ಉದ್ಯಾವರ ಮಹತೋಭಾರ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಬ್ರಹ್ಮಕುಂಭಾಭಿಷೇಕ ಸಂಪನ್ನ

ಉಡುಪಿ: ಧಾರ್ಮಿಕ, ಸಾಂಸ್ಕೃತಿಕ, ಸಂಸ್ಕಾರಯುತ ಸಮೃದ್ಧಿಯ ದೇವಾಲಯ ನಮ್ಮ ಸಂಪತ್ತು. ಭಕ್ತರು ಮತ್ತು ಭಗವಂತನನ್ನು ಸೇರಿಸುವ ಮಾಧ್ಯಮವಾಗಿದೆ. ನಮ್ಮ ಮನಸ್ಸಿನ ನೆಮ್ಮದಿಗಾಗಿ ಪ್ರಾಚೀನರು ಕಂಡುಕೊಂಡ ಪರಿಹಾರವಾಗಿದೆ. ಮಕ್ಕಳಲ್ಲಿ ಧರ್ಮ ಸಂಸ್ಕೃತಿಯ ಪರಿಜ್ನಾನ ಅರಳಿಸಿ ಹಿಂದು ಧರ್ಮವನ್ನು ಉಳಿಸೋಣ ಎಂದು ಕಾಣಿಯೂರು ಮಠದ ಶ್ರೀ ವಿದ್ಯಾಾವಲ್ಲಭತೀರ್ಥ ಶ್ರೀಪಾದರು ಹೇಳಿದರು.

ಅವರು ಉದ್ಯಾವರ ಮಹತೋಭಾರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕುಂಭಾಭಿಷೇಕದ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ಸಂದೇಶ ನೀಡಿದರು.

ಭೀಮನಕಟ್ಟೆ ಮಠದ ಶ್ರೀ ರಘುವರೇಂದ್ರತೀರ್ಥ ಶ್ರೀಪಾದರು, ಮಕ್ಕಳಿಗೆ ಬಾಗುವಿಕೆ ಕಲಿಸಿದಲ್ಲಿ ವಿನಯದ ಜೊತೆಗೆ ಸಂಸ್ಕೃತಿ ಸಂಸ್ಕಾರದ ಅರಿವು ಮೂಡಿಸಿದಂತಾಗುತ್ತದೆ. ಸಮಾಜದ ಒಮ್ಮತದ ಮೂಲಕ ದೇವರನ್ನು ಚಿಂತಿಸುವ ನಿರ್ಧಾರದಿಂದ ಸಮಾಜಕ್ಕೆ ಒಳಿತಾಗಲಿದೆ. ಆ ನಿಟ್ಟಿನಲ್ಲಿ ದೇವರ ಸಾಮರ್ಥ್ಯ ಅರಿತು ನಡೆಯುವ ಬ್ರಹ್ಮಕುಂಭಾಭಿಷೇಕದಂತಹ ಧಾರ್ಮಿಕತೆಯ ಗಟ್ಟಿ ತಳಹದಿಗೆ ಮೂಲವಾಗಲಿದೆ ಎಂದು ಶುಭ ಸಂದೇಶವನ್ನು ನೀಡಿದರು.

ಕೆ.ಕೃಷ್ಣರಾಜ್ ಭಟ್ ಕುತ್ಪಾಾಡಿ ಅವರು, ಭಗವತ್ ಪ್ರತೀಕಗಳನ್ನು ಹೃದಯದಲ್ಲಿ ತಂದು ಮಾಡುವ ನಿತ್ಯ ಅನುಸಂಧಾನದಿಂದ ಪೂರ್ಣ ಫಲ ಪ್ರಾಾಪ್ತಿಯಾಗುತ್ತದೆ ಎಂದು ಧರ್ಮ ಸಂದೇಶವನ್ನು ನೀಡುತ್ತಾಾ, ರಾಶಿ ಪೂಜೆ ಮತ್ತು ಬ್ರಹ್ಮಕಲಶೋತ್ಸವದ ಮಹತ್ವದ ಬಗ್ಗೆ ಧಾರ್ಮಿಕ ಪ್ರವಚನ ನೀಡಿದರು.

ದೇಗುಲದ ವ್ಯವಸ್ಥಾಪನ ಸಮಿತಿ ಮತ್ತು ಜೀರ್ಣೋದ್ಧಾಾರ ಸಮಿತಿ ಅಧ್ಯಕ್ಷ ಯು.ಎ. ಪ್ರಭಾಕರ ರಾವ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜೀರ್ಣೋದ್ಧಾಾರ ಸಮಿತಿಯ ಕಾರ್ಯಾಧ್ಯಕ್ಷ ಕಿದಿಯೂರು ಉದಯ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಯು. ಸುರೇಶ ಆಚಾರ್ಯ, ಉಪಾಧ್ಯಕ್ಷ ಶ್ರೀಶ ಭಟ್ ಕಡೆಕಾರು ಮಠ ವೇದಿಕೆಯಲ್ಲಿದ್ದರು.

ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಶ್ರೀನಿವಾಸ ಯು.ಬಿ. ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ದೇಗುಲದ ವ್ಯವಸ್ಥಾಪನ ಸಮಿತಿ ಸದಸ್ಯ ಸಂತೋಷ್ ಕುಮಾರ್ ವಂದಿಸಿದರು. ಸಾಂಸ್ಕೃತಿಕ ಮತ್ತು ನಿರ್ವಹಣಾ ಸಮಿತಿ ಸಂಚಾಲಕ ಪ್ರತಾಪ್ ಕುಮಾರ್ ನಿರೂಪಿಸಿದರು.