ಶ್ರೀಕಾಂತ ಹೆಮ್ಮಾಡಿ, ಕುಂದಾಪುರ ( udupi x press ವರದಿ ಫಲಶ್ರುತಿ)
ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಯಡಮೊಗೆ ಗ್ರಾಮಪಂಚಾಯತ್ ವ್ಯಾಪ್ತಿಯ ಹಲವರಿಮಠ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗುರುವಾರ ಬೆಳಿಗ್ಗೆ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಯೋತಿ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದ ಬಳಿಕ ಎಸ್ಡಿಎಮ್ಸಿ, ಪೋಷಕರು, ಹಳೆ ವಿದ್ಯಾರ್ಥಿಗಳೊಂದಿಗೆ ಶಾಲಾ ಕಚೇರಿಯಲ್ಲಿ ಸಭೆ ನಡೆಸಿದರು. ಈ ವೇಳೆಯಲ್ಲಿ ಪೋಷಕರು ತಮ್ಮ ಮಕ್ಕಳಿಗಾಗುತ್ತಿರುವ ಸಮಸ್ಯೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮುಂದಿಟ್ಟರು.
ಸಭೆಯಲ್ಲಿ ಮಾತನಾಡಿದ ಬಿಇಓ ಜ್ಯೋತಿ ಅವರು, ಮುಖ್ಯೋಪಾಧ್ಯಾಯರು ಮೈಸೂರಿನಲ್ಲಿ ನಡೆಯುತ್ತಿರುವ ಕೌನ್ಸಲಿಂಗ್ಗೆ ತೆರಳಿದ್ದು, ಉಳಿದ ಓರ್ವ ಶಿಕ್ಷಕಿ ತಾಯಿ ನಿಧನದ ಹಿನ್ನೆಲೆಯಲ್ಲಿ ತುರ್ತು ರಜೆಗೆ ತೆರಳಿದ್ದರಿಂದ ಸಮಸ್ಯೆ ಉದ್ಭವವಾಗಿದೆ. ತಾತ್ಕಾಲಿಕವಾಗಿ ಸಮೀಪದ ಶಾಲೆಯ ಶಿಕ್ಷಕರನ್ನು ನೇಮಿಸಿದ್ದೇವೆ.
ಗ್ರಾಮೀಣ ಭಾಗವಾದ್ದರಿಂದ ದೂರವಾಣಿ ಸಂಪರ್ಕ ಸಿಗದಿರುವ ಹಿನ್ನೆಲೆಯಲ್ಲಿ ಬುಧವಾರ ಸಮಸ್ಯೆ ತಲೆದೋರಿದೆ. ಇನ್ನುಮುಂದೆ ಈ ರೀತಿಯ ಸಮಸ್ಯೆಯಾಗದಂತೆ ಮುತುವರ್ಜಿ ವಹಿಸುತ್ತೇನೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕಬೇಡಿ. ಈಗಾಗಲೇ ರಜೆಯಲ್ಲಿದ್ದ ಶಿಕ್ಷಕಿ ಮರಳಿ ಸೇವೆಗೆ ಬಂದಿದ್ದಾರೆ ಎಂದರು.
ಯಡಮೊಗೆ ಹಲವರಿಮಠ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಿಲ್ಲದ ಕುರಿತು ಉಡುಪಿ XPress “ಇಲ್ಲಿ ವಿದ್ಯಾರ್ಥಿಗಳಿಗೆ ಪಾಠವಿಲ್ಲ ಆಟ ಮಾತ್ರ: ಶಿಕ್ಷಕರಿಲ್ಲ ಇವರಿಗೆ ಮೈದಾನವೇ ಎಲ್ಲ ಎಂಬ ಶೀರ್ಷಿಕೆಯಡಿಯಲ್ಲಿ ವಿಶೇಷ ವರದಿ ಪ್ರಕಟಿಸಿ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡಿತ್ತು.
ಗುರುವಾರ ಬೆಳಿಗ್ಗೆ ಹಲವರಿಮಠ ಶಾಲೆಗೆ ತೆರಳಿ ಪೋಷಕರೊಂದಿಗೆ ಮಾತುಕತೆ ನಡೆಸಿದ್ದೇನೆ. ರಜೆಯಲ್ಲಿದ್ದ ಶಿಕ್ಷಕಿ ಮರಳಿ ಶಾಲೆಗೆ ಬಂದಿದ್ದು, ಇನ್ನುಮುಂದೆ ಇಂತಹ ಸಮಸ್ಯೆಗಳಾಗದಂತೆ ಪೋಷಕರಿಗೆ ಭರವಸೆ ನೀಡಿದ್ದೇನೆ.
-ಜ್ಯೋತಿ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ, ಬೈಂದೂರು












