ಬಿಜೆಪಿ ಭಾವನಾತ್ಮಕ ವಿಚಾರವನ್ನು ಮುಂದಿಟ್ಟುಕೊಂಡು ಜನರ ದಾರಿ ತಪ್ಪಿಸುತ್ತಿದೆ :ಗೋಪಾಲ ಪೂಜಾರಿ

ಕುಂದಾಪುರ: ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ಬಳಿಕವೂ ಹಿಂದಿನ ಸರಕಾರದಂತೆ ಜನರಿಗೆ ನೀಡಿರುವ ಭರವಸೆಯನ್ನು ಪ್ರಾಮಾಣಿಕವಾಗಿ ಈಡೇರಿಸಲಾಗುತ್ತಿದೆ. ಆದರೆ ಬಿಜೆಪಿ ಮಾತ್ರ ಭಾವನಾತ್ಮಕ ವಿಚಾರವನ್ನು ಮುಂದಿಟ್ಟುಕೊಂಡು ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಅವರು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿತ್ತೂರು ಕಂಚಿನಕೊಡ್ಲುವಿನಲ್ಲಿ ಸೋಮವಾರ ಜರುಗಿದ ಕಾಂಗ್ರೆಸ್ – ಜೆಡಿಎಸ್ ಪಕ್ಷ ಚುನಾವಣಾ ಪ್ರಚಾರದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್ ಪಕ್ಷ ತತ್ವ ಸಿದ್ಧಾಂತಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದು, ಅಭಿವೃದ್ಧಿ ಹಾದಿಯಲ್ಲಿಯೇ ಸಾಗಿದೆ. ಕಳೆದ ಅರವತ್ತು ವರ್ಷಗಳಲ್ಲಿ ವಿವಿಧ ರಂಗದಲ್ಲಿ ದೇಶ ಪ್ರಗತಿಯನ್ನು ಸಾಧಿಸಲು ಕಾಂಗ್ರೆಸ್ ಪಕ್ಷದ ಕೊಡುಗೆ ದೊಡ್ಡದಿದೆ. ಬಿಜೆಪಿ ಜನರನ್ನು ಒಂದು ಭಾರಿ ಮರಳು ಮಾಡಬಹುದು ಆದರೆ ಪ್ರತಿ ಭಾರಿಯೂ ಮರಳು ಮಾಡಲು ಸಾಧ್ಯವಿಲ್ಲ. ಈ ಭಾರಿ ಜನರು ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ಬಹುಮತದಿಂದ ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.

ಮೋದಿ ಹೆಸರಲ್ಲಿ ಮತಯಾಚನೆ ಹಾಸ್ಯಾಸ್ಪದ!
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಸ್. ಮಧು ಬಂಗಾರಪ್ಪ ಮಾತನಾಡಿ ಅಭ್ಯರ್ಥಿಗಳು ತಮ್ಮ ಹೆಸರಿನಲ್ಲಿ ಓಟು ಕೇಳದೇ ಮೋದಿ ಹೆಸರಿನಲ್ಲಿ ಓಟು ಕೇಳುತ್ತಿರುವುದು ಹಾಸ್ಯಾಸ್ಪದ ಸಂಗತಿ. ಸ್ವಂತ ವರ್ಚಸ್ಸಿಲ್ಲದೇ, ಕ್ಷೇತ್ರದಲ್ಲಿ ಅಭಿವೃದ್ಧಿಯನ್ನೂ ಮಾಡದೇ ಈಗ ಮೋದಿ ಜಪ ಮಾಡಿ ಚುನಾವಣೆ ಗೆಲ್ಲಬಹುದು ಎಂಬ ಭ್ರಮೆಯಲ್ಲಿದ್ದಾರೆ. ಆದರೆ ಈ ಭಾರಿ ಜನರು ತಕ್ಕ ಪಾಠ ಕಲಿಸಲಿದ್ದು, ಬೈಂದೂರು ಕ್ಷೇತ್ರದಲ್ಲಿಯೂ ಅಧಿಕ ಮತ ದೊರೆಯುವ ನಿರೀಕ್ಷೆ ಇದೆ ಎಂದರು.
ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಯು. ಆರ್. ಸಭಾಪತಿ, ಮಂಜುನಾಥ ಭಂಡಾರಿ, ಎಸ್. ರಾಜು ಪೂಜಾರಿ, ಮಂಜಯ್ಯ ಶೆಟ್ಟಿ, ಸಂಪಿಗೇಡಿ ಸಂಜೀವ ಶೆಟ್ಟಿ, ವಾಸುದೇವ ಯಡಿಯಾಳ್, ಪ್ರಸನ್ನಕುಮಾರ್ ಶೆಟ್ಟಿ ಕೆರಾಡಿ, ಪಿ. ಎಲ್. ಜೋಸ್, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನಕುಮಾರ್ ಉಪ್ಪುಂದ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯೆ ಜ್ಯೋತಿ ಅಚ್ಚುತ ನಾಯ್ಕ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ದೇವಾಡಿಗ, ವಂಡ್ಸೆ ಗ್ರಾ.ಪಂ ಅಧ್ಯಕ್ಷ ಉದಯ ಶೆಟ್ಟಿ ಅಡಿಕೆಕೊಡ್ಲು, ಹಕ್ಲಾಡಿ ಗ್ರಾ.ಪಂ ಉಪಾಧ್ಯಕ್ಷ ಸುಭಾಷ್ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ, ಕಾರ್ಯಾಧ್ಯಕ್ಷ ಪ್ರಶಾಂತ್ ಪೂಜಾರಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಬೈಂದೂರು ಜೆಡಿಎಸ್ ಅಧ್ಯಕ್ಷ ಸಂದೇಶ್ ಭಟ್, ಜೆಡಿಎಸ್ ಪ್ರಮುಖರಾದ ಸಬ್ಲಾಡಿ ಮಂಜಯ್ಯ ಶೆಟ್ಟಿ, ರವಿ ಶೆಟ್ಟಿ, ಮನ್ಸೂರ್ ಇಬ್ರಾಹಿಂ ಮೊದಲಾದವರು ಇದ್ದರು.