ಉಡುಪಿ: ಏಪ್ರಿಲ್ ೧೮ ರಂದು ನಡೆಯುವ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಪ್ರತಿ ಮತಗಟ್ಟೆಯಿಂದ ಮತದಾನದ ಪ್ರಮಾಣವನ್ನು ಸಂಗ್ರಹಿಸುವಾಗ ಅತ್ಯಂತ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದ್ದಾರೆ.
ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಲೋಕಸಬಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಸಂಗ್ರಹ ಸಂಗ್ರಹಿಸಲು ನಿಯೋಜಿಸಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನಡೆದ ತರಬೇತಿ ಕಾಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮತದಾನ ಪ್ರಾರಂಭವಾಗುವ ಹಿಂದಿನ ದಿನದಂದು, ಮಸ್ಟರಿಂಗ್ ಕೇಂದ್ರಗಳಿಗೆ ಎಲ್ಲಾ ಸಿಬ್ಬಂದಿ ತೆರಳಿದ ಬಗ್ಗೆ ಮತ್ತು ಮತಗಟ್ಟೆಗಳನ್ನು ತಲುಪಿದ ಕುರಿತ ವರದಿಯನ್ನು ಸಲ್ಲಿಸುವಂತೆ ತಿಳಿಸಿದ ಜಿಲ್ಲಾಧಿಕಾರಿ, ಮತದಾನ ದಿನದಂದು ಬೆಳಗ್ಗೆ ಮಾಕ್ ಪೋಲ್ ಪ್ರಾರಂಭವಾಗುವುದಕ್ಕೂ ಮುನ್ನ ಎಲ್ಲಾ ಸೆಕ್ಟರ್ ಅಧಿಕಾರಿಗಳು , ಮತಗಟ್ಟೆ ಅಧಿಕಾರಿಗಳೊಂದಿಗೆ ಮಾತನಾಡಿ , ಮತದಾನಕ್ಕೆ ಎಲ್ಲಾ ಸಿದ್ದತೆ ಮಾಡಿಕೊಂಡಿರುವ ಬಗ್ಗೆ ಪರಿಶೀಲಿಸಬೇಕು, ಎಲ್ಲಾ ಮತಗಟ್ಟೆ ಅಧಿಕಾರಿಗಳು ದೂ.ಸಂಖ್ಯೆಯನ್ನು ಸಂಗ್ರಹಿಸಿ , ಸಂಪರ್ಕದಲ್ಲಿರಬೇಕು, ಚುನಾವಣಾ ಆಯೋಗ ಸೂಚಿಸಿರುವ ಮಾರ್ಗಸೂಚಿಯನ್ವಯವೇ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ವಿವರಗಳು ಮೊದಲು ದಾಖಲಾಗುವುದರಿಂದ ನಿಗಧಿತ ಅವಧಿಯೊಳಗೆ , ಸರಿಯಾದ ಮಾಹಿತಿಯನ್ನು ಸಂಗ್ರಹಿಸಿ, ರಾಜ್ಯ ಚುನಾವಣಾ ಆಯೋಗಕ್ಕೆ ವರದಿ ನೀಡಬೇಕಿರುವುದರಿಂದ, ಅಧಿಕಾರಿಯಿಂದ ಕೆಳಹಂತದ ಸಿಬ್ಬಂದಿವರೆಗೂ ಎಲ್ಲರೂ ತಮ್ಮ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು, ಮತದಾನ ಪ್ರಮಾಣ ಸಂಗ್ರಹದಲ್ಲಿ ಯಾವುದೇ ರೀತಿಯ ತಪ್ಪುಗಳಾಗದಂತೆ ಎಚ್ಚರವಹಿಸಿ ಎಂದು ಡಿಸಿ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಮತ ಪ್ರಮಾಣ ಸಂಗ್ರಹಣೆಯ ನೋಡಲ್ ಅಧಿಕಾರಿ ಚಂದ್ರಶೇಖರ ನಾಯಕ್ , ಜಿಲ್ಲೆಯ ಎಲ್ಲಾ ಸಹಾಯಕ ಚುನಾವಣಾಧಿಕಾರಿಗಳು, ತಹಸೀಲ್ದಾರ್ ಗಳು ಉಪಸ್ಥಿತರಿದ್ದರು.