಲಿ ನಡೆಯುವ ‘ಜನಾಶೀರ್ವಾದ ಯಾತ್ರೆ ಸಮಾವೇಶ ಭಾಗವಹಿಸುವರು. ಇದೇ ವೇಳೆ ನೂತನ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಅಭಿನಂದನಾ ಸಮಾರಂಭ ಜರುಗಲಿದೆ.
ಮಧ್ಯಾಹ್ನ 12.30ಕ್ಕೆ ಸಚಿವರಿಂದ ಕೋವಿಡ್ ಲಸಿಕಾ ಕೇಂದ್ರಕ್ಕೆ ಭೇಟಿ, 1ಕ್ಕೆ ಪಡಿತರ ವಿತರಣಾ ಕೇಂದ್ರಕ್ಕೆ ಭೇಟಿ, 1.30ಕ್ಕೆ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ (ಬಿಜೆಪಿ ಜಿಲ್ಲಾ ಕಚೇರಿಯಲ್ಲಿ) ನಡೆಯಲಿದೆ ಎಂದು ಮಾಹಿತಿ ನೀಡಿದರು.
ದೇಶದಲ್ಲಿ ಒಟ್ಟು 160 ದಿನ ವಿವಿಧ ತಂಡಗಳು ಪ್ರವಾಸ ಮಾಡಲಿವೆ. ರಾಜ್ಯದಲ್ಲಿ 5 ದಿನಗಳ ಪ್ರವಾಸದಲ್ಲಿ 2,030 ಕಿಮೀ ದೂರವನ್ನು ಕ್ರಮಿಸಲಿವೆ. 24 ಲೋಕಸಭಾ ಕ್ಷೇತ್ರಗಳು, 72 ವಿಧಾನಸಭಾ ಕ್ಷೇತ್ರಗಳಲ್ಲಿ ಹಾಗೂ 25 ಕಂದಾಯ ಜಿಲ್ಲೆಗಳಲ್ಲಿ 161 ಕಾರ್ಯಕ್ರಮಗಳು ನಡೆಯಲಿವೆ.
ಕೇಂದ್ರ ಸರಕಾರವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅನುಷ್ಠಾನಗೊಳಿಸಿರುವ ಯೋಜನೆಗಳು, ರೈತರ ಆದಾಯ ದ್ವಿಗುಣ, ದೀನದಲಿತರು, ಬಡವರ ಅಭ್ಯುದಯಕ್ಕಾಗಿ ಕೈಗೊಂಡ ಕಾರ್ಯಕ್ರಮಗಳನ್ನು ಪರಿಚಯಿಸಲಾಗುವುದು. ದೇಶದಲ್ಲಿ 55 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆ ನೀಡಲಾಗಿದೆ. ದೀಪಾವಳಿ ವರೆಗೆ ಬಡವರಿಗೆ ಉಚಿತ ಪಡಿತರ ನೀಡುತ್ತಿದ್ದು, ಲಸಿಕಾ ಕೇಂದ್ರ, ರೇಶನ್ ಅಂಗಡಿಗಳಿಗೆ ಈ ಯಾತ್ರೆ ಭೇಟಿ ನೀಡಲಿದೆ. ರಸಗೊಬ್ಬರದ ಅಂಗಡಿಗೆ ಭೇಟಿ ನೀಡಿ ಗೊಬ್ಬರ ಸರಿಯಾಗಿ ಸಿಗುತ್ತಿದೆಯೇ ಎಂದು ಮಾಹಿತಿ ಪಡೆಯಲಾಗುವುದು. ಸಾಹಿತಿಗಳು, ಗಡಿ ಕಾಯುವ ಯೋಧರ ಮನೆ, ಗಣ್ಯ ವ್ಯಕ್ತಿಗಳ ಮನೆ, ಜನಸಂಘ ಮತ್ತು ಬಿಜೆಪಿಯ ಹಿರಿಯ ನಾಯಕರ ಮನೆಗಳಿಗೆ ಭೇಟಿ ಕೊಟ್ಟು ಅವರ ಆಶೀರ್ವಾದ ಪಡೆಯಲಾಗುವುದು.
ಕರ್ನಾಟಕ ರಾಜ್ಯದಾದ್ಯಂತ 4 ನೂತನ ಕೇಂದ್ರ ಸಚಿವರ ನೇತೃತ್ವದಲ್ಲಿ ಆಗಸ್ಟ್ 16ರಿಂದ ಜನಾಶೀರ್ವಾದ ಯಾತ್ರೆ ನಡೆಯಲಿದೆ ಎಂದರು.












