ನವದೆಹಲಿ: ಚೀನಾದಲ್ಲಿ ಹಠಾತ್ ಪ್ರಕರಣಗಳ ಏರಿಕೆಗೆ ಕಾರಣವಾಗಿರುವ ಕೋವಿಡ್-19 ರೂಪಾಂತರವಾದ ಓಮಿಕ್ರಾನ್ ರೂಪಾಂತರ BF.7, ಭಾರತದಲ್ಲಿಯೂ ಪತ್ತೆಯಾಗಿದೆ ಎಂದು ವರದಿಯಾಗಿದೆ. ಭಾರತದಲ್ಲಿ BF.7 ನ ಮೊದಲ ಪ್ರಕರಣವನ್ನು ಗುಜರಾತ್ ಬಯೋಟೆಕ್ನಾಲಜಿ ರಿಸರ್ಚ್ ಸೆಂಟರ್ ಅಕ್ಟೋಬರ್‌ನಲ್ಲಿ ಪತ್ತೆ ಮಾಡಿದೆ.
ಇಲ್ಲಿಯವರೆಗೆ, ಗುಜರಾತ್‌ನಿಂದ ಎರಡು ಪ್ರಕರಣಗಳು ವರದಿಯಾಗಿದ್ದು, ಒಡಿಶಾದಿಂದ ಒಂದು ಪ್ರಕರಣ ವರದಿಯಾಗಿದೆ ಎಂದು ಪಿಟಿಐ ವರದಿ ತಿಳಿಸಿದೆ. ಭಾರತದಲ್ಲಿ ಈ ರೂಪಾಂತರದ 3 ಪ್ರಕರಣಗಳು ಪತ್ತೆಯಾಗಿದ್ದರೂ, ದೇಶದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಒಟ್ಟಾರೆ ಏರಿಕೆ ಕಂಡುಬಂದಿಲ್ಲ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಬುಧವಾರ ಕೋವಿಡ್ -19 ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದು, ಅಲ್ಲಿ ತಜ್ಞರು ಅಸ್ತಿತ್ವದಲ್ಲಿರುವ ಮತ್ತು ಉದಯೋನ್ಮುಖ ರೂಪಾಂತರಗಳ ಬಗ್ಗೆ ನಿಗಾ ಇಡಲು ನಿರಂತರ ಕಣ್ಗಾವಲು ಅಗತ್ಯವಿದೆ ಎಂದು ಹೇಳಿದ್ದಾರೆ.
ಆ ಬಳಿಕ ಟ್ವೀಟ್ ಮಾಡಿರುವ ಸಚಿವರು, ಕೆಲವು ದೇಶಗಳಲ್ಲಿ ಕೋವಿಡ್19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇಂದು ತಜ್ಞರು ಮತ್ತು ಅಧಿಕಾರಿಗಳೊಂದಿಗೆ ಪರಿಸ್ಥಿತಿಯನ್ನು ಪರಿಶೀಲಿಸಲಾಗಿದೆ. ಕೋವಿಡ್ ಇನ್ನೂ ಮುಗಿದಿಲ್ಲ. ಎಲ್ಲರೂ ಎಚ್ಚರದಿಂದ ಇರುವಂತೆ ಮತ್ತು ಕಣ್ಗಾವಲು ಬಲಪಡಿಸುವಂತೆ ಸೂಚಿಸಿದ್ದೇನೆ. ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ನಾವು ಸಿದ್ಧರಿದ್ದೇವೆ ಎಂದಿದ್ದಾರೆ.
ರೂಪಾಂತರ BF.7 ಕೋವಿಡ್ ಪ್ರಕರಣಗಳ ತೀವ್ರ ಉಲ್ಬಣಕ್ಕೆ ಮತ್ತು ಚೀನಾದಲ್ಲಿ ಕೋವಿಡ್-ಸಂಬಂಧಿತ ಸಾವುಗಳ ಹಿಂದಿನ ಪ್ರಾಥಮಿಕ ಕಾರಣ ಎಂದು ಹೇಳಲಾಗುತ್ತದೆ. ಆದಾಗ್ಯೂ, ಭಾರತದ ಸಾರ್ಸ್ ಕೋವಿಡ್- 2 ಜೀನೋಮಿಕ್ ಕಣ್ಗಾವಲು ಕಾರ್ಯಕ್ರಮದಿಂದ ಭಾರತವು ಈ ತಳಿಗಳು ಮತ್ತು ಡೇಟಾವನ್ನು ಪತ್ತೆಹಚ್ಚುತ್ತಿದ್ದು, BF.7 ಹಲವು ತಿಂಗಳುಗಳಿಂದಲೇ ಇಲ್ಲಿ ಪ್ರಸ್ತುತವಿದೆ.
BF.7 ಓಮಿಕ್ರಾನ್ ರೂಪಾಂತರದ BA.5 ನ ಉಪ-ವಂಶವಾಗಿದೆ ಮತ್ತು ಇದು ಪ್ರಬಲವಾದ ಸೋಂಕಿನ ಸಾಮರ್ಥ್ಯವನ್ನು ಹೊಂದಿದೆ ಏಕೆಂದರೆ ಇದು ಬೇಗ ಹರಡುತ್ತದೆ, ಕಡಿಮೆ ಇನ್ಕ್ಯುಬೇಶನ್ ಅವಧಿಯನ್ನು ಹೊಂದಿದೆ ಮತ್ತು ಮರುಸೋಂಕನ್ನು ಉಂಟುಮಾಡುವ ಅಥವಾ ಲಸಿಕೆ ಹಾಕಿದವರಿಗೂ ಸೋಂಕು ಉಂಟುಮಾಡುವ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ.
ಚೀನಾದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದರಿಂದ ಜನರಲ್ಲಿ ಗುಂಪು ರೋಗನಿರೋಧಕ ಶಕ್ತಿ ಕಡಿಮೆಯಾಗಿದ್ದು, ಲೌಕ್ ಡೌನ್ ತೆರವುಗೊಳಿದ ತಕ್ಷಣವೇ ಏಕಾಏಕಿ ಸಾಂಕ್ರಾಮಿಕ ಹರಡಿಕೊಂಡಿದೆ ಎಂದು ತಜ್ಞರು ಹೇಳುತ್ತಿದ್ದು, ಭಾರತದಲ್ಲಿ ಈ ರೂಪಾಂತರ ಹೆಚ್ಚು ಅಪಾಯಕಾರಿ ಅಲ್ಲದಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಒಳಿತು ಎಂದೂ ಎಚ್ಚರಿಸಿದ್ದಾರೆ.