ಉಡುಪಿ: ಮತಗಟ್ಟೆಯಲ್ಲಿ ಮತದಾರರಿಗೆ ಮಾಹಿತಿ ನೀಡುವ ಪೋಸ್ಟರ್ ಬಿಡುಗಡೆ

ಉಡುಪಿ: ಜಿಲ್ಲೆಯಲ್ಲಿ ಏಪ್ರಿಲ್ 18 ರಂದು ನಡೆಯುವ ಚುನಾವಣೆಯಲ್ಲಿ, ಮತದಾರರಿಗೆ ಮತಗಟ್ಟೆಯ ಕುರಿತು ಮಾಹಿತಿ ನೀಡಲು ವಿವಿಧ ಬಗೆಯ ಪೋಸ್ಟರ್ ಗಳನ್ನು ಚುನಾವಣಾ ಆಯೋಗ ಬಿಡುಗಡೆಗೊಳಿಸಿದೆ.

ಮತಗಟ್ಟೆಯಲ್ಲಿ ವಿವಿಧ ಅಧಿಕಾರಿಗಳು ನಿರ್ವಹಿಸುವ ಕರ್ತವ್ಯಗಳ ವಿವರದ ಪೋಸ್ಟರ್ ನೀಡಲಾಗಿದ್ದು, ಇದರಿಂದ ಮತದಾರರು ಮತಗಟ್ಟೆಯಲ್ಲಿ ಯಾವ ಅಧಿಕಾರಿಗಳ ಬಳಿ ತೆರಳಬೇಕು , ಏನು ಮಾಡಬೇಕು  ಮುಂತಾದ ಅನವಶ್ಯಕ ಗೊಂದಲಕ್ಕೆ ಒಳಗಾಗುವುದನ್ನು ತಪ್ಪಿಸಬಹುದಾಗಿದೆ.

ಮತದಾನ ಕೇಂದ್ರದಲ್ಲಿ ಯಾವ ಗುರುತಿನ ದಾಖಲೆ ತೋರಿಸಿ ಮತದಾನ ಮಾಡಬಹುದು  ಮಾಹಿತಿಯಿದ್ದು, ಮತದಾರರ ಪೋಟೋ ಸ್ಲಿಪ್ ಮಾಹಿತಿಗಾಗಿಯೇ ಹೊರತು ಮತಗಟ್ಟೆಯಲ್ಲಿ ಗುರುತಿನ ದಾಖಲೆಯಾಗಿ ಉಪಯೋಗಿಸಲು ಬರುವುದಿಲ್ಲ ಎಂದ ಮಾಹಿತಿ ನೀಡಲಾಗಿದೆ.

 ಇವಿಎಂ ಬಳಕೆ ಮತ್ತು ವಿವಿ ಪ್ಯಾಟ್ ಯಂತ್ರ ಬಳಿಸಿ ಹೇಗೆ ಮತ ಚಲಾಯಿಸಬಹುದು  ಎಂಬ ಸಚಿತ್ರ ಮಾಹಿತಿಯನ್ನು ನೀಡಲಾಗಿದ್ದು, ಮತದಾರರು ಮತ ಚಲಾಯಿಸುವ ವಿಧಾನವನ್ನು ಹಾಗೂ ಈ ಯಂತ್ರಗಳ  ಕಾರ್ಯ ವಿಧಾನವನ್ನೂ ಸಹ ವಿವರಿಸಲಾಗಿದೆ.

ಮತದಾನ ಕೇಂದ್ರದಲ್ಲಿ ಅಂಗವಿಕಲರಿಗೆ, ಹಿರಿಯ ನಾಗರೀಕರಿಗೆ, ಅಂಧರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ಇದೆ.

ಈ ಎಲ್ಲಾ ಪೋಸ್ಟರ್ ಗಳನ್ನು ಮಸ್ಟರಿಂಗ್ ಸಮಯದಲ್ಲಿ ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ವಿತರಿಸಿಲು ಕ್ರಮ ಕೈಗೊಂಡಿದ್ದು, ಮತಕೆಂದ್ರಕ್ಕೆ ತೆರಳಿದ ಕೂಡಲೇ ಮತಗಟ್ಟೆ ಅಧಿಕಾರಿಗಳು ಈ ಪೋಸ್ಟರ್ ಗಳನ್ನು ಮತಕೇಂದ್ರ ಪ್ರವೇಶಿಸುವ ಮುನ್ನ ಮತದಾರರಿಗೆ ಸ್ಪಷ್ಟವಾಗಿ ಕಾಣುವ ಕಡೆಗಳಲ್ಲಿ ಅಳವಡಿಸುವಂತೆ ಸೂಚನೆ ನೀಡಲಾಗಿದೆ.