ಶ್ರೀಲಂಕ ಭಯೋತ್ಪಾದಕ ದಾಳಿ- ಮೃತ ಆತ್ಮಗಳಿಗೆ ಶಾಂತಿ ಕೋರಿ ಉಡುಪಿ ಕ್ರೈಸ್ತ ಭಾಂಧವರಿಂದ ಪ್ರಾರ್ಥನಾ ಸಭೆ

ಉಡುಪಿ: ಶ್ರೀಲಂಕಾದ ಕೊಲಂಬೊ ನಗರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತರಾದವರಆತ್ಮಕ್ಕೆ ಶಾಂತಿ ಕೋರಿ ಉಡುಪಿ ಜಿಲ್ಲೆಯ ಕ್ರೈಸ್ತ ಭಾಂಧವರಿಂದ ಶೋಕಮಾತಾ ಇಗರ್ಜಿಯಲ್ಲಿ ಪ್ರಾರ್ಥನಾ ಸಭೆ ಜರುಗಿತು.
ಸಭೆಯಲ್ಲಿ ವಿವಿಧ ಸಭೆಗಳ ಧರ್ಮಗುರುಗಳು ಹಾಗೂ ಕ್ರೈಸ್ತ ಭಾಂಧವರು ಭಾಗವಹಿಸಿ ಮೃತ
ಆತ್ಮಗಳಿಗೆ ಸದ್ಗತಿ ಕೋರಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಏಪ್ರೀಲ್ 21 ಜಗತ್ತಿನಾದ್ಯಂತ ಪಾಸ್ಕ ಹಬ್ಬದ
ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಸಮಯದಲ್ಲಿ ಶ್ರೀಲಂಕಾದ ಜನತೆಗೆ ಕರಾಳ ದಿನವಾಯಿತು.

 

ಶ್ರೀಲಂಕಾದ ದೇವಾಲಯ ಹಾಗೂ ಹೋಟೆಲುಗಳಲ್ಲಿ ನಡೆದ 9 ಮಂದಿ ಆತ್ಮಹತ್ಯಾ ದಾಳಿಕೋರರ ದುಷ್ಕರತ್ಯಕ್ಕೆ ಈಗಾಗಲೇ 359 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ 10 ಮಂದಿ ಭಾರತಿಯರು ಮತ್ತು ಅದರಲ್ಲಿ 7 ಮಂದಿ ಕರ್ನಾಟಕದವರು. 45 ಕ್ಕೂ ಹೆಚ್ಚು ಮುಗ್ದ ಮಕ್ಕಳು ಇವರೆಲ್ಲರೂ ತಮ್ಮದಲ್ಲದ ತಪ್ಪಿಗೆ ಪ್ರಾಣ ತೆತ್ತು ಅಮರಾದರು. ಈ ಕ್ರೂರ ಕೃತ್ಯ ಇಡೀ ಜಗತ್ತೇ ಖಂಡಿಸುವಂತದ್ದಾಗಿದೆ. ಬದುಕು ಕಟ್ಟುವುದು ಎಷ್ಟು ಕಷ್ಟದ ಪ್ರಕ್ರಿಯೆ ಎನ್ನುವುದನ್ನು ಬದುಕನ್ನು ನಾಶ ಮಾಡುವವರು ಅರ್ಥ ಮಾಡಿದರೆ ಉತ್ತಮ. ಭಯೋತ್ಪಾದನೆ, ಹಿಂಸೆ, ದ್ವೇಷ ಹಾಗೂ ಕ್ರೂರಕೃತ್ಯಗಳಿಂದ ಜಗತ್ತನನ್ನು ನಾಶ ಮಾಡಬಹುದೇ ವಿನಹ ಜಗತ್ತನ್ನು ಜಯಿಸಲು ಅಸಾಧ್ಯ ಬದಲಿಗೆ ಶಾಂತಿ ಪ್ರೀತಿ ಅಹಿಂಸೆ, ಕ್ಷಮೇಯ ಮೂಲಕ ಜಗತ್ತನ್ನು ಜನತೆಯನ್ನು ಜಯಿಸಲು ಸಾಧ್ಯ ಎಂದರು.

ಸಭೆಯಲ್ಲಿ ಹಾಜರಿದ್ದ ಸರ್ವರೂ ಮೊಂಬತ್ತಿಗಳನ್ನು ಬೆಳಗುವುದರ ಮೂಲಕ ಮೃತ ಆತ್ಮಗಳಿಗೆ ಶಾಂತಿಯನ್ನು ಕೋರಿದರು. ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ವಂ|ಡಾ| ಬ್ಯಾಪ್ಟಿಸ್ಟ್ ಮಿನೇಜಸ್,  ಸಿಎಸ್ ಐ ಸಭೆಯ ವಂ|ಸ್ಟೀವನ್ ಸರ್ವೋತ್ತಮ, ವಂ| ನೋಯೆಲ್ ಕರ್ಕಡ, ಉಡುಪಿ
ಧರ್ಮಪ್ರಾಂತ್ಯದ ಧರ್ಮಗುರುಗಳಾದ ವಂ|ವಿಲಿಯಂ ಮಾರ್ಟಿಸ್, ವಂ|ಲಾರೇನ್ಸ್ ಡಿಸೋಜಾ,
ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್, ವಂ|ಸ್ಟೀವನ್ ಡಿಸೋಜಾ, ವಂ|ವಿನ್ಸೆಂಟ್ ಕುವೆಲ್ಲೊ,
ವಂ|ಫ್ರಾನ್ಸಿಸ್ ಕರ್ನೆಲಿಯೋ, ವಂ|ವಿಜಯ್ ಡಿಸೋಜಾ, ವಂ|ಜೆರಾಲ್ಡ್ ಸಂದೀಪ್ ಡಿಮೆಲ್ಲೊ, ವಂ|ಆಲ್ಫೋನ್ಸ್ ಡಿಲೀಮಾ ವಂ| ರೋಯ್ಸನ್ ಫೆರ್ನಾಂಡಿಸ್, ಉಡುಪಿ ಧರ್ಮಪ್ರಾಂತ್ಯದ ಐಸಿವೈಎಮ್ ಸಂಘಟನೆಯ ಅಧ್ಯಕ್ಷರಾದ ಡಿಯೋನ್ ಡಿಸೋಜಾ, ಮಹಿಳಾ ಸಂಘಟನೆಯ ಜಾನೆಟ್ ಬಾರ್ಬೋಜಾ, ಕೆಥೊಲಿಕ್ ಸಭಾದ ಆಲ್ವಿನ್ ಕ್ವಾಡ್ರಸ್ ಹಾಗೂ  ಮುಸ್ಲಿಂ ನಾಯಕರುಗಳಾದ ಮೊಹ್ಮದ್ ಮೌಲಾ, ಯಾಸಿನ್ ಮಲ್ಪೆ ಇತರರು ಉಪಸ್ಥಿತರಿದ್ದರು.
ಉಡುಪಿ ಧರ್ಮಪ್ರಾಂತ್ಯದ ಐಸಿವೈಎಮ್ ಸಂಘಟನೆಯ ಅಧ್ಯಕ್ಷರಾದ ಡಿಯೋನ್ ಡಿಸೋಜಾ ಸ್ವಾಗತಿಸಿ, ಧರ್ಮಪ್ರಾಂತ್ಯದ ಪಾಲನಾ ಪರಿಷತ್ ಕಾರ್ಯದರ್ಶಿ ಆಲ್ಫೋನ್ಸ್ ಡಿಕೋಸ್ತಾ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು