ಕೇಂದ್ರ ಸರಕಾರದಿಂದ “ಒಂದು ರಾಷ್ಟ್ರ, ಒಂದು ಡಯಾಲಿಸಿಸ್” ಯೋಜನೆ: ಮನ್ ಸುಖ್ ಮಾಂಡವೀಯಾ

ನವದೆಹಲಿ: ಡಯಾಲಿಸಿಸ್‌ಗೆ ಒಳಗಾಗುವ ರೋಗಿಗಳು ಯಾವುದೇ ಸಮಯದಲ್ಲಿ ದೇಶದಲ್ಲಿ ಎಲ್ಲಿ ಬೇಕಾದರೂ ಚಿಕಿತ್ಸೆಗೊಳಗಾಗಲು ಕೇಂದ್ರ ಸಾರಕಾರವು “ಒಂದು ರಾಷ್ಟ್ರ, ಒಂದು ಡಯಾಲಿಸಿಸ್” ಕಾರ್ಯಕ್ರಮವನ್ನು ಹೊರತರಲಿದೆ ಎಂದು ಆರೋಗ್ಯ ಸಚಿವ ಡಾ.ಮನ್ ಸುಖ್ ಮಾಂಡವಿಯಾ ಹೇಳಿದ್ದಾರೆ.

ಮರೀನಾ ಬೀಚ್‌ನಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ಆಯೋಜಿಸಿದ್ದ ಸೈಕಲ್ ರಾಲಿಯಲ್ಲಿ ಡಾ ಮನ್ಸುಖ್ ಮಾಂಡವಿಯಾ ಭಾಗವಹಿಸಿದ್ದರು. ಆಬಳಿಕ ನಗರದ ತಮಿಳುನಾಡು ಸರಕಾರಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿನ ರೊಬೊಟಿಕ್ ಸರ್ಜರಿ ಸೌಲಭ್ಯ ಮತ್ತು ಆರಂಭಿಕ ಗರ್ಭಧಾರಣೆಯ ಅಸಂಗತತೆಗಳ ತಪಾಸಣೆ ಕೇಂದ್ರವನ್ನು ಅವರು ಪರಿಶೀಲಿಸಿದರು.

ಕೇಂದ್ರ ಮತ್ತು ರಾಜ್ಯ ಆರೋಗ್ಯ ಅಧಿಕಾರಿಗಳೊಂದಿಗೆ ನಡೆಸಿದ ಸಂವಾದದಲ್ಲಿ, 2030 ರ ವೇಳೆಗೆ ರಾಷ್ಟ್ರವನ್ನು ಮಲೇರಿಯಾ ಮುಕ್ತಗೊಳಿಸುವ ಗುರಿಯನ್ನು ಕೇಂದ್ರ ಹೊಂದಿದೆ ಎಂದು ಹೇಳಿದರು. ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ ಅಡಿಯಲ್ಲಿ ಕೇಂದ್ರವು ತಮಿಳುನಾಡಿಗೆ 3004 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ. ರಾಜ್ಯದಲ್ಲಿ 1.58 ಕೋಟಿ ಕುಟುಂಬಗಳ 75 ಲಕ್ಷ ಜನರು ಆಯಷ್ಮಾನ್ ಭಾರತ್ ಯೋಜನೆಯಿಂದ ಪ್ರಯೋಜನ ಪಡೆದಿದ್ದಾರೆ ಎಂದ ಅವರು, 94 ಪ್ರತಿಶತದಷ್ಟು ಜನರಿಗೆ ಕೋವಿಡ್ ಲಸಿಕೆಗಳ ಮೊದಲನೆ ಡೋಸ್ ಮತ್ತು 82 ಪ್ರತಿಶತದಷ್ಟು ಜನರಿಗೆ ಎರಡನೆ ಡೋಸ್‌ ನೀಡಿದ ತಮಿಳುನಾಡು ಸರಕಾರದ ಕಾರ್ಯಗಳನ್ನು ಶ್ಲಾಘಿಸಿದರು.

ತಾಯಂದಿರ ಮರಣ ಪ್ರಮಾಣ ಮತ್ತು ಶಿಶು ಮರಣ ಪ್ರಮಾಣದ ಗುರಿಯನ್ನು ಇತರ ರಾಜ್ಯಗಳಿಗಿಂತ ಸಾಕಷ್ಟು ಮುಂಚಿತವಾಗಿ ಸಾಧಿಸಿದ್ದಕ್ಕಾಗಿ ಅವರು ರಾಜ್ಯವನ್ನು ಅಭಿನಂದಿಸಿದರು.