ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಸದಾನಂದ ಗೌಡ ಅಸಮಾಧಾನ.!

ಮಂಗಳೂರು: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ರಾಜ್ಯ ಸರ್ಕಾರದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾದ ಆಡಿಯೋ‌ ರೆಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಆಡಿಯೋ‌ ತುಳು ಭಾಷೆಯಲ್ಲಿದೆ.

ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಮಂಗಳೂರಿನ ಬಿಜೆಪಿ ಕಾರ್ಯಕರ್ತರೊಬ್ಬರು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರಿಗೆ ಕರೆ ಮಾಡಿದ್ದರು. ಆ ವೇಳೆ ಕೋವಿಡ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ನಿರೀಕ್ಷಿತ ಸಹಕಾರ ನೀಡುತ್ತಿಲ್ಲ ಎಂದು ಕಾರ್ಯಕರ್ತ ಹೇಳಿದ್ದಾನೆ.

ಅದಕ್ಕೆ ಉತ್ತರಿಸಿದ ಸದಾನಂದ ಗೌಡರು, ನಾವು ಕೇಂದ್ರದಿಂದ ಕೊಡುವುದನ್ನೆಲ್ಲ ಕೊಟ್ಟಿದ್ದೇವೆ. ನಿಮ್ಮ ರಾಜ್ಯದ ಅಧ್ಯಕ್ಷರನ್ನು ಕೇಳಿ. ನಾವು ಕೇಂದ್ರದಿಂದ ಕೊಟ್ಟಿದ್ದನ್ನು ನೀವು ಜನರಿಗೆ ಕೊಡುತ್ತಿಲ್ಲ. ಇದರಿಂದ ಸಮಸ್ಯೆಯಾಗಿದೆ ಎಂದಿದ್ದಾರೆ.

ನಾವು ಕೇಳಿದ್ದಕ್ಕಿಂತ ಹೆಚ್ಚುವರಿಯೇ ಕೊಟ್ಟಿದ್ದೇವೆ. ರಾಜ್ಯದಲ್ಲಿ ಸಮಸ್ಯೆ ಇದ್ದರೆ, ಅವರು ಸರಿ ಮಾಡಲಿ, ನಾವು ಮಾಡುವುದಲ್ಲ. ನಿಮ್ಮಲ್ಲಿ ಎಂಎಲ್‌ಎ, ಜಿಲ್ಲಾ ಉಸ್ತುವಾರಿ ಸಚಿವರು ಇದ್ದಾರಲ್ಲ, ಹಾಗಾದ್ರೆ ಅವರೆಲ್ಲ ಯಾಕೆ ಇರುವುದು?. ನೀವು ಅವರಲ್ಲಿ ಕೇಳದೇ ನಮ್ಮಲ್ಲಿ ಏನು ಕೇಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ನಿಮಗೆ ರೆಮ್‌ಡಿಸಿವಿರ್ ಬೇಕಾ? ಆಮ್ಲಜನಕ, ಅಕ್ಕಿ ಎಲ್ಲವನ್ನೂ ಕೊಡಿಸಿದ್ದೇವೆ. ಏನನ್ನೂ ಬಾಕಿ ಇಟ್ಟಿಲ್ಲ. ನೀವೆಲ್ಲ ಒಮ್ಮೆ ಹೋಗಿ ಕೂತು, ಅವರಲ್ಲಿ ಆಗಲೇ ಬೇಕು ಅಂತ ಹೇಳಿ. ಅವರು ಇಲ್ಲಿ ಕತ್ತೆ ಕಾಯಲಿಕ್ಕೆ ಇರುವುದಾ?. ಎಂದು ಹೇಳಿರುವ ಆಡಿಯೋ ವೈರಲ್ ಆಗಿದೆ.