ಮುನಿಯಾಲು ಆಯುರ್ವೇದ ಸಂಸ್ಥೆಯ ಕ್ಯಾನ್ಸರ್ ಔಷಧಿ ಹಾಗೂ ಕ್ಯಾನ್ಸರ್ ಚಿಕಿತ್ಸಾ ಕ್ರಮಕ್ಕೆ ಅಮೇರಿಕಾದ ಪೇಟೆಂಟ್

ಉಡುಪಿ: ಮುನಿಯಾಲು ಆಯುರ್ವೇದ ಸಂಸ್ಥೆಯ ಅಧ್ಯಕ್ಷ ಡಾ.ಎಂ. ವಿಜಯಭಾನು ಶೆಟ್ಟಿಯವರು ಅಭಿವೃದ್ಧಿಪಡಿಸಿದ ಕ್ಯಾನ್ಸರ್ ಔಷಧಿ ಹಾಗೂ ಕ್ಯಾನ್ಸರ್ ಚಿಕಿತ್ಸಾ ಕ್ರಮಕ್ಕೆ ಎರಡು ಪ್ರತ್ಯೇಕ ಪೇಟೆಂಟ್‍ಗಳು ಅಮೆರಿಕಾದ ಡೈರೆಕ್ಟರ್ ಆಫ್ ಪೇಟೆಂಟ್ ಎಂಡ್ ಟ್ರೇಡ್‍ಮಾರ್ಕ್ ಆಫೀಸಿನಿಂದ ದೊರೆತಿದೆ. ಮುಂದಿನ ಇಪ್ಪತ್ತು ವರ್ಷಗಳ ಅವಧಿಗೆ ಸಲ್ಲುವ ಈ ಪೇಟೆಂಟ್ ಆಯುರ್ವೇದ ಇತಿಹಾಸದಲ್ಲಿ ಅಮೆರಿಕಾದಿಂದ ದೊರೆತ ಒಂದು ಅಪರೂಪದ ಮನ್ನಣೆ. ಆರು ನೂರಕ್ಕೂ ಹೆಚ್ಚು ಸಂಖ್ಯೆಯ, ವಿವಿಧ ಹಂತಗಳಲ್ಲಿ ಬಳಲುತ್ತಿದ್ದ ವಿವಿಧ ತರಹದ ಕ್ಯಾನ್ಸರ್ ರೋಗಿಗಳು ಈ ಔಷಧಿ ಮತ್ತು ಚಿಕಿತ್ಸಾ ಕ್ರಮವನ್ನು ಮಣಿಪಾಲದ ಮುನಿಯಾಲು ಆಯುರ್ವೇದ ಆಸ್ಪತ್ರೆ ಹಾಗೂ ಸಂಸ್ಥೆಯ ವಿವಿಧ ಚಿಕಿತ್ಸಾಲಯಗಳಲ್ಲಿ ಪಡೆದಿದ್ದು ಇಪ್ಪತ್ತಾರಕ್ಕೂ ಅಧಿಕ ಕ್ಯಾನ್ಸರ್ ರೋಗಿಗಳು ಗುಣಮುಖರಾದ ದಾಖಲೆಗಳನ್ನು ಸಂಗ್ರಹಿಸಲಾಗಿದೆ.

 

ಯಾವುದೇ ದುಷ್ಪರಿಣಾಮಗಳು ಇಲ್ಲದಿರುವಿಕೆ, ಎಂಟು ವಿಧದ ಸೆಲ್ ಲೈನ್‍ಗಳಲ್ಲಿನ ಉಪಯುಕ್ತತೆ, ಶ್ವಾಸಕೋಶದ ಸೆಲ್ ಲೈನ್‍ಗಳ ಜೀನ್ ಮಟ್ಟದಲ್ಲಿ ಮುನೆಕ್ಸ್‍ನ ಯಶಸ್ವೀ ಉಪಯೋಗಗಳು ಸಂಶೋಧನೆಯಲ್ಲಿ ವೈಜ್ಞಾನಿಕವಾಗಿ ದೃಢಪಟ್ಟಿರುತ್ತದೆ. ಭಾರತ ಸರಕಾರ ಸಹಿ ಮಾಡಿರುವ ಸುಮಾರು 150 ರಾಷ್ಟ್ರಗಳನ್ನು ಒಳಗೊಂಡಿದ್ದು ಮುನೆಕ್ಸ್ ಹಲವು ರಾಷ್ಟ್ರಗಳಲ್ಲಿ ಪೇಟೆಂಟ್ ಪೆಂಡಿಗ್ ಟ್ಯಾಗನ್ನು ಹೊಂದಿದ್ದು ಜಗತ್ತಿನ ಹೆಚ್ಚಿನ ಭಾಗದ ಕ್ಯಾನ್ಸರ್ ರೋಗಿಗಳಿಗೆ ಈ ಔಷಧಿಯ ಉಪಯೋಗವನ್ನು ಅಂತರಾಷ್ಟ್ರೀಯ ಔಷಧ ಸಂಸ್ಥೆಗಳ ಒಡಂಬಡಿಕೆಯ ಮೂಲಕ ಒದಗಿಸಲು ಈ ಪೇಟೆಂಟ್ ಸಹಾಯಕಾರಿ ಎಂದು ಡಾ. ವಿಜಯಭಾನು ಶೆಟ್ಟಿಯವರು ತಿಳಿಸಿದ್ದಾರೆ.  ಆಯುರ್ವೇದ ಕ್ಷೇತ್ರದಲ್ಲಿ ಇವರ ಕೊಡುಗೆಗೆ ಅಂತರಾಷ್ಟ್ರೀಯ ಇತನೋಫಾರ್ಮಕೋಲಜಿ ಒಕ್ಕೂಟವು 2019ನೇ ವರುಷದ ವಿಶೇಷ ಪ್ರಶಸ್ತಿ ನೀಡಿ ಗೌರವಿಸಿದೆ. ಮುನಿಯಾಲು ಆಯುರ್ವೇದ ಸಂಸ್ಥೆ ಆಯುರ್ವೇದದಲ್ಲಿ ಡಿಗ್ರಿ ಕೋರ್ಸ್, ಸ್ನಾತಕೋತ್ತರ ಕೋರ್ಸ್‍ಗಳು, ಪಿ.ಹೆಚ್.ಡಿ ಕೋರ್ಸ್‍ಗಳು, ಆಸ್ಪತ್ರೆ, ಗಿಡಮೂಲಿಕಾವನ, ಚಿಕಿತ್ಸಾಲಯಗಳು ಮತ್ತು ಔಷಧಿ ಉತ್ಪಾದನಾ ಘಟಕಗಳನ್ನು ನಡೆಸುತ್ತಿದೆ. ಸಂಸ್ಥೆಯ ಪ್ರಕಟಣೆಯಾದ ಸಚಿತ್ರ ಚರಕ ಸಂಹಿತೆಯು ಆಯುರ್ವೇದ ಕ್ಷೇತ್ರದ ಅತ್ಯಂತ ಪ್ರಮುಖ ಗ್ರಂಥವಾಗಿದ್ದು ಭಾರತದ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂರಿಂದ ಪ್ರಶಂಸೆಗೊಳಪಟ್ಟು ಅವರಿಂದ ಬಿಡುಗಡೆಗೊಂಡಿರುತ್ತದೆ.