ಉಡುಪಿಯಲ್ಲಿ ಮಳೆಗಾಗಿ ಕಪ್ಪೆಗಳಿಗೆ ‌ಮದ್ವೆ..!  ಮಳೆ ಬರಲು ಹೀಗೊಂದು‌ ವಿನೂತನ ಪ್ರಾರ್ಥನೆ

ಉಡುಪಿ: ದೇಶದಾದ್ಯಂತ ಮಳೆಗಾಗಿ ಒಂದಿಲ್ಲೊಂದು ರೀತಿಯಲ್ಲಿ‌ ಪ್ರಾರ್ಥನೆ ನಡೆಯುತ್ತಿದೆ. ಆದರೆ ಉಡುಪಿಯ ಕಿದಿಯೂರ್ ಹೋಟೆಲಿನ ಸಭಾಂಗಣದಲ್ಲಿ ಶನಿವಾರ ವಿಶೇಷ ಹಾಗೂ‌ ವಿಭಿನ್ನವಾಗಿ ಕಪ್ಪೆ ಗಳಿಗೆ ಮದ್ವೆ ಮಾಡುವ‌ ಮೂಲಕ ಮಳೆಗಾಗಿ‌ ಪ್ರಾರ್ಥನೆ ಮಾಡಲಾಯಿತು.
ಹಿಂದೂ ಸಂಪ್ರದಾಯದಂತೆ ಕಾಲು ಉಂಗುರ ತೊಡಿಸಿ, ಮಾಂಗಲ್ಯವನ್ನು ಕಟ್ಟಿ ಕಪ್ಪೆಗಳ ಮದುವೆಯನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಹಾಗೂ ಪಂಚರತ್ನಾ ಸೇವಾ ಟ್ರಸ್ಟ್ ವತಿಯಿಂದ ಮಂಡೂಕ‌ ಕಲ್ಯಾಣೋತ್ಸವ ಹಮ್ಮಿ ಕೊಳ್ಳಲಾಯಿತು.
ಉಡುಪಿಯ ಕೊಳಲಗಿರಿ ಸಮೀಪದ ಕೀಳಿಂಜೆ ಎಂಬಲ್ಲಿ ಪತ್ತೆಯಾದ ‘ವರ್ಷ’ ಹೆಸರಿನ ಹೆಣ್ಣು ಕಪ್ಪೆ ಮತ್ತು ಉಡುಪಿ ಕಲ್ಸಂಕದಲ್ಲಿ ಪತ್ತೆಯಾದ ‘ವರುಣ’ ಹೆಸರಿನ ಗಂಡು ಕಪ್ಪೆಗೆ ಮದುವೆ ಮಾಡಲಾಯಿತು. ಇದಕ್ಕೂ ಮೊದಲು ಮಣಿಪಾಲದ ಜೀವಶಾಸ್ತ್ರ ತಜ್ಞರಿಂದ ಹೆಣ್ಣು ಮತ್ತು ಗಂಡು ಕಪ್ಪೆಗಳನ್ನು ಆಯ್ಕೆ ಮಾಡಲಾಗಿತ್ತು.
ಮದ್ವೆ ಹಿನ್ನೆಲೆಯಲ್ಲಿ ನಗರದ ಮಾರುತಿ ವಿಥಿಕಾದಲ್ಲಿರುವ ನಾಗರಿಕ ಸಮಿತಿ ಯ ಕಚೇರಿಯಿಂದ ಮದುವೆ ದಿಬ್ಬಣ ಹೊರಟಿತು. ತ್ರಿಚಕ್ರ ಸೈಕಲ್‌ನಲ್ಲಿ ಇರಿಸಲಾದ ಪಂಜರದೊಳಗೆ ಕಪ್ಪೆಗಳನ್ನು ಇಟ್ಟು ದಿಬ್ಬಣದಲ್ಲಿ ತರಲಾಯಿತು. ಮಹಿಳೆಯರು ಸಂಪ್ರಾದಾಯಿಕ ಉಡುಗೆ ತೊಡುಗೆಗಳೊಂದಿಗೆ ಆಗಮಿಸಿದರು. ಚಿಟ್ಪಾಡಿಯ ನಾಸಿಕ್ ಬ್ಯಾಂಡ್ ತಂಡದಿಂದ ಸಾಥ್ ದೊರೆಯಿತು.
ಪುರೋಹಿತರು ಸೂಚಿಸಿದ ಮುಹೂರ್ತದಲ್ಲಿ ಹೆಣ್ಣು ಕಪ್ಪೆಗೆ ಅಮಿತಾ ಗಿರೀಶ್ ಮಲ್ಲಿಗೆ ಹೂವು ಮುಡಿಸಿ, ತಿಲಕ ಹಚ್ಚಿ, ಕಾಲು ಉಂಗುರ ತೊಡಿಸಿ, ಮಾಂಗಲ್ಯ ಕಟ್ಟುವ ಮೂಲಕ ವಿವಾಹ ನೆರವೇರಿಸಿದರು. ಬಳಿಕ ಭಜನಾ ಮಂಡಳಿಯ ಮಹಿಳೆಯರು ಆರತಿ ಎತ್ತಿದರು. ಜರ್ನಾದನ ಶೇರಿಗಾರ್ ತಂಡದಿಂದ ಸ್ಯಾಕ್ಸೋಫೋನ್ ಹಾಗೂ ಮದುವೆಗೆ ಆಗಮಿಸಿದವರಿಗೆ ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ವಿವಾಹದ ಬಳಿಕ ಕಪ್ಪೆಗಳನ್ನು ಮಣಿಪಾಲದ ಮಣ್ಣಪಳ್ಳದ ಕೆರೆಯಲ್ಲಿ ಬಿಡಲಾಯಿತು.
ಹಿಂದೆಂದೂ ಕಾಣದ ಜಲಕ್ಷಾಮವನ್ನು ಜಿಲ್ಲೆಯ ಜನತೆ ಎದುರಿಸುತ್ತಿದ್ದು, ನೀರಿಗಾಗಿ ಹಾಹಾಕಾರ ಉಂಟಾಗಿದೆ. ಶೀಘ್ರವೇ ಮಳೆಯ ಆಗಮನ ಆಗಲಿ ಎಂದು ಪ್ರಾರ್ಥಿಸಿ ಕಪ್ಪೆಗಳಿಗೆ ವಿವಾಹ ಮಾಡಿದ್ದೇವೆ’ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ತಿಳಿಸಿದರು.
ಹಿಂದೂ ಸಂಪ್ರದಾಯಂತೆ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಮೂಢನಂಬಿಕೆ ಎಂಬ ಟೀಕೆ ಬರುತ್ತಿದೆ. ಆದರೆ ಸಂಪ್ರದಾಯ ಮತ್ತು ನಂಬಿಕೆಯ ಆಧಾರದಲ್ಲಿ ಈ ಕಾರ್ಯವನ್ನು ಮಾಡಿದ್ದೇವೆ ಎಂದು ಸಾಮಾಜಿಕ ಕಾರ್ಯಕರ್ತ ತಾರಾನಾಥ ಮೇಸ್ತ ಹೇಳಿದರು.
ಕಾರ್ಯಕ್ರಮದಲ್ಲಿ‌ ಗಣೇಶ್‌ರಾಜ್ ಸರಳಬೆಟ್ಟು, ಪಂಚರತ್ನಾ ಸೇವಾ ಟ್ರಸ್ಟ್ನ ಪ್ರ.ಕಾರ್ಯದರ್ಶಿ ಸಂತೋಷ್ ಸರಳಬೆಟ್ಟು, ರಾಜು ಪೂಜಾರಿ, ಮಹಿಳಾ ಒಕ್ಕೂಟದ ರಮಾದೇವಿ ಮೊದಲಾದವರು ಉಪಸ್ಥಿತರಿದ್ದರು.