-ಶ್ರೀಕಾಂತ ಹೆಮ್ಮಾಡಿ ಕುಂದಾಪುರ
ಕುಂದಾಪುರ: ಅಭಿವೃದ್ದಿಯ ಹೆಸರಿನಲ್ಲಿ ಇಲ್ಲಿನ ಕೋರ್ಟ್ ಆವರಣದ ಎದುರಿರುವ ಬೃಹದಾಕಾರದ ದೇವದಾರು ಮರಗಳ ಬೇರುಗಳನ್ನು ತುಂಡರಿಸಿದ ಬಗ್ಗೆ ಉಡುಪಿ XPRESS ಪ್ರಕಟಿಸಿದ ವಿಶೇಷ ವರದಿಗೆ ಕುಂದಾಪುರ ಸಹಾಯಕ ಆಯುಕ್ತ ಕೆ. ರಾಜು ಸ್ಪಂದಿಸಿದ್ದಾರೆ.
“ನೆರಳು ಕೊಡೋ ಮರದ ಕೊರಳು ಕತ್ತರಿಸಿದ ಕುಂದಾಪುರ ಪುರಸಭೆ” ಎಂಬ ಶೀರ್ಷಿಕೆಯಡಿಯಲ್ಲಿ ಉಡುಪಿ XPRESS ಸೋಮವಾರ ವಿಶೇಷ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು. UDUPI XPRESS ವರದಿಗೆ ಸ್ಪಂದಿಸಿರುವ ಎಸಿ ಕೆ. ರಾಜು ಮಂಗಳವಾರ ಬೆಳಿಗ್ಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮರಗಳ ಬೇರುಗಳಿಗೆ ಯಾವುದೇ ತೊಂದರೆಯಾಗದಂತೆ ಕಾಮಗಾರಿ ನಿರ್ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ. ಎಸಿ ಭೇಟಿಯ ವೇಳೆ ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಇದ್ದರು.
ವ್ಯಾಪಕ ಶ್ಲಾಘನೆ:
ಶತಮಾನಗಳಿಂದಲೂ ಕೋರ್ಟ್ ಹಾಗೂ ತಾಲೂಕು ಕಚೇರಿಗಳಿಗೆ ಬರುವ ಜನರಿಗೆ ನೆರಳು ನೀಡುತ್ತಿರುವ ಮರಗಳ ಹನನದ ಕುರಿತಂತೆ UDUPI XPRESS ಪ್ರಕಟಿಸಿದ ವಿಶೇಷ ವರದಿಗೆ ನೆಟ್ಟಿಗರು ಹಾಗೂ ಪರಿಸರಪ್ರೇಮಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವರದಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಜ್ಙಾವಂತ ನಾಗರಿಕರು ಪುರಸಭೆಯ ವಿರುದ್ದ ಕಿಡಿಕಾರಿದ್ದಾರೆ.
ಪರಿಸರ ಪ್ರೇಮಿ ಕೆಎಲ್ ಕಾರಂತರು ನೆಟ್ಟ ದೇವದಾರು ಮರ:
ಕುಂದಾಪುರದ ನ್ಯಾಯಾಲಯಗಳ ಎದುರಿನ ಖಾಲಿ ಜಾಗವು ನಾನು ಕಂಡಂತೆ ಒಂದು ಕಾಲದಲ್ಲಿ “ಗಾಡಿ ಬೇಣ” ಆಗಿದ್ದಿತ್ತು. ಕುಂದಾಪುರದ ಸುಪ್ರಸಿದ್ಧ ಶನಿವಾರ ಸಂತೆಯು ನ್ಯಾಯಾಲಯದ ತೀರಾ ಹತ್ತಿರ ಅಂದರೆ ಆಗಿನ ಸಬ್‌ರಿಜಿಸ್ಟರ್ ಕಛೇರಿ ಎದುರಿಗೆ ಇದ್ದಿತ್ತು. ಈ ಸಂತೆಗೆ ಹಳ್ಳಿ ಹಳ್ಳಿಗಳಿಂದ ಎತ್ತಿನಗಾಡಿಗಳಲ್ಲಿ ತೆಂಗು, ಅಡಿಕೆ, ಬಾಳೆಗೊನೆ, ತರಕಾರಿಯೇ ಮುಂತಾದ ಸಾಮಾನು ಸಾಮಗ್ರಿ ಬರುತ್ತಿದ್ದವು. ಈ ಗಾಡಿಗಳು, ಎತ್ತುಗಳು ವಿಶ್ರಮಿಸುವುದೇ ಈ “ಗಾಡಿಬೇಣ” ದಲ್ಲಿ. ಇಲ್ಲೇ ಎತ್ತುಗಳನ್ನು ಬೀಳಿಸಿ ಕಾಲುಗಳಿಗೆ ಲಾಳ ಹೊಡೆಸುವುದನ್ನೂ ಕಂಡಿದ್ದೇನೆ. ಸಾಯಂಕಾಲ ಮತ್ತೆ ಸಂತೆಯಿಂದ ಖರೀದಿಸಿದವರ ಮಾಲು ಹೊತ್ತು ಎತ್ತಿನಗಾಡಿಗಳು ಹಳ್ಳಿಗಳಿಗೆ ಮರಳುತ್ತಿದ್ದುವು.ಈ ಎತ್ತುಗಳಿಗೆ ಮತ್ತು ಗಾಡಿ ಹೊಡೆಯುವವರಿಗೆ ತಂಪು ನೆರಳಾಗಲಿ ಎಂದು ಕುಂದಾಪುರದ ಖ್ಯಾತ ವಿಜ್ಞಾನ ಅಧ್ಯಾಪಕ, ತೋಟಗಾರಿಕೆ ತಜ್ಞ, ಪರಿಸರ ಪ್ರೇಮಿ ಕೆ ಎಲ್ ಕಾರಂತರು ಈ ದೇವದಾರು ಮರಗಳನ್ನು ನೆಟ್ಟಿದ್ದರು. ಈ ನೆರಳಿನಲ್ಲೇ ನಾವು ೧೩-೪-೧೯೮೦ ರಲ್ಲಿ ಪ್ರಪ್ರಥಮ ದ. ಕ. ಜಿಲ್ಲಾ ವಕೀಲರ ಸಮ್ಮೇಳನ ಜರಗಿಸಿದ್ದೆವು. ಸಮ್ಮೇಳನ ವೇದಿಕೆಗೆ ಪ್ರಸಿದ್ಧ ವಕೀಲರಾಗಿ, ಸ್ವಾತಂತ್ರ್ಯ ಹೋರಾಟಗಾರನೂ ಆಗಿ, ಮದ್ರಾಸಿನ ಪ್ರಕಾಶಂ ಮಂತ್ರಿಮಂಡಲದಲ್ಲಿ ಕಂದಾಯ ಮಂತ್ರಿಗಳಾಗಿ ದ ಕ ಜಿಲ್ಲೆಯ ಪ್ರಪ್ರಥಮ ಮಂತ್ರಿಯಾದ ಕೋಟ ರಾಮಕೃಷ್ಣ ಕಾರಂತರ ಹೆಸರಿಟ್ಟಿದ್ದೆವು. ಹೀಗಿದೆ ಈ ಜಾಗದ ಇತಿಹಾಸ, ಕಥೆ. ಕಾರಂತರು ನೆಟ್ಟ, ಈಗಲೂ ಜನಗಳಿಗೆ ನೆರಳು ನೀಡುವ, ಸದ್ಯ ನ್ಯಾಯವಾದಿಗಳ ವಾಹನಬೇಣವಾಗಿರುವ ಜಾಗದ ಹಳೆಯ ಮರಗಳನ್ನು ಕಡಿಸಬಾರದು. ಮರಕ್ಕೆ ಹಾನಿಯಾಗುವ ತರಹ ಬೇರುಗಳಿಗೆ ಪೆಟ್ಟು ಮಾಡಲೂಬಾರದು. ಮರಗಳನ್ನು ಅವುಗಳಷ್ಟಕ್ಕೇ ಇರಲುಬಿಡಿ ಎಂದೇ ವಿನಂತಿಸುತ್ತೇನೆ ಎಂದು ಕುಂದಾಪುರದ ಹಿರಿಯ ನ್ಯಾಯವಾದಿ ಎಎಸ್‌ಎನ್ ಹೆಬ್ಬಾರ್ ತಿಳಿಸಿದ್ದಾರೆ.












