ಭೋಪಾಲ್: ಥೇಟ್ ವಿದ್ಯಾರ್ಥಿನಿಯಂತೆಯೆ ಕಾಲೇಜಿಗೆ ಬಂದು ಕ್ಯಾಂಪಸ್ ನಲ್ಲಿ ಅಡ್ಡಾಡುತ್ತಿದ್ದ ಆಕೆ ವಿದ್ಯಾರ್ಥಿನಿಯಲ್ಲ, ಬದಲಿಗೆ ರ‍್ಯಾಗಿಂಗ್ ಬಗ್ಗೆ ಪುರಾವೆಗಳನ್ನು ಸಂಗ್ರಹಿಸುವ ರಹಸ್ಯ ಪೊಲೀಸ್ ಆಗಿದ್ದಳು! ಕಾಲೇಜಿಗೆ ಭೇಟಿ ನೀಡುತ್ತಿದ್ದ ಮೂರು ತಿಂಗಳ ಅವಧಿಯಲ್ಲಿ ಮೊದಲ ವರ್ಷದ ವಿದ್ಯಾರ್ಥಿಗಳ ಕ್ರೂರ ರ‍್ಯಾಗಿಂಗ್ ನಲ್ಲಿ ಭಾಗಿಯಾಗಿದ್ದ 11 ಹಿರಿಯ ವಿದ್ಯಾರ್ಥಿಗಳನ್ನು ಈಕೆ ಗುರುತಿಸಿದ್ದಾಳೆ. ಇದೀಗ ಆ 11 ಹಿರಿಯ ವಿದ್ಯಾರ್ಥಿಗಳನ್ನು ಮೂರು ತಿಂಗಳ ಕಾಲ ಕಾಲೇಜು ಮತ್ತು ಹಾಸ್ಟೆಲ್‌ನಿಂದ ಅಮಾನತುಗೊಳಿಸಲಾಗಿದೆ.
ಇಂದೋರ್‌ನ ಮಹಾತ್ಮಾ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ರ‍್ಯಾಗಿಂಗ್ ವಿರುದ್ಧದ ಕಾರ್ಯಾಚರಣೆಯಲ್ಲಿ ಮಧ್ಯಪ್ರದೇಶ ಪೊಲೀಸರಲ್ಲಿ 24 ವರ್ಷದ ಕಾನ್‌ಸ್ಟೆಬಲ್ ಶಾಲಿನಿ ಚೌಹಾಣ್ ಪ್ರಮುಖ ಪಾತ್ರ ವಹಿಸಿದ್ದಾರೆ.
ರ‍್ಯಾಗಿಂಗ್ ಬಗ್ಗೆ ವಿದ್ಯಾರ್ಥಿಗಳಿಂದ ಅನಾಮಧೇಯ ದೂರುಗಳು ಬಂದಿದ್ದವು. ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಅಶ್ಲೀಲ ಕೃತ್ಯಗಳ ನಟನೆ ಮಾಡುವಂತೆ ಬಲವಂತಪಡಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಆದರೆ ಕಿರುಕುಳದ ಭಯದಿಂದ ದೂರುದಾರರು ಮುಂದೆ ಬರಲು ಅಥವಾ ಆರೋಪಿಗಳ ಹೆಸರನ್ನು ಹೇಳಲು ತಯಾರಿರಲಿಲ್ಲ. ಪೊಲೀಸರು ಕಾಲೇಜಿಗೆ ಭೇಟಿ ನೀಡಿದಾಗಲೂ ವಿದ್ಯಾರ್ಥಿಗಳು ಮುಂದೆ ಬಂದು ಸಮಸ್ಯೆ ಹೇಳಲು ಧೈರ್ಯ ತೋರದ್ದರಿಂದ ಶಾಲಿನಿ ಮತ್ತು ಇತರ ಕಾನ್‌ಸ್ಟೆಬಲ್‌ಗಳಿಗೆ ಕ್ಯಾಂಪಸ್‌ನಲ್ಲಿ ಮತ್ತು ಸುತ್ತಮುತ್ತ ಸಾಮಾನ್ಯ ಬಟ್ಟೆಯಲ್ಲಿ ಸಮಯ ಕಳೆಯಲು, ಕ್ಯಾಂಟೀನ್ ಮತ್ತು ಹತ್ತಿರದ ಟೀ ಸ್ಟಾಲ್‌ಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಹರಟೆ ಹೊಡೆಯಲು ಹೇಳಲಾಯಿತು. ಅವರು ಜೂನಿಯರ್ ವಿದ್ಯಾರ್ಥಿಗಳೊಂದಿಗೆ ಮಾತನಾಡಲು ಪ್ರಾರಂಭಿಸಿದಾಗ, ಅವರು ಅನುಭವಿಸುತ್ತಿರುವ ಭಯಾನಕ ಅನುಭವವನ್ನು ಅವರು ತಿಳಿದುಕೊಂಡರು. ಹೀಗಾಗಿಯೇ ಸಾಕ್ಷಿಗಳನ್ನು ಪಡೆದು ಪ್ರಕರಣವನ್ನು ಭೇದಿಸಿದ್ದೇವೆ ಎಂದು ಇನ್ಸ್‌ಪೆಕ್ಟರ್ ತೆಹಜೀಬ್ ಖಾಜಿ ಸಂದರ್ಶನದಲ್ಲಿ ಹೇಳಿರುವುದಾಗಿ ಎನ್.ಡಿ.ಟಿ.ವಿ ವರದಿ ಮಾಡಿದೆ.
ಈ ಬಗ್ಗೆ ಎನ್.ಡಿ.ಟಿ.ವಿ ಗೆ ಪ್ರತಿಕ್ರಿಯೆ ನೀಡಿರುವ ಕಾನ್‌ಸ್ಟೆಬಲ್ ಶಾಲಿನಿ, ಇದು ಸಂಪೂರ್ಣವಾಗಿ ಹೊಸ ಅನುಭವ. ನಾನು ಪ್ರತಿನಿತ್ಯ ವಿದ್ಯಾರ್ಥಿನಿಯ ವೇಷ ಧರಿಸಿ ಕಾಲೇಜಿಗೆ ಹೋಗುತ್ತಿದ್ದೆ ಮತ್ತು ಕ್ಯಾಂಟೀನ್‌ನಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಿದ್ದೆ. ನಾನು ನನ್ನ ಬಗ್ಗೆ ಮಾತನಾಡುತ್ತಿದ್ದೆ ಮತ್ತು ಕ್ರಮೇಣ ಅವರು ನನ್ನಲ್ಲಿ ಮಾತುಕತೆ ನಡೆಸಲು ಪ್ರಾರಂಭಿಸಿದರು ಎಂದು ಹೇಳಿದ್ದಾರೆ.
ರಹಸ್ಯ ಕಾರ್ಯಾಚರಣೆಯ ಸಮಯದಲ್ಲಿ ಪುಸ್ತಕ ಮತ್ತು ಬ್ಯಾಗ್ ಗಳನ್ನು ಹಿಡಿದು ಥೇಟ್ ವಿದ್ಯಾರ್ಥಿನಿಯಂತೆಯೆ ಕಾಲೇಜಿನ ಕ್ಯಾಂಪಸ್ ನೊಳಗೆ ಪ್ರವೇಶಿಸಿ ರ‍್ಯಾಗಿಂಗ್ ಗ್ಯಾಂಗ್ ಅನ್ನು ಪತ್ತೆ ಹಚ್ಚುವಲ್ಲಿ ಶಾಲಿನಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.