ಬದುಕಿಗೆ ಬಲ, ಯುಗಾದಿಯ ಫಲ: ಯುಗಾದಿ ವಿಶೇಷ ಬರಹ

ಯುಗಾದಿ ಎಂದರೆ ಹೊಸತರ ಸಮ್ಮಿಶ್ರಣ. ಈ ಯುಗಾದಿಯಲ್ಲಿ ಫಲವೂ ಸಿಗುತ್ತದೆ. ಯುಗಾದಿಯಂದು ಪಂಚಾಂಗ ಶ್ರವಣ ಮಾಡುವುದರಿಂದ ಹೆಚ್ಚಿನ ಪ್ರಯೋಜನವಿದೆ. ಪಂಚ ಎಂದರೆ ಐದು, ಅಂಗ ಎಂದರೆ ಭಾಗ, ವಾರ, ತಿಥಿ, ಯೋಗ, ನಕ್ಷತ್ರ ಮತ್ತು ಕರಣ ಇವೇ ಆ ಐದು ಅಂಗಗಳು. ಈ ಐದು ಭಾಗಗಳಿಂದ ಕೂಡಿದ ವಿವರವೇ ಪಂಚಾಂಗ, ಪಂಚ + ಅಂಗ = ಪಂಚಾಂಗ, ಇವುಗಳಲ್ಲಿ ಒಂದು ಭಾಗವನ್ನು ಬಿಟ್ಟರೂ ಪಂಚಾಂಗ ಶಾಸ್ತ್ರ ಪೂರ್ಣವಾಗುವುದಿಲ್ಲ. ಇದು ಐದು ಬೆರಳುಗಳ ಪೂರ್ಣಹಸ್ತವಿದ್ದಂತೆ. ಯಾವುದೇ ಶುಭ ಕಾರ್ಯವನ್ನು ನಡೆಸಲು, ಶುಭಕರವಾದ ವಾರ, ತಿಥಿ, ನಕ್ಷತ್ರ, ಸಮಯ ಮು೦ತಾದವುಗಳನ್ನು ಪಂಚಾಂಗದ ಮೂಲಕವೇ ತಿಳಿಯಬೇಕಾಗುತ್ತದೆ. ಆದ್ದರಿಂದ ಈ ದಿನ ಪಂಚಾಂಗಕ್ಕೆ ಎಲ್ಲಿಲ್ಲದ ಮಹತ್ವವಿರುತ್ತದೆ.

ಯುಗಾದಿಯಂದು ಹೊಸ ಪಂಚಾಂಗವನ್ನು ತಂದು ದೇವರ ಮುಂದಿಟ್ಟು ಅರಿಶಿನ-ಕುಂಕುಮ ಹಚ್ಚಿ ಪೂಜಿಸುತ್ತಾರೆ. ಸಾಯಂಕಾಲ ಗ್ರಾಮಸ್ಥರು ದೇವಸ್ಥಾನದಲ್ಲಿ ಸೇರಿ ಪಂಚಾಂಗ ಶ್ರವಣ ಮಾಡುತ್ತಾರೆ. ಓದು ಬರಹ ಬಲ್ಲ ಮನೆಯ ಹಿರಿಯರು ಅಥವಾ ಪುರೋಹಿತರು ಪಠಿಸಿ ಅದನ್ನು ಹೇಳುತ್ತಾರೆ.
ಈ ಪ೦ಚಾಂಗ ಶ್ರವಣದ ಫಲವನ್ನು ಹೀಗೆ ಹೇಳಲಾಗಿದೆ. ತಿಥಿಯ ಶ್ರವಣದಿಂದ ಲಕ್ಷ್ಮಿಯು ಲಭಿಸುತ್ತಾಳೆ, ವಾರದ ಶ್ರವಣದಿಂದ ಆಯುಸ್ಸು ವೃದ್ಧಿಯಾಗುತ್ತದೆ, ನಕ್ಷತ್ರ ಶ್ರವಣದಿಂದ ಪಾಪ ನಾಶವಾಗುತ್ತದೆ, ಯೋಗ ಶ್ರವಣದಿಂದ ರೋಗ ನಿವಾರಣೆಯಾಗುತ್ತದೆ, ಕರಣ ಶ್ರವಣದಿಂದ ಇಚ್ಛಿಸಿದ ಕಾರ್ಯಸಿದ್ಧಿ ಆಗುತ್ತದೆ. ಇವು ಪಂಚಾಂಗ ಶ್ರವಣದ ಉತ್ತಮ ಫಲಗಳಾಗಿವೆ. ಇದರ ನಿತ್ಯ ಶ್ರವಣದಿಂದ ಗಂಗಾ ಸ್ನಾನದ ಫಲವು ಲಭಿಸುತ್ತದೆ. ಚಂದ್ರ ದರ್ಶನದ ಫಲ ಯುಗಾದಿಯ ದಿನ ಮತ್ತೊಂದು ವಿಶೇಷವೇನೆಂದರೆ ಚಂದ್ರ ದರ್ಶನ ಮಾಡುವುದು. ನವಗ್ರಹಗಳಲ್ಲಿ ಒಂದಾದ ಚಂದ್ರನು ಶುದ್ಧತೆ, ಬುದ್ದಿವಂತಿಕೆ ಮತ್ತು ನಡವಳಿಕೆಯ ಸಂಕೇತವಾಗಿ ಬಿಂಬಿಸಲಾಗಿದೆ.

ಅಂತಹ ಚ೦ದ್ರನನ್ನು ಹೊಸ ವರ್ಷದ ಯುಗಾದಿಯಂದು ವೀಕ್ಷಿಸಿದರೆ ಇಡೀ ವರ್ಷವೆಲ್ಲಾ ಸುಖ ಸಂತೋಷದಿಂದ ಬಾಳಬಹುದೆಂಬ ನಂಬಿಕೆ ಹಿಂದಿನಿಂದಲೂ ವಾಡಿಕೆಯಾಗಿದೆ. ಇಡೀ ವರ್ಷದಲ್ಲಿ ಯಾವುದೇ ಅಪಾದನೆ, ಅಪಕೀರ್ತಿ, ಕಳಂಕಗಳು ಒದಗುವುದಿಲ್ಲ ಮತ್ತು ಎಲ್ಲಾ ಕಷ್ಟಗಳೂ ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ. ಯುಗಾದಿಯ ವ್ಯಾಪಾರ ಯುಗಾದಿ ಹಬ್ಬದ ದಿನ ಎಲ್ಲಾ ಅಂಗಡಿಗಳಲ್ಲಿ ವ್ಯಾಪಾರ ಜೋರು, ಈ ಹಬ್ಬದ ದಿನ ಹೊಸ ಬಟ್ಟೆ ಧರಿಸುವುದು ಒಳ್ಳೆಯದು ಎಂದು ಎಲ್ಲಾ ಬಟ್ಟೆ ಅಂಗಡಿಗಳಲ್ಲಿ ಜನರ ಗುಂಪು ಇರುತ್ತದೆ. ಇನ್ನು ಈ ದಿನ ಚಿನ್ನವನ್ನು ಕೊಂಡರೆ ಶುಭವೆಂದು ಹಾಗೂ ಹೆಚ್ಚುತ್ತದೆ ಎಂಬುದು ಕೆಲವರ ನಂಬಿಕೆ. ನಿಮಗೂ ಈ ಯುಗಾದಿ ಒಳಿತಿನ ಫಲ ಕೊಡಲಿ.