ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಬಗ್ಗೆ ಜಿಲ್ಲೆಯ ರೈತರಿಗೆ ಮಾಹಿತಿ ಇಲ್ಲ:ಸತ್ಯನಾರಾಯಣ ಉಡುಪ

ಉಡುಪಿ: ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳ ರೈತರಿಗೆ ಬಹಳಷ್ಟು ಅನುಕೂಲಕರವಾಗಿದೆ. ಆದರೆ ಜಿಲ್ಲೆಯ ರೈತರಿಗೆ ಸಮರ್ಪಕ ಮಾಹಿತಿ ಇಲ್ಲದ ಕಾರಣ ಈ ಯೋಜನೆಯಿಂದ ಹಿಂದೆ ಸರಿದಿದ್ದಾರೆ ಎಂದು ಭಾರತೀಯ ಕಿಸಾನ್‌ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಹೇಳಿದರು.
ಭಾರತೀಯ ಕಿಸಾನ್‌ ಸಂಘದ ಉಡುಪಿ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ನವೀನಚಂದ್ರ
ಜೈನ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಜಿಲ್ಲಾ ಸಮಿತಿಯ ಮಾಸಿಕ ಸಭೆಯಲ್ಲಿ ಅವರು
ಮಾತನಾಡಿದರು.
ಪ್ರಸ್ತುತ ಅಡಿಕೆ ಹಾಗೂ ಕಾಳು ಮೆಣಸು ಬೆಳೆಗಳಿಗೆ ಮಾತ್ರ ಜಿಲ್ಲೆಯಲ್ಲಿ ಯೋಜನೆ
ಅಳವಡಿಸಲಾಗಿದ್ದು, ವಿಮಾಕಂತು ತುಂಬಲು ಜೂನ್‌ ೩೦ ಕೊನೆ ದಿನವಾಗಿದೆ. ಅಡಿಕೆಗೆ ಪ್ರತಿ
ಹೆಕ್ಟೇರ್‌ಗೆ ₨1,28,000 ವಿಮಾ ಮೊತ್ತ ನಿಗದಿಯಾಗಿದ್ದು, ಅದರ ಪ್ರೀಮಿಯಂ ಶೇ. ೩೨
ಅಂದರೆ ₨ 40,960 ಆಗಿದೆ. ಅದರಲ್ಲಿ ತಲಾ ಶೇ. 13.5 ರಂತೆ ₨17,280 ಮೊತ್ತವನ್ನು
ಕೇಂದ್ರ ಸರ್ಕಾರ ಹಾಗೂ ಅಷ್ಟೇ ಹಣವನ್ನು ರಾಜ್ಯ ಸರ್ಕಾರ ಭರಿಸುತ್ತಿದ್ದು, ರೈತರು
ಕೇವಲ  ಶೇ. 5ರಷ್ಟು ಅಂದರೆ ₨ 6,400 ಪಾವತಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು. ನಿಗದಿತ ಅವಧಿಗಿಂತ ಹೆಚ್ಚಿನ ದಿನಗಳ ಕಾಲ ಅತೀ ಹೆಚ್ಚು ಮಳೆ ಅಥವಾ ಅತೀ ಕಡಿಮೆ ಮಳೆ ಮೊದಲಾದ ಸಂದರ್ಭಗಳಲ್ಲಿ ವಿಮಾ ಮೊತ್ತದ ಶೇ. 20ಕ್ಕಿಂತ ಹೆಚ್ಚಿನ ಪರಿಹಾರ
ದೊರಕುತ್ತದೆ. ಕಳೆದ ಎರಡು ವರ್ಷಗಳಲ್ಲಿ ಒಂದು ವರ್ಷ ಮಳೆ ಹೆಚ್ಚಾದ ಕಾರಣ ಪರಿಹಾರ
ದೊರೆತರೆ, ಈ ಬಾರಿ ಮಳೆ ಕಡಿಮೆಯಾದ ಕಾರಣ ಪರಿಹಾರ ದೊರೆಯಲಿದೆ. ಆದರೆ ಜಿಲ್ಲೆಯಲ್ಲಿ
ರೈತರಿಗೆ ಸಮರ್ಪಕ ಮಾಹಿತಿಯಿಲ್ಲದ ಕಾರಣ ಈ ಯೋಜನೆಯಿಂದ ಹಿಂದೆ ಸರಿದಿದ್ದಾರೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ, ಜಿಲ್ಲಾ ಉಪಾಧ್ಯಕ್ಷರಾದ ರಾಮಚಂದ್ರ
ಅಲ್ಸೆ, ಶ್ರೀನಿವಾಸ ಭಟ್‌, ಪ್ರಮುಖರಾದ ಬಿ.ವಿ. ಪೂಜಾರಿ, ಸದಾನಂದ ಶೆಟ್ಟಿ, ಕೆ.ಪಿ. ಭಂಡಾರಿ, ಸೀತಾರಾಮ ಗಾಣಿಗ, ಪಾಂಡುರಂಗ ಹೆಗ್ಡೆ, ರಾಜೀವ ಶೆಟ್ಟಿ ಮತ್ತು ತಾಲ್ಲೂಕು  ಸಮಿತಿಯ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.