ಉಡುಪಿ: ಸಂಸ್ಕೃತ ಭಾಷೆಯ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಾ ಬಂದಿದ್ದು, ಅದನ್ನು ತಡೆಯುವ ಕೆಲಸ ಸಂಸ್ಕೃತ ಪಂಡಿತರಿಂದ ಆಗಬೇಕಾಗಿದೆ. ಸಂಸ್ಕೃತ ಭಾಷೆಯಲ್ಲಿ ಕಾಲ ಕಾಲಕ್ಕೆ ಬದಲಾವಣೆ ಆಗುತ್ತಿದ್ದರೆ, ಇಂದು ಮಹಾಭಾರತ, ರಾಮಾಯಣ ಗ್ರಂಥಗಳು ವಿವಿಧ ಭಾಷೆಯಲ್ಲಿ ಲಭಿಸುತ್ತಿದ್ದವು ಎಂದು ಆದಿಚುಂಚನಗಿರಿ ಸಂಸ್ಕೃತ ಕಾಲೇಜಿನ ಪ್ರಾಧ್ಯಾಪಕ ಡಾ.
ಮಧುಸೂಧನ ಅಡಿಗ ಹೇಳಿದರು.
ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ಹಾಗೂ ಮಂಗಳೂರು
ವಿಶ್ವವಿದ್ಯಾಲಯದ ಸಂಸ್ಕೃತ ಶಿಕ್ಷಕ ಸಂಘದ ಸಹಯೋಗದಲ್ಲಿ ಕಾಲೇಜಿನ ಮಿನಿ
ಆಡಿಟೋರಿಯಂನಲ್ಲಿ ಮಂಗಳವಾರ ನಡೆದ ಪ್ರಥಮ ಸೆಮಿಸ್ಟರ್ ಪದವಿ ತರಗತಿಗಳ ನೂತನ
ಪಠ್ಯಪುಸಕ್ತಗಳ ಅನಾವರಣ ಹಾಗೂ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಶಿಕ್ಷಣ ಕೇವಲ ಅಂಕ ಗಳಿಕೆಗೆ ಸೀಮಿತವಾಗಿದ್ದು, ಸಂಪಾದನೆ ಮಾಡುವುದನ್ನು ಮಾತ್ರ ತಿಳಿಸಿಕೊಡುತ್ತಿದೆ. ನಾವು ಸಂಪಾದಿಸುವ ಹಣವನ್ನು ಯಾವ ರೀತಿ ಉಪಯೋಗ ಮಾಡಬೇಕೆಂಬುವುದನ್ನು ಕಲಿಸುತ್ತಿಲ್ಲ ಎಂದರು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಕೆಎಸ್ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.
ಮಂಜುನಾಥ ಎನ್. ಭಟ್, ಕಟೀಲು ಎಸ್ಡಿಪಿಟಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ
ಡಾ. ಭಾಸ್ಕರ್ ಭಟ್, ಬಂಟ್ವಾಳ ಎಸ್ವಿಎಸ್ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಡಾ.
ರಮಾನಂದ, ಮಂಗಳೂರು ಮ್ಯಾಪ್ಸ್ ಕಾಲೇಜಿನ ಸಂಸ್ಕೃತ ಉಪನ್ಯಾಸಕಿ ಡಾ. ಸುರೇಖಾ ಅವರನ್ನು ಸನ್ಮಾನಿಸಲಾಯಿತು.
ಮಂಗಳೂರು ವಿವಿಯ ಸಂಸ್ಕೃತ ಶಿಕ್ಷಕರ ಸಂಘದ ಕಾರ್ಯದಶಿ ಡಾ. ಮಂಜುನಾಥ ಎಸ್. ಭಟ್,
ಕಾಲೇಜಿನ ಪ್ರಾಂಶುಪಾಲ ಡಾ. ಎ. ರಾಘವೇಂದ್ರ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಡಾ.
ಟಿ.ಎಸ್. ರಮೇಶ್ ಸ್ವಾಗತಿಸಿದರು. ಆನಂದ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.