ವಿದ್ವಾಂಸರು ಅಸಹನೆಯನ್ನು ತೊರೆಯಬೇಕು  ಡಾ. ಉಪ್ಪಂಗಳ ರಾಮಭಟ್ಟ

ಉಡುಪಿ: ವಿದ್ವಾಂಸರು ತಮ್ಮ ಅಸಹನೆಯನ್ನು ತೊರೆದು ಇತರ ವಿದ್ವಾಂಸರನ್ನು ಅರ್ಥಮಾಡಿಕೊಳ್ಳುವ ಗುಣಬೆಳೆಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಪ್ರೊ. ಉಪಂಗಳ ರಾಮ ಭಟ್ಟ ನುಡಿದರು. ಅವರು   ಬುಧವಾರ ನೂತನ ರವೀಂದ್ರ ಮಂಟಪದಲ್ಲಿ ಪ್ರೊ. ತಾಳ್ತಜೆ ಕೇಶವ ಭಟ್ಟರ ನೆನಪಿನಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಇದರ ಸಂಯುಕ್ತಾಶ್ರಯದಲ್ಲಿ ನಡೆದ  ತಾಳ್ತಜೆ ಕೇಶವ ಭಟ್ಟ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡುತ್ತಿದ್ದರು. ಯಾವ ವಿದ್ವಾಂಸರು ಕೂಡ ತಾವು ಪೂರ್ಣರು ಎಂಬ ಅಹಂನ್ನು ಹೊಂದಬಾರದು. ಜ್ಞಾನಕ್ಕೆ ಸಮಾನಾದದ್ದು ಯಾವುದೂ ಇಲ್ಲವಾದ್ದರಿಂದ ಜ್ಞಾನ ಪ್ರಸರಣೆಯೇ ವಿದ್ವಜ್ಜನರ ಗುರಿಯಾಗಬೇಕು,  ಸತ್ಯ ಸಂಶೋಧನೆಯೇ ಪ್ರತಿಯೊಬ್ಬ ವಿದ್ವಾಂಸರ ಕರ್ತವ್ಯ, ಆದುದರಿಂದ ತಮ್ಮ ನಡುವಿನ ಮೇಲು ಕೀಳು ಭಾವವನ್ನು ಬಿಟ್ಟು ಒಬ್ಬರನೊಬ್ಬರನ್ನು ಅರಿಯುವ ಕಾರ್ಯ ಎಲ್ಲರಿಂದಲೂ ಆಗಬೇಕು ಎಂದರು.
ಪ್ರಶಸ್ತಿ ಪುರಸ್ಕೃತರ ಕುರಿತು ಡಾ. ತಾಳ್ತಜೆ ವಸಂತ ಕುಮಾರ್ ತಮ್ಮ ಅಭಿನಂದನಾ
ಭಾಷಣದಲ್ಲಿ ತಾಳ್ತಜೆ ಕೇಶವ ಭಟ್ಟರು ಮತ್ತು ಡಾ. ಉಪ್ಪಂಗಳ ರಾಮಭಟ್ಟರು ಜಾತಿ, ಭಾಷೆ
ಮತ್ತು ಪಂಗಡವನ್ನು ಮೀರಿ ಯೋಚಿಸುವ ವಿದ್ವಾಂಸರು. ವಿದ್ವತ್ ಲೋಕದಲ್ಲಿ  ವಿಚಾರದ
ಕುರಿತು ಭಿನ್ನಾಭಿಪ್ರಾಯಗಳು  ಇರುತ್ತವೆ  ಹೊರತು, ವ್ಯಕ್ತಿಗಳ ಜೊತೆಯಲ್ಲಿ ಅಲ್ಲ ಎಂಬ
ನಂಬಿಕೆಗೆ ಕಠಿಬದ್ಧರಾದವರು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ನಾರಾಯಣ ಸಭಾಹಿತ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಎಚ್. ಶಾಂತಾರಾಮ್ ಮಾತನಾಡಿ
ಎಳೆಯರಲ್ಲಿ ಸಾಹಿತ್ಯಾಸಕ್ತಿ ಮೂಡಿಸುವ ಕಾರ್ಯ ವಿದ್ವಾಂಸರಿಂದ ನಡೆಯಬೇಕು ಎಂದರು.
ಇದೇ ಸಂದರ್ಭದಲ್ಲಿ ಡಾ. ವರದರಾಜ್ ಚಂದ್ರಗಿರಿ  ಅವರಿಂದ ಕಾಸರಗೋಡು ವಿದ್ವತ್ ಪರಂಪರೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ  ನಡೆಯಿತು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕರಾದ ಪ್ರೊ. ವರದೇಶ ಹಿರೇಗಂಗೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಭ್ರಮರಿ ಶಿವಪ್ರಕಾಶ್ ಪ್ರಾರ್ಥಿಸಿ ಕಾರ್ಯಕ್ರಮ ನಿರ್ವಹಿಸಿದರು  ಪ್ರೊ. ಎಂ. ಎಲ್ ಸಾಮಗ ವಂದಿಸಿದರು.