ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ. ಆದರೆ ನಾವು ಕಳೆದ ಸಮಯ ಮಾತ್ರ ಮರಳಿ ಬರುವುದಿಲ್ಲ. ನಮ್ಮಹಿಂದೂಗಳಲ್ಲಿ ಹಬ್ಬಗಳ ಆಚರಣೆ ಬಹಳ ಇದೆ. ಅವುಗಳಲ್ಲಿ ಯುಗಾದಿಯು ಬಹಳ ಮುಖ್ಯವಾದ ಹಬ್ಬವಾಗಿದೆ. ಯುಗಾದಿ ಎ೦ಬ ಪದ ಸಂಸ್ಕೃತದ ಯುಗ ಮತ್ತು ಆದಿ ಎಂಬ ಎರಡು ಪದಗಳಿಂದ ಕೂಡಿದೆ. ಯುಗಾದಿ ಎಂದರೆ ಯುಗದ ಆದಿ, ವರ್ಷದ ಆದಿ, ವರ್ಷದ ಆರಂಭ ಎಂಬುದಾಗಿ ಹೇಳಬಹುದಾಗಿದೆ. ಮಾಹೆಗಳಲ್ಲಿ ಚೈತ್ರ ಇದ್ದಂತೆ, ಋತುಗಳಲ್ಲಿ ವಸಂತ ಋತು ಇದ್ದಂತೆ, ಹಿಂದೂ ಧರ್ಮಕ್ಕನುಸಾರ ಹಬ್ಬಗಳಲ್ಲಿ ಯುಗಾದಿ ಹಬ್ಬವು ಪ್ರಪ್ರಥಮ ಹಬ್ಬವಾಗಿ ಆಚರಿಸಲ್ಪಡುವುದು. ಯುಗಾದಿ ಹಬ್ಬದ ದಿನವು ತ್ರಿಮೂರ್ತಿಗಳಲ್ಲಿ ಒಬ್ಬನೂ ಸೃಷ್ಟಿಕರ್ತನಾದ ಬ್ರಹ್ಮದೇವನು ಜಗತ್ತನ್ನು ಸೃಷ್ಟಿ ಮಾಡಿದ ದಿನ. ಅಂದಿನಿಂದಲೇ ವರ್ಷ, ಋತುಗಳು, ಮಾಸಗಳು, ಗ್ರಹಗಳು, ನಕ್ಷತ್ರಗಳು ಸೃಷ್ಟಿಸಿದನೆಂಬ ನಂಬಿಕೆ ಇದೆ. ವೇದಗಳ ಮಂತ್ರದಲ್ಲಿ ವರ್ಷವನ್ನು ರಥಕ್ಕೂ, ಉತ್ತರಾಯಣ ಮತ್ತು ದಕ್ಷಿಣಾಯನವನ್ನು ಅದರ ಚಕ್ರಗಳಿಗೂ ಹೋಲಿಸಲಾಗಿದೆ. ಆದ್ದರಿಂದಲೇ ವರ್ಷವನ್ನು ಯುಗ ಎಂದೂ, ಅದರ ಮೊದಲ ದಿನವನ್ನು ಯುಗಾದಿ ಎಂದೂ ಕರೆಯಲಾಗಿದೆ.


ಸೂರ್ಯ ಚಂದ್ರರ ಹಿನ್ನೆಲೆಯಲ್ಲಿ ಯುಗಾದಿ ಎರಡು ಬಾರಿ ಆಚರಣೆಯಲ್ಲಿದೆ. ಸೌರಮಾನ ಮತ್ತು ಚಾಂದ್ರಮಾನದ ಹಬ್ಬಗಳು ಪ್ರದೇಶಾನಸಾರವಾಗಿ ರೂಢಿಯಲ್ಲಿವೆ. ಈ ಚಾಂದ್ರಮಾನ ಯುಗಾದಿಯನ್ನು ಪ್ರಥಮ ತಿಥಿಯಾದ ಪಾಡ್ಯದಲ್ಲಿಯೇ ಸಾಂಪ್ರದಾಯಿಕವಾಗಿ ಆಚರಿಸಬೇಕು. ಸೌರಮಾನದಂದು ಯುಗಾದಿಯನ್ನು ಮೇಷ ಸಂಕ್ರಮಣದಲ್ಲಿ ಆಚರಿಸಬೇಕು. ಈ ಆಚರಣೆಯಲ್ಲೂ ಕೆಲವು ವಿಶೇಷಗಳಿವೆ.

ಐತಿಹಾಸಿಕ ಕಾರಣಗಳು:
ಶ್ರೀರಾಮನು ಈ ದಿನವೇ ವಾಲಿಯನ್ನು ವಧಿಸಿದನು. ದುಷ್ಟ ಪ್ರವೃತ್ತಿಯುಳ್ಳ ರಾವಣ ಮತ್ತು ರಾಕ್ಷಸರನ್ನು ವಧಿಸಿ ಅಯೋಧ್ಯೆಗೆ ಹಿಂದಿರುಗಿ ಈ ಯುಗಾದಿ ಶುಭದಿಂದು ಶ್ರೀರಾಮಚಂದ್ರ ಪಟ್ಟಾಭಿಷಿಕ್ತನಾಗುತ್ತಾನೆ. ಹಾಗೆಯೇ ಉಜ್ಜಯಿನಿಯ ವಿಕ್ರಮಾದಿತ್ಯನನ್ನು ಶಾಲಿವಾಹನ ಪರಾಭವಗೊಳಿಸಿ ತನ್ನ ವಿಜಯವನ್ನು ಸಂಪಾದಿಸಿದ್ದು ಇದೇ ದಿನ. ಈ ದಿನದಿ೦ದಲೇ ಶಾಲಿವಾಹನ ಶಕೆ ಪ್ರಾರಂಭವಾಯಿತು. ಭಗವಂತ ಶ್ರೀಕೃಷ್ಣನು ನೃಪಕೇತುವಿಗೆ ದರ್ಶನ ನೀಡಿದ್ದು ವಿಕ್ರಮನಾಮ ಚೈತ್ರ ಶುದ್ಧ ಪ್ರತಿಪದೆಯಂದು. ಈ ಯುಗಾದಿ ಹಬ್ಬ ಜೈನರಿಗೂ ಪವಿತ್ರವಾದದ್ದು. ಹದಿನಾಲ್ಕನೇ ತೀರ್ಥಂಕರನಾದ ಮಲ್ಲಿನಾಥನು ಜನಿಸಿದ್ದು, ಯುಗಾದಿಯ ದಿನದಂದು ಎಂದು ಜೈನ ಪುರಾಣ ತಿಳಿಸುತ್ತದೆ. ಗಂಗೆ ಶಿವನ ಜಟೆಯಲ್ಲಿ ಬಂಧಿತಳಾದದ್ದು ರುಧಿರೋದ್ಗಾರಿ ಸಂವತ್ಸರದ ಚೈತ್ರಮಾಸದ ಯುಗಾದಿಯಂದು. ಎಲ್ಲವೂ ಚೈತ್ರಶುದ್ಧ ಪ್ರಥಮದಿನ ಇರುವುದರಿಂದ ಈ ದಿನಕ್ಕೆ ಹೆಚ್ಚು ಮಹತ್ವ ಬಂದಿದೆ. ಅಧ್ಯಾತ್ಮಕ ಕಾರಣಗಳು
ವರ್ಷದಲ್ಲಿನ ಮೂರೂವರೆ ಮುಹೂರ್ತಗಳಲ್ಲಿ ಒಂದು ಯುಗಾದಿ ಪಾಡ್ಯ, ಅಕ್ಷಯ ತದಿಗೆ ಮತ್ತು ದಸರಾ (ವಿಜಯದಶಮಿ). ಇವು ಪ್ರತ್ಯೇಕವಾಗಿ ಒಂದೊಂದು ಮತ್ತು ಕಾರ್ತಿಕ ಶುದ್ಧ ಪ್ರತಿಪದೆಯು ಅರ್ಧ (ದೀಪಾವಳಿ). ಹೀಗೆ ಮೂರೂವರೆ ಮುಹೂರ್ತಗಳಿವೆ. ಈ
ದಿನಗಳಂದು ಮುಹೂರ್ತ ನೋಡುವ ಅವಶ್ಯಕತೆ ಇಲ್ಲ. ಈ ದಿನಗಳಲ್ಲಿ ಪ್ರತಿ ಘಳಿಗೆಯೂ ಶುಭ ಮುಹೂರ್ತವೆ ಆಗಿರತ್ತದೆ.


ಈ ಮುಹೂರ್ತದ ಪೈಕಿ ಯುಗಾದಿ ಹಿಂದೂಗಳಿಗೆ ಹೊಸ ವರ್ಷದ ಆರಂಭದ ದಿನವಾಗಿದೆ. ಈ ಹಬ್ಬ ಹಳೆಯ ಹೊಸತನ್ನು ಸೇರಿಸುವ ಕೊಂಡಿ, ಫಾಲ್ಗುಣ ಬಹುಳ ಅಮಾವಾಸ್ಯೆಯ ದಿನ ಹಳೆಯ ವರ್ಷಕ್ಕೆ ವಿದಾಯ ಹೇಳಿ, ಮಾರನೇ ದಿನ ಚೈತ್ರ ಮಾಸದ ಶುಕ್ಲ ಪ್ರತಿಪದೆಯಂದು ಯುಗಾದಿ ಎಂದು ಹೊಸ ವರ್ಷವನ್ನು ಆಚರಿಸುತ್ತೇವೆ. ಹಿಂದಿನ ವರ್ಷದ ಕಹಿ ಘಟನೆಗಳನ್ನು ಮರೆತು ಸಿಹಿ ಸಂತಸದ ಕ್ಷಣಗಳನ್ನು ಭವಿಷ್ಯದ ಸುಖಕ್ಕಾಗಿ ಯುಗಾದಿ ಆಚರಿಸುತ್ತೇವೆ.
ದೇವರ ದಿವ್ಯ ಸಂದೇಶ:
ಪ್ರತಿಯೊಂದು ಹಬ್ಬವೂ ನಮ್ಮ ಬದುಕಿನ ದಿವ್ಯ ಸಂದೇಶವನ್ನೇ ನೀಡುತ್ತದೆ. ಯುಗಾದಿ ಹಬ್ಬದಂದು ದೇವರಿಗೆ ಅರ್ಪಿಸುವ ಬೇವು-ಬೆಲ್ಲ, ದೈವೀಗುಣ ಮೈಗೂಡಿಸಿಕೊಳ್ಳುತ್ತ (ಬೆಲ್ಲ), ಪ್ರಕೃತಿಗಾಗಿ ಹಂಬಲಿಸುತ್ತ (ಬೇವು) ತಾಳೆಗೆಡದೆ ಮುನ್ನಡೆಯವವರಿಗೆ ತನ್ನ ಕೃಪಾ ಪ್ರಸಾದದ ಸವಿ ಕಟ್ಟಿಟ್ಟಿದ್ದು ಎಂಬ ದೇವರ ದಿವ್ಯ ಸಂದೇಶವನ್ನೇ ಬಿಂಬಿಸುತ್ತದೆ.


ನೈಸರ್ಗಿಕ ಕಾರಣಗಳು:
ಯುಗಾದಿಯನ್ನು ಸಂತೋಷ ಸಂಭ್ರಮದಿಂದ ಸ್ವಾಗತಿಸಲು ಇಡೀ ಪ್ರಕೃತಿ ಸಜ್ಜಾಗಿರುತ್ತದೆ. ಎಲ್ಲೆಡೆ ಕಂಗೊಳಿಸುತ್ತಿರುವ ಚಿಗುರು ಹೊಸ ಚೈತನ್ಯವನ್ನು ಪ್ರತಿಬಿಂಬಿಸುವ ಹೊತ್ತಿನಲ್ಲಿಯೇ, ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಿಕೊಂಡ ಮರಗಿಡಗಳು, ಕಣ್ಣಿಗೆ ಸೊಬಗು ಮನಕ್ಕೆ ಉಲ್ಲಾಸವನ್ನು ನೀಡುತ್ತವೆ. ಮಾವು-ಬೇವು ಚಿಗುರಿ, ಆ ಚಿಗುರಿಗೆ ಮನಸೋತ ಕೋಗಿಲೆ ಹಾಡಲು ವಸಂತ ನಲಿಯಬೇಕು, ಇದು ಪ್ರಕೃತಿಯ ಸಹಜ ಧರ್ಮ,
ಬೇವು-ಬೆಲ್ಲ ನಮ್ಮ ಬದುಕಿನ ಸಿಹಿ-ಕಹಿಗಳ ಪ್ರತೀಕ. ನೋವು ನಲಿವನ್ನು ಸಮಚಿತ್ತದಿಂದ ಸ್ವೀಕರಿಸಬೇಕೆಂಬ ಭಾವ ಇದರಲ್ಲಿದೆ. ಬೇವು ಕಹಿಯ ಸಂಕೇತವಾದರೆ, ಬೆಲ್ಲ ಸಿಹಿಯ ಸಂಕೇತ. ಪ್ರತಿಯೊಬ್ಬರ ಜೀವನದಲ್ಲಿಯೂ ಕೇವಲ ಸಿಹಿಯೊಂದೇ ಅಂದರೆ ಸುಖವೇ ಬರುವುದು ಸಾಧ್ಯವಿಲ್ಲ. ಆಗಾಗ್ಗೆ ಕಹಿ ಅಂದರೆ ಕಷ್ಟಗಳು ಬರುತ್ತಿರುತ್ತವೆ. ಪ್ರತಿಯೊಬ್ಬರ ಜೀವನದಲ್ಲಿಯೂ ಏರುಪೇರುಗಳು, ನೋವು-ನಲಿವುಗಳು, ಕಷ್ಟ-ಸುಖಗಳು ಇದ್ದೇ ಇರುತ್ತವೆ. ಆದ್ದರಿಂದ ಬೇವು-ಬೆಲ್ಲವನ್ನು ಸವಿಯುವುದರ ಮೂಲಕ ಕಷ್ಟ -ಸುಖವನ್ನು ಸಮನಾಗಿ ಕಾಣಬೇಕೆನ್ನುವ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕು. ಕಷ್ಟ-ಸುಖವು ಒಂದೇ ನಾಣ್ಯದ ಎರಡು ಮುಖ ಇದ್ದ ಹಾಗೆ. ಜೀವನವು ಬರಿ ಸಿಹಿಯೂ ಅಲ್ಲ ಅಥವಾ ಕಹಿಯೂ ಅಲ್ಲ. ಎರಡರ ಸಮ ಮಿಶ್ರಣ ಬದುಕು. ಸುಖ ಬಂದಾಗ ಹಿಗ್ಗದೆ, ಕಷ್ಟ ಬಂದಾಗ ಕುಗ್ಗದೆ ಜೀವನದಲ್ಲಿ ಇರಬೇಕು. ಏನೇ ಕಷ್ಟ ಸಮಸ್ಯೆಗಳು ಬಂದರೂ ಧೈರ್ಯ, ತಾಳ್ಮೆ ಕಳೆದುಕೊಳ್ಳಬಾರದು. ಶಾಂತ ಸ್ವಭಾವ ಬೆಳೆಸಿಕೊಳ್ಳಬೇಕು. ಈಸಬೇಕು ಇದ್ದು ಜಯಿಸಬೇಕು ಎಂದು ದಾಸರು ಹೇಳಿಲ್ಲವೆ…..?


ಬೇವು-ಬೆಲ್ಲ ಅನ್ನೋ ಅಚ್ಚರಿ:
ಆಯುರ್ವೇದದ ಪ್ರಕಾರ ಬೇವು ರೋಗ ನಿವಾರಕ, ಕ್ರಿಮಿನಾಶಕ, ಆರೋಗ್ಯದಾಯಕ ಔಷಧೀಯ ಗುಣಗಳಿದ್ದು, ಬೇವು ಅಧರಕ್ಕೆ ಕಹಿಯಾದರೂ, ಉದರಕ್ಕೆ ಸಿಹಿ. ರೋಗನಿವಾರಕ ಗುಣಗಳಿಂದ ಕೂಡಿರುವ ಕಾರಣ ಪೂಜಾರ್ಹ ವೃಕ್ಷವೆಂಬ ಕೀರ್ತಿಗೆ ಪಾತ್ರವಾಗಿದೆ. ಬೇವಿನ ಹೂ ಎಲೆಗಿಂತ ಶ್ರೇಷ್ಠವಾದದ್ದು. ಬೇವಿನ ಎಲೆಗಳನ್ನು ದಿನ ಸೇವಿಸುವುದರಿಂದ ಸರ್ವ ಅನಿಷ್ಟಗಳು ನಾಶವಾಗುತ್ತವೆ. ಆಯುಸ್ಸು ವೃದ್ಧಿಯಾಗುತ್ತದೆ. ಬೇವಿನ ಎಲೆಗಳನ್ನು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ತಿನ್ನುತ್ತಾ ಬಂದರೆ ನಮ್ಮದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಈ ಯುಗಾದಿ ನಿಮಗೆಲ್ಲಾ ಒಳಿತನ್ನು ಮಾಡಲಿ.




















