ಭಾರತದ 75 ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ಆಚರಣೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ನಿಂದ ಬ್ರಿಟನ್ನಲ್ಲಿ ಅಧ್ಯಯನ ಮಾಡಲು ಭಾರತೀಯ ವಿದ್ಯಾರ್ಥಿಗಳಿಗೆ 75 ಸಂಪೂರ್ಣ ಅನುದಾನಿತ ವಿದ್ಯಾರ್ಥಿವೇತನವನ್ನು ನೀಡಲು ಯುಕೆ ಸರ್ಕಾರವು ನಿರ್ಧರಿಸಿದ್ದು, ಭಾರತದಲ್ಲಿನ ಪ್ರಮುಖ ಕಂಪನಿಗಳೊಂದಿಗೆ ಪಾಲುದಾರಿಕೆ ನಡೆಸಿದೆ.
ಇಲ್ಲಿಯವರೆಗೆ ಒಂದು ವರ್ಷದ ಸ್ನಾತಕೋತ್ತರ ಕಾರ್ಯಕ್ರಮಕ್ಕಾಗಿ ನೀಡಲಾದ ಅತಿ ಹೆಚ್ಚು ಸಂಖ್ಯೆಯ ಸಂಪೂರ್ಣ ಅನುದಾನಿತ ವಿದ್ಯಾರ್ಥಿವೇತನ ಇದಾಗಿದೆ ಎಂದು ಬ್ರಿಟಿಷ್ ಹೈ ಕಮಿಷನ್ ಹೇಳಿದೆ.
ಎಚ್ಎಸ್ಬಿಸಿ, ಪಿಯರ್ಸನ್ ಇಂಡಿಯಾ, ಹಿಂದೂಸ್ತಾನ್ ಯೂನಿಲಿವರ್, ಟಾಟಾ ಸನ್ಸ್ ಮತ್ತು ಡ್ಯುಯೊಲಿಂಗೋ ಮುಂತಾದ ಕಂಪನಿಗಳು ಈ ವಿಶೇಷ ಉಪಕ್ರಮವನ್ನು ಬೆಂಬಲಿಸುತ್ತಿವೆ.
ಒಂದು ವರ್ಷದ ಸ್ನಾತಕೋತ್ತರ ಪದವಿಗಾಗಿ ಚೆವೆನಿಂಗ್ ವಿದ್ಯಾರ್ಥಿವೇತನವನ್ನು ಇದು ಒಳಗೊಂಡಿದೆ ಮತ್ತು ಯಾವುದೇ ಮಾನ್ಯತೆ ಪಡೆದ ಯುಕೆ ವಿಶ್ವವಿದ್ಯಾಲಯದಲ್ಲಿ ಯಾವುದೇ ವಿಷಯವನ್ನು ಅಧ್ಯಯನ ಮಾಡಲು ಅವಕಾಶವಿದೆ. ಇದಲ್ಲದೆ, ಭಾರತದಲ್ಲಿನ ಬ್ರಿಟಿಷ್ ಕೌನ್ಸಿಲ್ 150 ಕ್ಕೂ ಹೆಚ್ಚು ಯುಕೆ ವಿಶ್ವವಿದ್ಯಾಲಯಗಳಲ್ಲಿ 12,000 ಕ್ಕೂ ಹೆಚ್ಚು ಕೋರ್ಸ್ಗಳನ್ನು ಒಳಗೊಂಡಿರುವ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (ಸ್ಟೆಮ್) ವಿಷಯದಲ್ಲಿ ಮಹಿಳೆಯರಿಗೆ ಕನಿಷ್ಠ 18 ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ಜೊತೆಗೆ ಬ್ರಿಟಿಷ್ ಕೌನ್ಸಿಲ್ ಆರು ಇಂಗ್ಲಿಷ್ ವಿದ್ಯಾರ್ಥಿವೇತನವನ್ನು ಸಹ ನೀಡುತ್ತಿದೆ.
ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಸರ್ಕಾರದಿಂದ ಬ್ರಿಟಿಷ್ ಮತ್ತು ಭಾರತೀಯ ನಾಯಕರು ಇಂಡಿಯಾ ಗ್ಲೋಬಲ್ ಫೋರಮ್ಗಾಗಿ ಲಂಡನ್ನಲ್ಲಿ ಒಟ್ಟುಗೂಡುವ ಸಂದರ್ಭದಲ್ಲಿ ಈ ಘೋಷಣೆ ಮಾಡಲಾಗಿದೆ. ಭಾರತದ 75 ನೇ ವರ್ಷದಲ್ಲಿ, ಇದು ಒಂದು ದೊಡ್ಡ ಮೈಲಿಗಲ್ಲು ಎಂದು ಭಾರತದ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಲಂಡನ್ನ ಇಂಡಿಯಾ ಗ್ಲೋಬಲ್ ಫೋರಮ್ ಯುಕೆ-ಇಂಡಿಯಾ ವೀಕ್ ನಲ್ಲಿ ತಿಳಿಸಿದ್ದಾರೆ.