ಉಡುಪಿ: ಉಡುಪಿಯ ಪುರಭವನದಲ್ಲಿ ಆಯೋಜಿಸಲಾದ ಎರಡು ದಿನಗಳ ರಾಜ್ಯ ಮಟ್ಟದ ವಕೀಲರ ಯಕ್ಷಗಾನ ಸ್ಪರ್ಧೆ ‘ಯಕ್ಷ ಕಲಾ ವೈಭವವನ್ನು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ಬಿ.ಎ. ಪಾಟೀಲ್ ಸೋಮವಾರ ಉದ್ಘಾಟಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ಬಿ.ಎ. ಪಾಟೀಲ್ ಮಾತನಾಡಿ, ವಕೀಲ ವೃತ್ತಿ ಹೆಚ್ಚು ಒತ್ತಡದಿಂದ ಇರುವ ವೃತ್ತಿಯಾಗಿದೆ. ಈ ಮಧ್ಯೆ ವಕೀಲರು ನಮ್ಮ ಸಂಸ್ಕೃತಿಗಾಗಿ ಸಮಯವನ್ನು
ವಿನಿಯೋಗಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ
ಬಿ.ಎ. ಪಾಟೀಲ್ ಹೇಳಿದರು. ಸಾಹಿತಿ ಶಿವರಾಮ ಕಾರಂತರು ಮಾಡಿದ ಹೊಸ ಹೊಸ ಪ್ರಯೋಗಗಳಿಂದ ಇಂದು ಯಕ್ಷಗಾನ ಪ್ರಸಿದ್ಧ ಕಲೆಯಾಗಿ ರೂಪುಗೊಳ್ಳಲು ಸಾಧ್ಯವಾಗಿದೆ. ಇದರಲ್ಲಿರುವ ಬಣ್ಣ, ವೇಷ ಭೂಷಣ, ನೃತ್ಯ,ಮಾತುಗಾರಿಕೆ ಅದ್ಭುತವಾಗಿದೆ. ಇದು ಬಹಳ ಪುರಾತನ ಕಲೆ ಎಂಬುದಕ್ಕೆ ಸಾಕಷ್ಟು ಪುರಾವೆಗಳು ದೊರೆತಿವೆ ಎಂದರು.
ಉಡುಪಿ ಪ್ರಧಾನ ಮತ್ತು ಜಿಲ್ಲಾ ನ್ಯಾಯಾಧೀಶ ಸಿ.ಎಂ. ಜೋಶಿ ಮಾತನಾಡಿದರು.
ವಕೀಲರ ಸಂಘದ ಅಧ್ಯಕ್ಷ ಎಚ್. ರತ್ನಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಘದ
ಗೌರವಾಧ್ಯಕ್ಷ ಶ್ರೀಪತಿ ಆಚಾರ್ಯ ಉಪಸ್ಥಿತರಿದ್ದರು. ಯಕ್ಷಕಲಾ ವೈಭವದ ಅಧ್ಯಕ್ಷ ವಿಜಯ
ಹೆಗ್ಡೆ ಸ್ವಾಗತಿಸಿದರು. ಮುಂಡ್ಕೂರು ವಿನಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು