ಉದ್ಯಾವರ‌: ಫ್ರೆಂಡ್ಸ್‌ ಗಾರ್ಡನ್‌ ಸಮಿತಿಯಿಂದ 25ನೇ ವರ್ಷದ ಗಣೇಶೋತ್ಸವ

ಉಡುಪಿ: ಉಡುಪಿ ಉದ್ಯಾವರದ -ಫ್ರೆಂಡ್ಸ್‌ ಗಾರ್ಡನ್‌ ಸಾರ್ವಜನಿಕ ಬಾಲ ಗಣೇಶೋತ್ಸವ ಸಮಿತಿಯ‌ 25ನೇ ವರ್ಷದ ಗಣೇಶೋತ್ಸವ ಸೆಪ್ಟೆಂಬರ್‌ 2ರಿಂದ 4ರ ವರೆಗೆ ನಡೆಯಲಿದೆ.
ಸೆ. 2ರಂದು ಬೆಳಿಗ್ಗೆ 10.30ಕ್ಕೆ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಸಮಿತಿಯ ಅಧ್ಯಕ್ಷ ಯೋಗೀಶ್‌ ಎಸ್‌. ಕೋಟ್ಯಾನ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ  ತಿಳಿದರು.
ಆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 8ಗಂಟೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ವೈ.ಎನ್‌. ಶೆಟ್ಟಿ ರಜತ ಮಹೋತ್ಸವದ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು. ಅಂದು ರಾತ್ರಿ 9ಗಂಟೆಗೆ ಹೇರಂಜೆ ಯಕ್ಷ ಬಳಗದಿಂದ ಪೌರಾಣಿಕ ಯಕ್ಷಗಾನ ‘ಕುಶಲವ’ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಸೆ. 3ರಂದು ಬೆಳಿಗ್ಗೆ 9.30ಕ್ಕೆ 108 ತೆಂಗಿನಕಾಯಿ ಗಣಪತಿಹೋಮ, 12.30ಕ್ಕೆ ಭಕ್ತಿ ಸುಗಮ ಸಂಗೀತ ಹಾಗೂ ರಾತ್ರಿ 9ಗಂಟೆಗೆ ನಮ್ಮ ಕಲಾವಿದೆರ್‌ ಬೆದ್ರ ತಂಡದಿಂದ ‘ಉಲಾಯಿ ಪಿದಾಯಿ’ ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಸೆ. 4ರಂದು ಬೆಳಿಗ್ಗೆ 10ಗಂಟೆಗೆ ಉಚಿತ ಆರೋಗ್ಯ ತಪಾಸಣೆ ಹಾಗೂ 3.45ಕ್ಕೆ ವಿಗ್ರಹದ ವಿಸರ್ಜನಾ ಮೆರವಣಿಗೆಯು ಆರೂರು‌ ತೋಟ ಅಶ್ವಥ ಕಟ್ಟೆಯಿಂದ ಹೊರಟು ಸಂಪಿಗೆನಗರ, ಗುಡ್ಡೆಯಂಗಡಿ, ಮೇಲ್ಪೆಟೆ, ಮಠದಂಗಡಿಯಾಗಿ ಶಾಂತಿನಗರದ ಮೂಲಕ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಕೆರೆಗೆ ಆಗಮಿಸಿ ವಿಸರ್ಜನಾ ಪೂಜೆಯೊಂದಿಗೆ ಜಲಸ್ತಂಭನ ಆಗಲಿದೆ ಎಂದರು.
ಗೋಷ್ಠಿಯಲ್ಲಿ ಪ್ರಮುಖರಾದ ಪ್ರದೀಪ್‌ ಸುವರ್ಣ, ಸುಧಾಕರ ಕೋಟ್ಯಾನ್‌, ಹರೀಶ್‌ ಉದ್ಯಾವರ, ಜಿ. ಪ್ರಭಾಕರ, ದಿನೇಶ್‌ ಜತ್ತನ್‌
ಉಪಸ್ಥಿತರಿದ್ದರು.