ವಾರ್ಷಿಕ 3,000 ಭಾರತೀಯ ವೃತ್ತಿಪರರಿಗೆ ವೀಸಾ ನೀಡಿಕೆ: ಯುಕೆ ಪ್ರಧಾನಿ ರಿಷಿ ಸುನಕ್ ರಿಂದ ಹಸಿರು ನಿಶಾನೆ

ಲಂಡನ್: ಯುಕೆ ಪ್ರಧಾನಿ ರಿಷಿ ಸುನಕ್ ಅವರು ಪ್ರತಿ ವರ್ಷ ಭಾರತದ ಯುವ ವೃತ್ತಿಪರರಿಗೆ ಯುಕೆಯಲ್ಲಿ ಕೆಲಸ ಮಾಡಲು 3,000 ವೀಸಾಗಳಿಗೆ ಚಾಲನೆ ನೀಡಿದ್ದಾರೆ. ಇಂತಹ ಯೋಜನೆಯಿಂದ ಪ್ರಯೋಜನ ಪಡೆಯುವ ಮೊದಲ ವೀಸಾ-ರಾಷ್ಟ್ರೀಯ ದೇಶ ಭಾರತ ಎಂದು ಬ್ರಿಟಿಷ್ ಸರ್ಕಾರ ಹೇಳಿದ್ದು, ಕಳೆದ ವರ್ಷ ಒಪ್ಪಿಕೊಂಡ ಯುಕೆ-ಭಾರತ ವಲಸೆ ಮತ್ತು ಚಲನಾ ಪಾಲುದಾರಿಕೆಯ ಬಲವನ್ನು ಇದು ಎತ್ತಿ ತೋರಿಸುತ್ತದೆ ಎಂದಿದೆ.

“ಇಂದು ಯುಕೆ-ಇಂಡಿಯಾ ಯಂಗ್ ಪ್ರೊಫೆಷನಲ್ಸ್ ಸ್ಕೀಮ್ ಅನ್ನು ದೃಢೀಕರಿಸಲಾಗಿದೆ, 18-30 ವರ್ಷ ವಯಸ್ಸಿನ ಪದವೀಧರ ಭಾರತೀಯ ಪ್ರಜೆಗಳಿಗೆ ಎರಡು ವರ್ಷಗಳವರೆಗೆ ವಾಸಿಸಲು ಮತ್ತು ಕೆಲಸ ಮಾಡಲು ಯುಕೆಗೆ ಬರಲು 3,000 ವೀಸಾಗಳನ್ನು ನೀಡುತ್ತದೆ” ಎಂದು ಯುಕೆ ಪ್ರಧಾನ ಮಂತ್ರಿಗಳ ಕಚೇರಿ ಟ್ವೀಟ್‌ನಲ್ಲಿ ತಿಳಿಸಿದೆ.

ಜಿ20 ಶೃಂಗಸಭೆಯ 17 ನೇ ಆವೃತ್ತಿಯಲ್ಲಿ ಭಾರತೀಯ ಮೂಲದ ಯುಕೆ ಪ್ರಧಾನಿ ರಿಷಿ ಸುನಕ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಥಮ ಭೇಟಿಯ ಕೆಲವೇ ಗಂಟೆಗಳ ನಂತರ ಡೌನಿಂಗ್ ಸ್ಟ್ರೀಟ್ ನಿಂದ ಈ ಪ್ರಕಟಣೆ ಬಂದಿದೆ.

Image: Narendra Modi/Twitter

ಭಾರತದೊಂದಿಗಿನ ನಮ್ಮ ದ್ವಿಪಕ್ಷೀಯ ಸಂಬಂಧ ಮತ್ತು ನಮ್ಮ ಎರಡೂ ಆರ್ಥಿಕತೆಗಳನ್ನು ಬಲಪಡಿಸಲು ಇಂಡೋ-ಪೆಸಿಫಿಕ್ ಪ್ರದೇಶದೊಂದಿಗೆ ಬಲವಾದ ಸಂಪರ್ಕಗಳನ್ನು ರೂಪಿಸುವ ಯುಕೆಯ ವ್ಯಾಪಕ ಬದ್ಧತೆಗೆ ಈ ಯೋಜನೆಯ ಪ್ರಾರಂಭವು ಮಹತ್ವದ ಕ್ಷಣವಾಗಿದೆ ಎಂದು 10 ಡೌನಿಂಗ್ ಸ್ಟ್ರೀಟ್ ಹೇಳಿಕೆಯಲ್ಲಿ ತಿಳಿಸಿದೆ.

ಇಂಡೋ-ಪೆಸಿಫಿಕ್ ಪ್ರದೇಶದ ಯಾವುದೇ ಇತರ ದೇಶಕ್ಕಿಂತ ಭಾರತದೊಂದಿಗೆ ಹೆಚ್ಚಿನ ಸಂಪರ್ಕವನ್ನು ಯುಕೆ ಹೊಂದಿದೆ ಎಂದು ಅದು ಹೇಳಿದೆ. ಯುಕೆಯಲ್ಲಿರುವ ಎಲ್ಲಾ ಅಂತರಾಷ್ಟ್ರೀಯ ವಿದ್ಯಾರ್ಥಿಗಳ ಪೈಕಿ ಸುಮಾರು ಕಾಲು ಭಾಗದಷ್ಟು ಜನರು ಭಾರತದಿಂದ ಬಂದವರು ಮತ್ತು ಯುಕೆಯಲ್ಲಿ ಭಾರತೀಯ ಹೂಡಿಕೆಯು ದೇಶದಾದ್ಯಂತ 95,000 ಉದ್ಯೋಗಗಳನ್ನು ಬೆಂಬಲಿಸುತ್ತಿದೆ.

ಪ್ರಸ್ತುತ ಯುಕೆಯು ಭಾರತದೊಂದಿಗೆ 24 ಬಿಲಿಯನ್ ಪೌಂಡ್ ಗಳ ವ್ಯಾಪಾರ ಒಪ್ಪಂದದ ಮಾತುಕತೆ ನಡೆಸುತ್ತಿದೆ. ಈ ಒಪ್ಪಂದಕ್ಕೆ ಅಂಕಿತ ಬಿದ್ದರೆ ಅದು ಯಾವುದೆ ಯುರೋಪಿಯನ್ ರಾಷ್ಟ್ರದೊಂದಿಗೆ ಭಾರತ ಮಾಡಿದ ಪ್ರಪ್ರಥಮ ಒಪ್ಪಂದವಾಗಲಿದೆ.