ಉಡುಪಿ: ಕೋವಿಡ್-19 ಹಿನ್ನೆಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ವಿಭಿನ್ನ ರೀತಿಯಲ್ಲಿ ಆಚರಿಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದೆ.
ಪ್ರತಿ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಂದ ಪಥ ಸಂಚಲನ, ಸ್ವಚ್ಛತಾ ಕಾರ್ಯಕ್ರಮ, ಸರ್ವ ಧರ್ಮ ಪ್ರಾರ್ಥನೆ ಮುಂತಾದ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿತ್ತು. ಆದರೆ ಈ ಬಾರಿ ಕೊರೊನಾದಿಂದಾಗಿ ಶಾಲಾ ಕಾಲೇಜುಗಳಿಗೆ ರಜೆ ಇರುವುದರಿಂದ ಮಕ್ಕಳು ಮನೆಯಲ್ಲಿಯೇ ವಿಶಿಷ್ಟವಾದ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ಆಚರಿಸಲು ಚಟುವಟಿಕೆಗಳನ್ನು ನೀಡಿದೆ.
ಚಟುವಟಿಕೆ -1: ಮನೆಯ ಆವರಣವನ್ನು ಸ್ವಚ್ಛಗೊಳಿಸಿ ಭಾರತದ ನಕ್ಷೆಯನ್ನು ಒಳಗೊಂಡ ರಂಗೋಲಿ ಹಾಕಿ ಅದರ ಮಧ್ಯದಲ್ಲಿ ಅಥವಾ ಹತ್ತಿರದಲ್ಲಿ ಸಾಧ್ಯವಾದಷ್ಟು ಗಾತ್ರದ ಧ್ವಜವನ್ನು ಹಾರಿಸುವುದು. ಸಾಮಾಜಿಕ ಅಂತರವನ್ನು ಪಾಲಿಸಿಕೊಂಡು ತಮ್ಮ ಕುಟುಂಬ ಮತ್ತು ನೆರೆಹೊರೆಯವರನ್ನು ಆಹ್ವಾನಿಸಿ, ಅವರೊಂದಿಗೆ ಸ್ವಾತಂತ್ರ್ಯೋತ್ಸವ ಆಚರಿಸುವುದು.
ಚಟುವಟಿಕೆ-2: ಮನೆಯಲ್ಲಿ ಅಥವಾ ಸಮೀಪದ ಉದ್ಯಾನವನದಲ್ಲಿ ಯಾವುದೇ ಗಾತ್ರದ ರಾಷ್ಟ್ರಧ್ವಜವನ್ನು ಹಾರಿಸಿ ರಾಷ್ಟ್ರಗೀತೆ ಹಾಡಬೇಕು. ಈ ಚಟುವಟಿಕೆಗಳಿಗಾಗಿ ನೀಡಿರುವ ಹ್ಯಾಷ್ ಟ್ಯಾಗ್ ಬಳಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಪೋಟೋ ಅಥವಾ ವೀಡಿಯೋವನ್ನು ಹಂಚಿಕೊಳ್ಳಬೇಕು.
ಚಟುವಟಿಕೆ-3 : ನಿಮ್ಮ ಪ್ರದೇಶ, ತಾಲೂಕು ಅಥವಾ ಜಿಲ್ಲೆಯ ಯಾವುದೇ ಒಬ್ಬ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳಿದುಕೊಂಡು, ಅವರ ಬಗ್ಗೆ ಕುಟುಂಬ ಮತ್ತು ನೆರೆಹೊರೆಯವರಿಗೆ ಭಾಷಣ ಮೂಲಕ ತಿಳಿಸಬೇಕು.
ಚಟುವಟಿಕೆ-4: ಮನೆಯಲ್ಲಿಯೇ ಮುಖ ಗವಸು (ಮಾಸ್ಕ್) ತಯಾರಿಸಿ, ಅಗತ್ಯವಿರುವವರಿಗೆ ವಿತರಿಸಬೇಕು.
ಚಟುವಟಿಕೆ-5 : ಯುವ ಜನರಲ್ಲಿ ದೇಶಭಕ್ತಿಯ ಭಾವನೆ ಮೂಡಿಸುವ ಸಲುವಾಗಿ MYGOV.in ನಲ್ಲಿ ರಕ್ಷಣಾ ಸಚಿವಾಲಯ ಆಯೋಜಿಸಿರುವ, ಆತ್ಮ ನಿರ್ಭರ ಭಾರತ- ಸ್ವಾತಂತ್ರ್ಯ ಭಾರತ, ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸುವುದು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಯಾವುದೇ ಸಮಯದಲ್ಲಿ ದೇಶಸೇವೆ ಮತ್ತು ಸಮಾಜಸೇವೆಗೆ ಸಿದ್ದವಿದ್ದು, ಮಕ್ಕಳಲ್ಲಿ ಸದಾ ರಾಷ್ಟ್ರಪ್ರೇಮ ಜಾಗೃತವಿರಬೇಕು ಎನ್ನುವ ಉದ್ದಶದಿಂದ ಕೋವಿಡ್-19 ಈ ಸಮಯದಲ್ಲೂ ಸಹ ಮಕ್ಕಳು ಮನೆಯಲ್ಲಿ, ಸುರಕ್ಷಿತವಾಗಿದ್ದು ಕೊಂಡೇ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿ ತೊಡಗಿಕೊಳ್ಳಲು ಈ ವಿಭಿನ್ನ ಚಟುವಟಿಕೆಗಳನ್ನು ನೀಡಿದೆ. ಉಡುಪಿ ಜಿಲ್ಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ.
ಕೋವಿಡ್-19 ಸಂಕಷ್ಟದಲ್ಲಿ ಜಿಲ್ಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು 15000 ಹೆಚ್ಚು ಮಾಸ್ಕ್ ಗಳನ್ನು ತಯಾರಿಸಿದ್ದು, ಇವುಗಳನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ವಿತರಿಸಿದೆ.