ಉಡುಪಿಯಲ್ಲಿ‌ ಬಿಜೆಪಿ ಸಂಭ್ರಮಾಚರಣೆ

ಉಡುಪಿ: ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ‌ ಕರಂದ್ಲಾಜೆ ಜಯಗಳಿಸಿದ ಸುದ್ದಿ ತಿಳಿಯುತ್ತಿದ್ದಂತೆ ಮತ ಎಣಿಕೆ ಕೇಂದ್ರದ ಸುತ್ತ ಜಮಾಯಿಸಿದ್ದ ಪಕ್ಷದ ಸಾವಿರಾರು ಕಾರ್ಯಕರ್ತರು ಪರಸ್ಪರ ಹೂವು, ಗುಲಾಲು ಎರಚಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ನಗರದ ಬ್ರಹ್ಮಗಿರಿ ಸರ್ಕಲ್‌ನಲ್ಲಿ ಜಮಯಾಯಿಸಿದ್ದ ಕಾರ್ಯಕರ್ತರು ಪಕ್ಷದ ಧ್ವಜಗಳನ್ನು ಹಿಡಿದು ಪ್ರಧಾನಿ‌ ಮೋದಿ ಹಾಗೂ ಶೋಭಾ ಕರಂದ್ಲಾಜೆ ಪರ
ಜೈಘೋಷಗಳನ್ನು ಹಾಕಿದರು. ಶೋಭಾ ಅವರೂ ಗೆಲುವಿನ ಖುಷಿಯಲ್ಲಿ ಕುಣಿದರು.
ಬಳಿಕ ಶೋಭಾ ಕರಂದ್ಲಾಜೆ ಅವರು ತೆರೆದ ವಾಹನದಲ್ಲಿ ಬ್ರಹ್ಮಗಿರಿ ಸರ್ಕಲ್‌ನಿಂದ ಉಡುಪಿಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಬ್ರಹ್ಮಗಿರಿ ಸರ್ಕಲ್‌ನಿಂದ ಹೊರಟ ಮೆರವಣಿಗೆ ಅಜ್ಜರಕಾಡು, ಡಯಾನ, ಬಿಗ್‌ಬಜಾರ್‌, ಅಲಂಕಾರ್‌ ಮಾರ್ಗವಾಗಿ ಸರ್ವಿಸ್‌ ಬಸ್‌ ನಿಲ್ದಾಣ, ಕಲ್ಸಂಕ ಆಗಿ ತೆರಳಿ ಕಡಿಯಾಳಿ ಬಿಜೆಪಿ ಕಚೇರಿಯ ಎದುರು ಮುಕ್ತಾಯಗೊಂಡಿತು.
ವಿಜಯೋತ್ಸವದಲ್ಲಿ ಶಾಸಕರಾದ ಕೆ. ರಘುಪತಿ ಭಟ್‌, ಲಾಲಾಜಿ ಮೆಂಡನ್‌, ವಿ. ಸುನಿಲ್‌ ಕುಮಾರ್‌, ಮಾಜಿ ಶಾಸಕ ಜೀವರಾಜ್‌, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮುಖಂಡರಾದ ಯಶ್‌ಪಾಲ್‌ ಸುವರ್ಣ, ಉದಯಕುಮಾರ್‌ ಶೆಟ್ಟಿ, ಕುತ್ಯಾರು ನವೀನ್‌ ಶೆಟ್ಟಿ, ಗುರ್ಮೆ ಸುರೇಶ್‌ ಶೆಟ್ಟಿ, ಕುಯಿಲಾಡಿ ಸುರೇಶ್‌ ನಾಯಕ್‌, ನಯನ ಗಣೇಶ್‌ ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ನಂತರ ಮಲ್ಪೆಗೆ ಮೆರವಣಿಗೆಯಲ್ಲಿ ಸಾಗಿದ ಶೋಭಾ ಕರಂದ್ಲಾಜೆ ಅವರಿಗೆ ಮಲ್ಪೆಯಲ್ಲಿ ಅಭೂತಪೂರ್ವ ಸ್ವಾಗತ ಕೋರಲಾಯಿತು.