ಸ್ವ-ಉದ್ಯೋಗ ಮಾಡಬೇಕು ಅನ್ನೋ ಆಸೆಯಾ?: ಇಲ್ಲಿದೆ ಅವಕಾಶ..

ಉಡುಪಿ ಮೇ 27: 2020-21 ನೇ ಸಾಲಿನ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ (ಪಿ..ಎಂ.ಇ.ಜಿ.ಪಿ)ಯಡಿ ಉಡುಪಿ ಜಿಲ್ಲೆಯಲ್ಲಿ ಸ್ವ ಉದ್ಯೋಗ ಆರಂಭಿಸಲು ಆಸಕ್ತಿ ಇರುವ ನಿರುದ್ಯೋಗಿ ಯುವಕ/ಯುವತಿಯರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಯೋಜನೆಯು ಸ್ವಂತ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಜಾರಿಗೊಳಿಸಲಾಗುತ್ತಿದೆ.

ಈ ಯೋಜನೆಯಲ್ಲಿ ನಿರುದ್ಯೋಗಿ ಯುವಕ, ಯುವತಿಯರಿಗೆ ಗರಿಷ್ಠ ಯೋಜನಾ ವೆಚ್ಚ ರೂ.25 ಲಕ್ಷ ಉತ್ಪಾದನೆ ಚಟುವಟಿಕೆ ಮತ್ತು ರೂ.10 ಲಕ್ಷ ಆಯ್ದ ಸೇವಾ ಘಟಕಕ್ಕೆ ಬ್ಯಾಂಕ್ ಸಾಲದೊಂದಿಗೆ, ಹೊಸ ಕೈಗಾರಿಕೆ, ಉತ್ಪಾದನೆ ಚಟುವಟಿಕೆ ಹಾಗೂ ಆಯ್ದ ಕೆಲವು ಸೇವಾ ಘಟಕ ಸ್ಥಾಪಿಸುವವರಿಗೆ ಅವಕಾಶವಿದ್ದು, ಯೋಜನಾ ವೆಚ್ಚದ ಮೇಲೆ ಶೇಕಡಾ.25ರಿಂದ 35ರ ವರೆಗೆ ಸಹಾಯಧನ ನೀಡಲಾಗುವುದು.

ಉತ್ಪಾದನಾ ಘಟಕವಾಗಿದ್ದಲ್ಲಿ ರೂ.10 ಲಕ್ಷ ಮತ್ತು ಸೇವಾ ಘಟಕವಾಗಿದ್ದಲ್ಲಿ ರೂ.5 ಲಕ್ಷ ಗಳಿಗಿಂತ ಮೇಲ್ಪಟ್ಟ ಯೋಜನಾ ವೆಚ್ಚಗಳನ್ನೊಳಗೊಂಡ ಘಟಕಗಳನ್ನು ಸ್ಥಾಪಿಸುವವರು ಕನಿಷ್ಟ 8ನೇ ತರಗತಿ ಉತ್ತಿರ್ಣವಾಗಿರಬೇಕು.
ಅರ್ಜಿದಾರರಿಗೆ ಕನಿಷ್ಠ 18 ವರ್ಷ ತುಂಬಿರಬೇಕು . ನಿರುದ್ಯೋಗಿ ಯುವಕ/ಯುವತಿಯರು http://www.kviconline.gov.in/pmegpeportal/jsp/pmegponline.jsp ವೆಬ್ ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸುವಾಗ ಫೋಟೊ, ಯೋಜನಾ ವರದಿ, ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಜನಸಂಖ್ಯೆ ಪ್ರಮಾಣಪತ್ರ, ಹಾಗೂ ವಿದ್ಯಾಭ್ಯಾಸದ ದಾಖಲಾತಿಗಳನ್ನು ಅಪ್‍ಲೋಡ್ ಮಾಡಿದ ನಂತರ ಅರ್ಜಿಯನ್ನು ಪ್ರಿಂಟ್ ಮಾಡಿ ಸಂಬಂದಪಟ್ಟ ದಾಖಲಾತಿಗಳೊಂದಿಗೆ ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿಗಳು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ(ಕೆ.ವಿ.ಐ.ಬಿ) , ಬಿ 305, ಬಿ ಬ್ಲಾಕ್, 2ನೇ ಮಹಡಿ, ಜಿಲ್ಲಾ ಆಡಳಿತ ಕಛೇರಿಗಳ ಸಂಕೀರ್ಣ ರಜತಾದ್ರಿ , ಮಣಿಪಾಲ, ಉಡುಪಿ ದೂ. 0820-2574855 ಸಲ್ಲಿಸಬೇಕು ಹಾಗೂ ಹೆಚ್ಚಿನ ಮಾಹಿತಿ ಪಡೆಯಬಹುದು.

ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಯಾವುದೇ ಯೋಜನೆಯಲ್ಲಿ ಸಹಾಯಧನ ಪಡೆದವರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಸರ್ಕಾರದ ನಿಯಮಾನುಸಾರ ಅನುಸೂಚಿತ ಜಾತಿ, ಅನುಸೂಚಿತ ಪಂಗಡ ಹಾಗೂ ವಿಶೇಷ ವರ್ಗದ ಅರ್ಜಿದಾರರಿಗೆ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿ ಅವರ ಪ್ರಕಟಣೆ ತಿಳಿಸಿದೆ.