ಎಲ್ಲರ ಮೇಲೆಯೂ ಅತೀ ಅನುಮಾನ ಪಡುವ ಖಾಯಿಲೆಗೆ ಏನ್ ಹೆಸರು ಗೊತ್ತಾ?

ಇಂದು ಮೇ:24 ವಿಶ್ವ ಸ್ಕಿಝೋಫ್ರೀನಿಯಾ ದಿನ. ಒಂದು ವಿಚಿತ್ರ ಮಾನಸಿಕ ಖಾಯಿಲೆಯಾಗಿರುವ   ಸ್ಕಿಝೋಫ್ರೀನಿಯಾದ ಬಗ್ಗೆ ಬಹಳಷ್ಟು ಮಂದಿಗೆ ಮಾಹಿತಿ ಇಲ್ಲ. ಅದಕ್ಕೋಸ್ಕರ   ಉಡುಪಿ X Press, ಓದುಗರಿಗಾಗಿ ಈ ವಿಶೇಷ ಮಾಹಿತಿಯುಳ್ಳ  ಈ ಬರಹವನ್ನು ಪ್ರಕಟಿಸಿದೆ. ನಿಮ್ಮ ಕಾಳಜಿಯೇ ನಮಗೆ ಮುಖ್ಯ:

ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ರವಿಗೆ 40 ವರ್ಷ ವಯಸ್ಸು. ಎರಡು ವರ್ಷಗಳಿಂದೀಚೆಗೆ ಹೆಂಡತಿಯ ಮೇಲೆ ಅತಿಯಾದ ಅನುಮಾನ, ಯಾವುದೋ ವಾಸನೆ ಬರುವುದು, ತನ್ನ ದೇಹದೊಳಗೆ ಚಿಪ್ಪು ಇಟ್ಟು ಕಂಪ್ಯೂಟರ್ ನಿಂದ ಇತರರು ತನ್ನನ್ನು ನಿಯಂತ್ರಿಸುತ್ತಿರುವಂತೆ ಭಾಸವಾಗುವುದು. ಇಬ್ಬರು ವ್ಯಕ್ತಿಗಳು ತನ್ನ ಬಗ್ಗೆ ಮಾತನಾಡಿದಂತೆ ಕೇಳುವುದು ಹಾಗೂ ತನ್ನ ಬಗ್ಗೆ ವದಂತಿಗಳನ್ನು ಹಬ್ಬುತ್ತಿರುವಂತೆ ಅನ್ನಿಸುವುದು. ಇವೆಲ್ಲಾ ಆಗುತ್ತಿದೆ ರವಿಗೆ. ಇದರಿಂದ ಮಾತು-ಕತೆ, ಊಟ-ತಿಂಡಿ ಕಡಿಮೆಯಾಗಿದೆ. ಇತರರೊಂದಿಗೆ ಬೆರೆಯುವುದು, ಕಾರ್ಯಕ್ರಮಗಳಿಗೆ ಹೋಗುವುದಂತೂ ಇಲ್ಲವೇ ಇಲ್ಲ. ತನ್ನ ಪಾಡಿಗೆ ತಾವು ಇರುತ್ತಾರೆ.  ದೇವಸ್ಥಾನ, ದೆವ್ವ, ಭೂತ, ಮಂತ್ರವಾದಿಗಳ ಹತ್ತಿರ ಹೋದರೂ ರವಿಯ ಈ ವಿಚಿತ್ರ ಹಾವ ಭಾವ ಬದಲಾಗದೇ ಇದ್ದಾಗ ಮನಃಶಾಸ್ತ್ರಜ್ಞರ ಹತ್ತಿರ ಕರೆದುಕೊಂಡು ಬಂದ ಕುಟುಂಬದವರಿಗೆ ರವಿ, ಸ್ಕಿಝೋಫ್ರೀನಿಯಾ ಖಾಯಿಲೆಯಿಂದ ಬಳಲುತ್ತಿರುವ ವಿಚಾರ  ತಿಳಿದುಬರುತ್ತದೆ.

ಏನಿದು ಸ್ಕಿಝೋಫ್ರೀನಿಯಾ?

ಇದೊಂದು ತೀವ್ರತರದ ಮಾನಸಿಕ ಖಾಯಿಲೆಯಾಗಿದ್ದು, ವಾಸ್ತವವನ್ನು ಗ್ರಹಿಸುವಲ್ಲಿ ಅಥವಾ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಸಮಸ್ಯೆ ಕಂಡುಬರುವುದೇ ಸ್ಕಿಝೋಫ್ರೀನಿಯಾ.  ಐದೂ ಇಂದ್ರಿಯಗಳೂ ಇದರಿಂದ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಯಾವುದೇ ವಯಸ್ಸಿನಲ್ಲಿ ಕಾಣಿಸಿಕೊಳ್ಳಬಹುದಾದ ಈ ಖಾಯಿಲೆಯಿಂದ ನಿಮ್ಹಾನ್ಸ್ ಸಮೀಕ್ಷೆ ಪ್ರಕಾರ, ಭಾರತದಲ್ಲಿ ನೂರರಲ್ಲಿ ಒಬ್ಬರು ಇದರಿಂದ ಬಳಲುತ್ತಿದ್ದಾರಂತೆ.

ಏನಿರಬಹುದು ಕಾರಣ?

ಅನುವಂಶೀಯತೆ, ಹಾರ್ಮೋನ್ ಗಳಲ್ಲಿ ಏರುಪೇರು, ಕುಡಿತ ಮೊದಲಾದ ಮಾದಕ ದ್ರವ್ಯಗಳ ಸೇವನೆ, ಸಾಮಾಜಿಕ ಸ್ಥಿತಿಗತಿ, ನರಮಂಡಲದ ಸಮಸ್ಯೆ ಹಾಗೂ ಪ್ರಸವದ ಸಂಕೀರ್ಣತೆ.

ಲಕ್ಷಣಗಳು: ಭ್ರಮೆ, ಭ್ರಾಂತಿ, ಒಬ್ಬರೇ ಮಾತನಾಡುವುದು, ನಗುವುದು, ಉದ್ದೇಶವಿಲ್ಲದೆ ಓಡಾಡುವುದು, ಕಿವಿಯಲ್ಲಿ ಯಾರೋ ಮಾತನಾಡಿದಂತೆ, ಬೈದಂತೆ ಭಾಸವಾಗುವುದು, ಮೈ ಮೇಲೆ ಏನೋ ಹರಿದಂತೆ, ತನ್ನ ಆಲೋಚನೆಗಳು ಇತರರಿಗೆ ತಿಳಿದಂತೆ, ಮಾಧ್ಯಮಗಳಲ್ಲಿ ಪ್ರಸಾರವಾದಂತೆ ಅನ್ನಿಸುವುದು. ಯಾವುದರಲ್ಲೂ ಆಸಕ್ತಿ ಇಲ್ಲದಿರುವುದು, ಇತರರೊಂದಿಗೆ ಬೆರೆಯದಿರುವುದು, ಮಾತು-ಕತೆ, ಊಟ, ತಿಂಡಿ, ನಿದ್ರೆ ಕಡಿಮೆಯಾಗುವುದು, ಅನುಮಾನ, ಯಾರೋ ಓಡಾಡಿದಂತೆ, ತನ್ನ ಬಗ್ಗೆಯೇ ಮಾತನಾಡುತ್ತಿರುವಂತೆ, ಕೊಲ್ಲಲು ಬಂದಂತೆ ಭಾಸವಾಗುವುದು. ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳದಿರುವುದು.

ಗುಣಪಡಿಸಲು ಸಾಧ್ಯವೇ?

    • ಖಾಯಿಲೆ ಯಾವುದೇ ಹಂತದಲ್ಲಿದ್ದರೂ ಗುರುತಿಸಿ ವೈದ್ಯರ ಬಳಿ ಕರೊದೊಯ್ದು ಸೂಕ್ತ ಚಿಕಿತ್ಸೆ  ಕೊಡಿಸಿದಲ್ಲಿ   ನಿಯಂತ್ರಣದಲ್ಲಿಡಲು ಸಾಧ್ಯವಿದೆ. ಆದಷ್ಟು ಬೇಗ ಗುರುತಿಸುವುದರಿಂದ ಹೆಚ್ಚಿನ ತೊಂದರೆಯಾಗುವುದನ್ನು ತಡೆಗಟ್ಟಬಹುದು.
  • ಖಾಯಿಲೆ ಹೊಂದಿರುವ ವ್ಯಕ್ತಿ ನಿರಂತರವಾಗಿ ಔಷಧ ತೆಗೆದುಕೊಳ್ಳುವುದರಿಂದ, ಆಪ್ತ ಸಮಾಲೋಚನೆಗಳಲ್ಲಿ ಭಾಗವಹಿಸುವುದರಿಂದ, ಸಣ್ಣ ಪುಟ್ಟ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದರಿಂದ, ತನ್ನ ದಿನನಿತ್ಯದ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ.

ಮನಸ್ಸಿಗೆ ಸಂಬಂಧಿಸಿದ ಖಾಯಿಲೆಗಳು ಹೆಚ್ಚುತ್ತಿರುವ ಇಂದಿನ ಆಧುನಿಕ ಯುಗದಲ್ಲಿ ಎಲ್ಲರೂ ಜಾಗ್ರತೆ ವಹಿಸಿ ರೋಗಗಳ ಬಗ್ಗೆ ಅರಿವು ಹೊಂದಿರುವುದು ಅತ್ಯವಶ್ಯಕ. ಸ್ಕಿಝೋಫ್ರೀನಿಯಾ ಅಥವಾ ಯಾವುದೇ ಮಾನಸಿಕ ಖಾಯಿಲೆಗಳ ಲಕ್ಷಣ ಕಂಡುಬಂದಲ್ಲಿ, ಮನಸ್ಸಿನ ಏರಿಳಿತಗಳಾದಲ್ಲಿ ನಿರ್ಲಕ್ಷಿಸದೇ, ದೆವ್ವ, ಭೂತ ಕಾಟ ಎಂದು ತಿಳಿಯದೇ ಆದಷ್ಟು ಶೀಘ್ರವಾಗಿ ತಜ್ಞ ಮನೋವೈದ್ಯರ ಬಳಿ ಕರೆದೊಯ್ಯುವುದು ಉತ್ತಮ. ಇಂತಹಾ ಸಮಸ್ಯೆ ಇದ್ದವರು ಯಾರೂ ಹುಚ್ಚರಲ್ಲ, ಅವರನ್ನು ಕಡೆಗಣಿಸದೇ ಅವರೂ ನಮ್ಮಂತೆಯೇ ಮನುಷ್ಯರು ಎಂಬುದನ್ನು ಅರಿತು ಮಾನವೀಯತೆಯಿಂದ ನಡೆಯುವುದು ಉತ್ತಮ.

                                                                    ಸುವರ್ಚಲಾ ಅಂಬೇಕರ್