ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜಿನ ವಜ್ರಮಹೋತ್ಸವ ವರ್ಷ ಉದ್ಘಾಟನೆ

ಕಾರ್ಕಳ: ಇಲ್ಲಿನ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಕಾಲೇಜು ಸ್ಥಾಪನೆಯಾಗಿ 60 ವರ್ಷವಾದ ಸಂಭ್ರಮದಲ್ಲಿ ವಜ್ರ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು 6೦ನೇ ವರ್ಷದ ವಜ್ರಮಹೋತ್ಸವದ ಲಾಂಛನ ಹಾಗೂ ವರ್ಷಾಚರಣೆಯನ್ನು ಶ್ರೀ ಭುವನೇಂದ್ರ ಸ್ವಾಮೀಜಿಯವರ ನೆನಪಿನಲ್ಲಿ ಶ್ರೀ ಸಂಸ್ಥಾನ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರತೀರ್ಥ ಶ್ರೀಪಾದರು ಮುಖ್ಯ ಅತಿಥಿಯಾಗಿ ಆಗಮಿಸಿ ಉದ್ಘಾಟಿಸಿದರು.

ಕಾರ್ಯಕ್ರಮದ ಉದ್ಘಾಟನೆಯ ನಂತರ ಸಭೆಯನ್ನುದ್ದೇಶಿಸಿ ಆಶೀರ್ವಚನ ನೀಡಿದ ಅವರು, ಭುವನೇಂದ್ರ ಸ್ವಾಮಿಗಳ ಆಶೀರ್ವಾದದಿಂದ ಅಂದು ಶುರುವಾದ ಈ ಕಾಲೇಜು ಇಂದು 6೦ನೇ ವರ್ಷಕ್ಕೆ ಕಾಲಿಟ್ಟದೆ, ಈ ಕಾಲೇಜಿಗೆ ಎಂದಿಗೂ ಶ್ರೀಗಳ ಆಶೀರ್ವಾದ ಇರುತ್ತದೆ ಎಂದರು ಹಾಗೂ ಸ್ವಾಮಿಗಳು ಕಾಲೇಜಿಗೆ ನೀಡಿದ ಕೊಡುಗೆಯನ್ನು ನೆನಪಿಸಿಕೊಂಡರು. ವಿದ್ಯಾರ್ಥಿ ಎಂದರೆ ವಿದ್ಯೆಯನ್ನು ಅರ್ಜಿಸುವವನು. ನಮ್ಮ ಜೀವನದಲ್ಲಿ ಕಳೆಯುವ ಅತ್ಯಂತ ಮೋಜಿನ ಹಾಗೂ ಮಹತ್ವದ ದಿನ ಎಂದರೆ ಅದು ವಿದ್ಯಾರ್ಥಿ ದಿನಗಳು. ಕಲಿಕೆಯಲ್ಲಿ ನಮಗೆ ಅದರ ಮಹತ್ವ ಅರ್ಥವಾಗುವುದಿಲ್ಲ ಆದರೆ ಜೀವನದ ಕೊನೆಯವರೆಗೂ ಕಾಲೇಜಿನ ದಿನಗಳು ನಮ್ಮನ್ನು ಕಾಡುತ್ತಿರುತ್ತದೆ ಹಾಗಾಗಿ ಈ ಘಟ್ಟವನ್ನು ಒಳ್ಳೆಯ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳು ಏನನ್ನಾದರೂ ದೊಡ್ಡ ಸಾಧನೆಯನ್ನು ಮಾಡಿದರೆ ಮೊದಲಿಗೆ ಸಂತೋಷ ಪಡುವವನು ಗುರು. ಆತ ಹೆಚ್ಚಾಗಿ ಹೆಮ್ಮೆ ಪಡುತ್ತಾನೆ. ಇದು ಗುರು ಹಾಗೂ ವಿದ್ಯಾರ್ಥಿಗಿರಬೇಕಾದ ಸಂಸ್ಕಾರ. ಗುರುವಾದವನು ಪ್ರೀತಿಯಿಂದ, ಹೃದಯದಿಂದ ಕಲಿಸಬೇಕು ಆಗ ಆ ಸಂಬಂಧ ಗಟ್ಟಿಯಾಗಿರುತ್ತದೆ ಎಂದರು.

ಬದಲಾದ ಶಿಕ್ಷಣ ಪದ್ದತಿ:
ಶಿಕ್ಷಣ ವ್ಯವಸ್ಥೆಯಲ್ಲಿ ಇಂದು ಸಾಕಷ್ಟು ಬದಲಾವಣೆಗಳಾಗಿವೆ. ಇಂದಿನ ಮಕ್ಕಳು ಕಲಿಯುತಿದ್ದಾರೆ ಹೊರತು ಅರಿವಯುತ್ತಿಲ್ಲ. ಮೌಲ್ಯ ಹಾಗೂ ಸಂಸ್ಕಾರಗಳ ಅವರಿಗೆ ಇಲ್ಲ. ಇಂದಿನ ಮಕ್ಕಳ ಕಂಠಸ್ಥ್ಯ ಮಾಡುತ್ತಾರೆ ಆದರೆ ಅದನ್ನು ಅರ್ಥ ಮಾಡಿಕೊಳ್ಳವ ಪ್ರಯತ್ನ ಮಾಡುತ್ತಿಲ್ಲ. ವಿದ್ಯೆ, ಕಲಿಕೆ ಕಂಠದಲ್ಲಿದೆ ಆದರೆ ತಲೆಯಲ್ಲಿ ಇಲ್ಲ. ಪುಸ್ತಕ, ಗ್ರಂಥಾಲಯಗಳನ್ನು ಮರೆತು ಮೊಬೈಲ್ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ ಎಂದರು.

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸಿ.ಎ ಶಿವಾನಂದ ಪೈ ಪ್ರಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ನಂತರ ಮಹಾಲಕ್ಷ್ಮಿ ಶೆಣೈ ಇವರ ಬಳಗದಿಂದ ಭಕ್ತಿ ಗಾಯನ ನಡೆಯಿತು. ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಶ್ರೀ ಭುವನೇಂದ್ರ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯರು, ಹಳೆ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.