ಕೆ.ಎಂ.ಸಿ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರಕ್ಕೆ ಅಂತರರಾಷ್ಟ್ರೀಯ ಕ್ಯಾನ್ಸರ್ ಕಂಟ್ರೋಲ್ ಒಕ್ಕೂಟದ ಮಾನ್ಯತೆ; ಜಾಗತಿಕ ಮಟ್ಟದ ಗುರುತಿಸುವಿಕೆ

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರಕ್ಕೆ (ಎಂ ಸಿ ಸಿ ಸಿ ಸಿ), ಯೂನಿಯನ್ ಫಾರ್ ಇಂಟರ್ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ (UICC -ಅಂತರರಾಷ್ಟ್ರೀಯ ಕ್ಯಾನ್ಸರ್ ಕಂಟ್ರೋಲ್ ಒಕ್ಕೂಟ ) ನಲ್ಲಿ ಸದಸ್ಯತ್ವ ದೊರೆತಿದೆ ಎಂದು ಘೋಷಿಸಲು ಸಂಸ್ಥೆಯು ಹೆಮ್ಮೆಪಡುತ್ತದೆ. ಈ ಪ್ರತಿಷ್ಠಿತ ಮನ್ನಣೆಯಿಂದ ಕ್ಯಾನ್ಸರ್ ಆರೈಕೆ, ಸಂಶೋಧನೆ ಮತ್ತು ಶಿಕ್ಷಣದ ಕ್ಷೇತ್ರದಲ್ಲಿ ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಖ್ಯಾತಿಯು ಜಾಗತಿಕವಾಗಿ ಉನ್ನತ ಮಟ್ಟಕೆ ಏರಿದೆ. ಜಾಗತಿಕವಾಗಿ ಹೆಸರಾಂತ ಸಂಸ್ಥೆಯಾದ ಯುಐಸಿಸಿ ಸದಸ್ಯತ್ವವನ್ನು ಸುಲಭವಾಗಿ ಪಡೆಯಲಾಗುವುದಿಲ್ಲ. ಇದು ನಿಖರವಾದ ಮೌಲ್ಯಮಾಪನ ಪ್ರಕ್ರಿಯೆ ಮತ್ತು ಜಾಗತಿಕ ಮಾನದಂಡಗಳಿಗೆ ಕಟ್ಟುನಿಟ್ಟಾದ ಅನುಸರಣೆಯನ್ನು ಒಳಗೊಂಡಿರುತ್ತದೆ. ಕ್ಯಾನ್ಸರ್ ಚಿಕಿತ್ಸೆ ಮತ್ತು ಉನ್ನತ ಸಂಶೋಧನೆಯನ್ನು ಮುನ್ನಡೆಸಲು ಕೇಂದ್ರದ ಅಚಲ ಬದ್ಧತೆಯನ್ನು ಇದು ಒತ್ತಿಹೇಳುತ್ತದೆ.

ಈ ಮನ್ನಣೆಯೊಂದಿಗೆ, ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ತರಬೇತಿ ಅವಕಾಶಗಳಿಗೆ ನೇರ ಪ್ರವೇಶವನ್ನು ಪಡೆಯಲಿದ್ದಾರೆ. ಇದು ಕೇಂದ್ರದಲ್ಲಿ ಲಭ್ಯವಿರುವ ಶಿಕ್ಷಣ ಮತ್ತು ತರಬೇತಿಯ ಗುಣಮಟ್ಟವನ್ನು ಹೆಚ್ಚಿಸುವುದಲ್ಲದೆ, ರಾಷ್ಟ್ರೀಯ ಮತ್ತು ಜಾಗತಿಕವಾಗಿ ಕ್ಯಾನ್ಸರ್ ಆರೈಕೆಯಲ್ಲಿ ನಮ್ಮ ಕೇಂದ್ರವು ಮುಂಚೂಣಿಯಲ್ಲಿದೆ ಎಂದು ಖಚಿತಪಡಿಸುತ್ತದೆ. ಈ ಸದಸ್ಯತ್ವದ ಸಂಪೂರ್ಣ ಪ್ರಯೋಜನಗಳ ವಿವರವಾದ ರೂಪರೇಖೆಯನ್ನು ಯುಐಸಿಸಿ ವೆಬ್ ಸೈಟ್ ನ ಸದಸ್ಯರ ಪ್ರಯೋಜನ ಅಡಿಯಲ್ಲಿ ಕಾಣಬಹುದು.

ಈ ಸಂದರ್ಭದಲ್ಲಿ ಕ್ಯಾನ್ಸರ್ ಗುಣಮಟ್ಟ ಸುಧಾರಣೆ (CQI) ತಂಡದ ಹಿಂದಿನ ಪ್ರೇರಕ ಶಕ್ತಿಗಳಾದ ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಉಪ ಸಂಯೋಜಕರಾದ ಡಾ. ವಾಸುದೇವ ಭಟ್ ಕೆ ಮತ್ತು ಡಾ. ಶೆರ್ಲಿ ಸಾಲಿನ್ಸ್ ಇವರ ದೃಢವಾದ ಪ್ರಯತ್ನಗಳು, ಕ್ಯಾನ್ಸರ್ ಗುಣಮಟ್ಟ ಸುಧಾರಣೆ ತಂಡದ ಕೊಡುಗೆಗಳ ಜೊತೆಯಲ್ಲಿ, ಈ ಉತ್ಕ್ರಷ್ಟ ಮನ್ನಣೆ ಪಡೆಯಲು ಕಾರಣವಾಗಿದೆ.

ಯುಐಸಿಸಿ ಯ ಅಧ್ಯಕ್ಷ ಪ್ರೊ. ಜೆಫ್ ಡನ್ ಎಒ ಮಾತನಾಡಿ, ಯುಐಸಿಸಿ ಕುಟುಂಬಕ್ಕೆ ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆಯ ಸೇರ್ಪಡೆಯು ಉತ್ಕೃಷ್ಟತೆಯ ಜಾಗತಿಕ ಮಾನದಂಡಗಳಿಗೆ ಅದರ ಬದ್ಧತೆಯನ್ನು ಸೂಚಿಸುತ್ತದೆ. ಕ್ಯಾನ್ಸರ್ ಆರೈಕೆಯನ್ನು ಉತ್ತಮಗೊಳಿಸುವ ಅವರ ಸಮರ್ಪಣೆ ನಿಜವಾಗಿಯೂ ಶ್ಲಾಘನೀಯವಾಗಿದೆ ಮತ್ತು ಈ ಪಾಲುದಾರಿಕೆಯ ಪರಿವರ್ತಕ ಪರಿಣಾಮವನ್ನು ನೋಡಲು ನಾವು ಉತ್ಸುಕರಾಗಿದ್ದೇವೆ ಎಂದು ಹೇಳಿದ್ದಾರೆ.

ಯುಐಸಿಸಿ ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕ್ಯಾರಿ ಆಡಮ್ಸ್ ಮಾತನಾಡಿ ಎಂಸಿಸಿಸಿಸಿ ಯಂತಹ ಸಂಸ್ಥೆಗಳೊಂದಿಗಿನ ಸಹಯೋಗವು ನಮ್ಮ ಧ್ಯೇಯವನ್ನು ಇನ್ನಷ್ಟು ಬಲಪಡಿಸುತ್ತದೆ. ಕ್ಯಾನ್ಸರ್ ಆರೈಕೆ ಮತ್ತು ಸಂಶೋಧನೆಯನ್ನು ಮುಂದುವರಿಸಲು ಅವರ ಅಚಲವಾದ ಸಮರ್ಪಣೆಯು ಜಾಗತಿಕ ಸಮುದಾಯಕ್ಕೆ ಅಗತ್ಯವಿದೆ. ನಾವು ಸಂಸ್ಥೆಯನ್ನು ಯುಐಸಿಸಿ ಕುಟುಂಬಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದಿದ್ದಾರೆ.

ಈ ಮೈಲಿಗಲ್ಲಿಗೆ ಕಾರಣರಾದ ಡಾ.ವಾಸುದೇವ ಭಟ್ ಕೆ ಮಾತನಾಡಿ, ಯುಐಸಿಸಿ ಗೌರವಾನ್ವಿತ ಸದಸ್ಯರೊಂದಿಗೆ ಸ್ಥಾನ ಗಳಿಸುವುದು ಎಂ ಸಿ ಸಿ ಸಿ ಸಿ ಯಲ್ಲಿನ ನಮ್ಮ ತಂಡದ ಸಮರ್ಪಣೆಗೆ ಸಾಕ್ಷಿಯಾಗಿದೆ. ಇದರೊಂದಿಗೆ, ಕ್ಯಾನ್ಸರ್ ಆರೈಕೆಯ ಮಾನದಂಡಗಳನ್ನು ಉನ್ನತೀಕರಿಸುವ ನಮ್ಮ ಗುರಿಯನ್ನು ಸಾಧಿಸಿದ್ದೇವೆ ಎಂದಿದ್ದಾರೆ.

ಇಂತಹ ಪ್ರತಿಷ್ಠಿತ ವೇದಿಕೆಯಲ್ಲಿ ಗುರುತಿಸಿಕೊಳ್ಳುವುದು ನಮ್ಮ ಕಾರ್ಯಕ್ಕೆ ಉತ್ತೇಜನ ನೀಡುತ್ತದೆ. ಯುಐಸಿಸಿ ಸಮುದಾಯದ ಭಾಗವಾಗಿ, ಕ್ಯಾನ್ಸರ್ ಆರೈಕೆ ಮತ್ತು ಸಂಶೋಧನೆಯಲ್ಲಿ ಅದ್ಭುತ ಪ್ರಗತಿಯನ್ನು ಬೆಳೆಸುವ ನಮ್ಮ ಸಂಕಲ್ಪವು ಎಂದಿಗಿಂತಲೂ ಬಲವಾಗಿದೆ ಎಂದು ಡಾ. ಶೆರ್ಲಿ ಸಾಲಿನ್ಸ್ ಅಭಿಪ್ರಾಯ ಪಟ್ಟಿದ್ದಾರೆ.