ಮಾಸ್ಕೋ (ರಷ್ಯಾ) :ಟೆಲಿಗ್ರಾಮ್ ಆಯಪ್ನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಒಡೆಸಾ ಪ್ರಾದೇಶಿಕ ಮಿಲಿಟರಿ ಆಡಳಿತದ ಮುಖ್ಯಸ್ಥ ಒಲೆಹ್ ಕಿಪರ್, ಡ್ಯಾನ್ಯೂಬ್ನಲ್ಲಿನ ಬಂದರು ಮತ್ತು ಧಾನ್ಯ ಸಂಗ್ರಹಾಗಾರಗಳನ್ನು ಗುರಿಯಾಗಿಸಿಕೊಂಡು ರಷ್ಯಾ ದಾಳಿ ಮಾಡಿದೆ ಎಂದು ಹೇಳಿದ್ದಾರೆ. ಆದರೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಉಕ್ರೇನ್ನ ದಕ್ಷಿಣ ಒಡೆಸಾ ಪ್ರದೇಶದಲ್ಲಿನ ಡ್ಯಾನ್ಯೂಬ್ ನದಿಯ ಬಂದರಿನ ಮೇಲೆ ರಷ್ಯಾ ಪಡೆಗಳು ರಾತ್ರೋರಾತ್ರಿ ಡ್ರೋನ್ ದಾಳಿ ನಡೆಸಿ ಬಂದರನ್ನು ಹಾನಿಗೊಳಿಸಿವೆ ಎಂದು ಉಕ್ರೇನ್ ಅಧಿಕಾರಿಯನ್ನು ಉಲ್ಲೇಖಿಸಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.ರಷ್ಯಾ ಪಡೆಗಳು ಉಕ್ರೇನ್ನ ಡ್ಯಾನ್ಯೂಬ್ ನದಿಯ ಬಂದರಿನ ಮೇಲೆ ದಾಳಿ ಮಾಡಿದ್ದು, ಬಂದರಿಗೆ ದೊಡ್ಡ ಪ್ರಮಾಣದ ಹಾನಿಯಾಗಿದೆ. ರಷ್ಯಾ ಹಾರಿಬಿಟ್ಟ 13 ಡ್ರೋನ್ಗಳನ್ನು ಹೊಡೆದುರುಳಿಸಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ.
ಉಕ್ರೇನ್ ರಕ್ಷಣಾ ಪಡೆಗಳು ಉರೋಜೈನ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡಿವೆ ಮತ್ತು ತಮ್ಮ ಸ್ಥಾನಗಳನ್ನು ಬಲಪಡಿಸುತ್ತಿವೆ ಎಂದು ಉಕ್ರೇನ್ ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್ ವಕ್ತಾರ ಆಂಡ್ರಿ ಕೊವಲಿಯೊವ್ ಬುಧವಾರ ಬೆಳಗ್ಗೆ ರಾಷ್ಟ್ರೀಯ ದೂರದರ್ಶನ ಪ್ರಸಾರದಲ್ಲಿ ಹೇಳಿದರು. ರಷ್ಯಾ ಆಕ್ರಮಿತ ಡೊನೆಟ್ಸ್ಕ್ ನಗರದ ನೈಋತ್ಯಕ್ಕೆ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಉರೋಜೈನ್, ಸುಮಾರು ಎರಡು ವಾರಗಳ ಹಿಂದೆ ಉಕ್ರೇನಿಯನ್ ಸೈನಿಕರು ವಶಪಡಿಸಿಕೊಂಡ ಸ್ಟಾರೊಮೈಯೋರ್ಸ್ಕೆ ಗ್ರಾಮದ ಬಳಿ ಇದೆ.ಒಡೆಸಾ ಮತ್ತು ನೆರೆಯ ಮೈಕೊಲೈವ್ ಪ್ರದೇಶದಲ್ಲಿ ದಾಳಿ ನಡೆಸಲು ಯತ್ನಿಸಿದ 13 ಶಹೀದ್ ಡ್ರೋನ್ಗಳನ್ನು ನಾಶಪಡಿಸಲಾಗಿದೆ ಎಂದು ಉಕ್ರೇನ್ ವಾಯುಪಡೆ ಬುಧವಾರ ತಿಳಿಸಿದೆ. ಏತನ್ಮಧ್ಯೆ, ಇತ್ತೀಚಿನ ದಿನಗಳಲ್ಲಿ ಭೀಕರ ಯುದ್ಧ ನಡೆದ ಪೂರ್ವ ಡೊನೆಟ್ಸ್ಕ್ ಪ್ರದೇಶದ ಉರೋಜೈನ್ ಗ್ರಾಮವನ್ನು ತನ್ನ ಪಡೆಗಳು ಮತ್ತೆ ವಶಪಡಿಸಿಕೊಂಡಿವೆ ಎಂದು ಉಕ್ರೇನ್ ಹೇಳಿಕೊಂಡಿದೆ.
2022ರ ಫೆಬ್ರವರಿ 24 ರಂದು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಉತ್ತರ, ಪೂರ್ವ ಮತ್ತು ದಕ್ಷಿಣ ದಿಕ್ಕುಗಳಿಂದ ಉಕ್ರೇನ್ ಮೇಲೆ ಆಕ್ರಮಣ ಪ್ರಾರಂಭಿಸಿದ್ದರು. ಜನಾಂಗೀಯ ರಷ್ಯನ್ನರನ್ನು ರಕ್ಷಿಸಲು, ಉಕ್ರೇನ್ನ ನ್ಯಾಟೋ ಸದಸ್ಯತ್ವವನ್ನು ತಡೆಗಟ್ಟಲು ಮತ್ತು ಅದನ್ನು ರಷ್ಯಾದ ಪ್ರಭಾವ ವಲಯದಲ್ಲಿ ಉಳಿಸಿಕೊಳ್ಳಲು ಯುದ್ಧ ಸಾರಲಾಗಿದೆ ಎಂದು ಪುಟಿನ್ ಆಗ ಹೇಳಿದ್ದರು.
ಉಕ್ರೇನ್ ಮೇಲೆ ದಾಳಿ ಆರಂಭಿಸಿದ ನಂತರ ಇದೇ ಮೊದಲ ಬಾರಿಗೆ ರಷ್ಯಾದ ರೂಬಲ್ ಅತ್ಯಂತ ಕಡಿಮೆ ಮೌಲ್ಯವನ್ನು ತಲುಪಿದೆ. ಸೋಮವಾರ ರಷ್ಯಾದ ಕರೆನ್ಸಿ ಡಾಲರ್ಗೆ 101 ರೂಬಲ್ ಮಟ್ಟಕ್ಕೆ ಕುಸಿದಿದೆ. ವರ್ಷದ ಆರಂಭದಿಂದ ರೂಬಲ್ ಮೌಲ್ಯದಲ್ಲಿ ಶೇ 25 ಕ್ಕಿಂತ ಹೆಚ್ಚು ಕುಸಿತವಾಗಿದ್ದು, ರೂಬಲ್ ಸುಮಾರು 17 ತಿಂಗಳ ಕನಿಷ್ಠ ಮಟ್ಟವನ್ನು ತಲುಪಿದೆ. ಕಳೆದುಕೊಂಡ ಭೂಪ್ರದೇಶವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿರುವ ಉಕ್ರೇನ್ ನ ಮಿಲಿಟರಿ ಸಂಪನ್ಮೂಲಗಳು ಹಾಗೂ ಶಸ್ತ್ರಾಸ್ತ್ರಗಳು ಬಹುತೇಕ ಖಾಲಿಯಾಗಿವೆ ಎಂದು ರಷ್ಯಾದ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಮಂಗಳವಾರ ಹೇಳಿದ್ದಾರೆ. ಪಾಶ್ಚಿಮಾತ್ಯ ದೇಶಗಳ ಸಂಪೂರ್ಣ ಬೆಂಬಲದ ಹೊರತಾಗಿಯೂ ಉಕ್ರೇನ್ ಸಶಸ್ತ್ರ ಪಡೆಗಳಿಗೆ ಯಶಸ್ವಿ ದಾಳಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಶೋಯಿಗು ಮಾಸ್ಕೋದಲ್ಲಿ ನಡೆದ ಭದ್ರತಾ ಸಮ್ಮೇಳನದಲ್ಲಿ ಹೇಳಿದರು. ಯುದ್ಧದ ಪ್ರಾಥಮಿಕ ಫಲಿತಾಂಶಗಳು ಉಕ್ರೇನ್ನ ಮಿಲಿಟರಿ ಸಂಪನ್ಮೂಲಗಳು ಬಹುತೇಕ ಖಾಲಿಯಾಗಿವೆ ಎಂದು ತೋರಿಸುತ್ತವೆ ಎಂದು ಅವರು ಹೇಳಿದರು.