ಅವಿಭಜಿತ ದ.ಕ. ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಬಹಿಷ್ಕರಿಸಿ ವ್ಯಾಪಾರ; ಕೆನರಾ ಉದ್ಯಮಿಗಳ ಒಕ್ಕೂಟ ಘೋಷಣೆ

ಉಡುಪಿ: ರಾಜ್ಯ ಸರಕಾರ ಈ ವಾರದಿಂದ ವೀಕೆಂಡ್ ಕರ್ಫ್ಯೂ ಹಿಂಪಡೆಯದಿದ್ದರೆ ಸರಕಾರದ ಎಲ್ಲ ಆದೇಶಗಳನ್ನು ದಿಕ್ಕರಿಸಿ, ಕೇಸು, ಬಂಧನಕ್ಕೆ ಹೆದರದೆ ಶನಿವಾರ ಮತ್ತು ಭಾನುವಾರ ಅವಿಭಜಿತ ದ.ಕ. ಜಿಲ್ಲೆಯ ಎಲ್ಲ ಅಂಗಡಿ ಮುಂಗಟ್ಟುಗಳನ್ನು ತೆರೆದಿಟ್ಟು ವ್ಯಾಪಾರ ನಡೆಸಲಾಗುವುದು ಎಂದು ಉಡುಪಿ ಮತ್ತು ದಕ್ಷಿಣ ಜಿಲ್ಲೆಗಳ ಒಟ್ಟು 40 ವರ್ತಕರ ಸಂಘಟನೆಗಳನ್ನೊಳಗೊಂಡ ಕೆನರಾ ಉದ್ಯಮಿಗಳ ಒಕ್ಕೂಟ ತಿಳಿಸಿದೆ.

ಉಡುಪಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಗೌರವಾಧ್ಯಕ್ಷ ಎಂ.ಜಿ ಹೆಗ್ಡೆ ಅವರು, ರಾಜ್ಯದಲ್ಲಿ ಅವೈಜ್ಞಾನಿಕ‌ ಹಾಗೂ ಅನೈತಿಕವಾದ ನೈಟ್ ಮತ್ತು ವೀಕೆಂಡ್ ಕರ್ಫ್ಯೂ ಜಾರಿಯಲ್ಲಿವೆ. ಇದನ್ನು ಒಕ್ಕೂಟವು ಸಂಪೂರ್ಣವಾಗಿ ವಿರೋಧ ಮಾಡಲಿದೆ ಎಂದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶುಕ್ರವಾರದಿಂದ ಸೋಮವಾರದವರೆಗೆ ಧಾರ್ಮಿಕ, ರಾಜಕೀಯ ಕಾರ್ಯಕ್ರಮಗಳು ನಡೆಯುತ್ತಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಿದ್ದಾರೆ. ಆದರೆ, ವ್ಯಾಪಾರಸ್ಥರಿಗೆ ಮಾತ್ರ ನೀವು ಅಂಗಡಿ, ಶಾಪ್ ಗಳನ್ನು ಬಂದ್ ಮಾಡಿ ಎಂದು ಹೇಳುತ್ತಿದ್ದಾರೆ. ಇದು ಅವೈಜ್ಞಾನಿಕವಾಗಿದೆ. ಇದನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದರು.

ಅನೇಕ ಅಧಿಕಾರಿಗಳು ತಮಗೆ ಬೇಕಾದವರ ಬಳಿ‌ ದುಡ್ಡು ತೆಗೆದುಕೊಂಡು ಅನೈತಿಕವಾಗಿ ಅಂಗಡಿ ಒಪನ್ ಮಾಡಲು ಅವಕಾಶ ನೀಡುತ್ತಿದ್ದಾರೆ. ಇದೊಂದು ಹೇಳುವವರು ಕೇಳುವವರಿಲ್ಲದ ತುಘಲಕ್ ಸರ್ಕಾರ ಎಂದು ಟೀಕಿಸಿದರು.

ಒಕ್ಕೂಟದ ಅಧ್ಯಕ್ಷ ಸಂತೋಷ್ ಕಾಮತ್ ಮಾತನಾಡಿ, ನಾವು ಸರಕಾರವನ್ನು ವಿರೋಧಿಸುತ್ತಿಲ್ಲ.‌ ಸರಕಾರಕ್ಕೆ ವ್ಯಾಪಾರಿಗಳ ಕಷ್ಟ ಅರ್ಥವಾಗುತ್ತದೆ ಎಂದು ಅಂದುಕೊಂಡಿದ್ದೇವೆ. ಆದ್ದರಿಂದ ಸರಕಾರ ವೀಕೆಂಡ್ ಕರ್ಫ್ಯೂನ್ನು ಹಿಂಪಡೆಯಬೇಕು. ಒಂದು ವೇಳೆ ವಿಕೇಂಡ್ ಕರ್ಫ್ಯೂವನ್ನು ಹಿಂಪಡೆಯದಿದ್ದಲ್ಲಿ ಸರಕಾರ ಆದೇಶ ಬಹಿಷ್ಕರಿಸಿ ಎಲ್ಲಾ‌ ವ್ಯಾಪಾರ ಮಳಿಗೆ ತೆರೆಯುತ್ತೇವೆ. ನಮ್ಮನ್ನು ಬಂಧಿಸುವುದಾದರೇ ಬಂಧಿಸಲಿ, ನಾವು ಸರಕಾರದ ಯಾವುದೇ ಆದೇಶಕ್ಕೆ ಬಗ್ಗೂವುದಿಲ್ಲ ಎಂದು ಆಕ್ರೋಶ

ಸುದ್ದಿಗೋಷ್ಠಿಯಲ್ಲಿ ವರ್ತಕರ ಹಿತರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ದಿವಾಕರ್ ಸನಿಲ್, ಕಾರ್ಯದರ್ಶಿ ಮ್ಯಾಕ್ಸಿಮ್ ಸಲ್ದಾನ, ವಾಲ್ಟ್ ರ್ ಸಲ್ದಾನ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ರಾಜು ಭಂಡಾರಿ, ಟೈಲರ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಗುರುರಾಜ್ ಶೆಟ್ಟಿ, ಧ್ವನಿ ಬೆಳಕು ಜಿಲ್ಲಾಧ್ಯಕ್ಷ ರಾಮಕೃಷ್ಣ ಕುಂದರ್, ಪ್ರವೀಣ್ ವಾಲ್ಕೆ ಉಪಸ್ಥಿತರಿದ್ದರು.