ಮೀನುಗಾರರ ನಾಪತ್ತೆ ಪ್ರಕರಣ ನ್ಯಾಯಾಂಗ ತನಿಖೆಗೆ ಒಪ್ಪಿಸಿ:ಸಿಐಟಿ ಆಗ್ರಹ

ಉಡುಪಿ: ಏಳು ಮಂದಿ ಮೀನುಗಾರ ನಾಪತ್ತೆ ಪ್ರಕರಣದಲ್ಲಿ ವಾಸ್ತವ ಸಂಗತಿಯನ್ನು ಮರೆಮಾಚಲಾಗಿದ್ದು ಈ ಕುರಿತು ಸುದೀರ್ಘ ತನಿಖೆಯಾಗಬೇಕು. ರಾಜ್ಯ ಸರಕಾರ ಪರಿಹಾರ 
ಘೋಷಣೆ ಮಾಡಿದೆ. ಅದೇ ರೀತಿ ಕೇಂದ್ರ ಸರ್ಕಾರವೂ ಗರಿಷ್ಠ ಪ್ರಮಾಣದ ಪರಿಹಾರ ನೀಡಬೇಕು ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು) ಉಡುಪಿ ಜಿಲ್ಲಾ ಸಮಿತಿಯ ಆಗ್ರಹಿಸಿದೆ. 
ಹೈಕೋರ್ಟ್‌ ಆದೇಶದಂತೆ ಕನಿಷ್ಠ ಕೂಲಿ ಜಾರಿಗೊಳಿಸುವಂತೆ ಹಾಗೂ ವಿವಿಧ
ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌
(ಸಿಐಟಿಯು) ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
 
ಹೈಕೋರ್ಟ್‌ 37 ವಿವಿಧ ಶೆಡ್ಯೂಲ್‌ ಕೈಗಾರಿಕೆಗಳಿಗೆ ರಾಜ್ಯ ಸರ್ಕಾರ ನಿಗದಿಗೊಳಿಸಿರುವ
ಕನಿಷ್ಠ ವೇತನ ಅಧಿಸೂಚನೆಯನ್ನು ಎತ್ತಿ ಹಿಡಿದಿದ್ದು, ಕಾರ್ಮಿಕರಿಗೆ ಅಧಿಸೂಚನೆ ಹೊರಡಿಸಿದ ದಿನಾಂಕದಿಂದಲೇ ಶೇ. 6ರಷ್ಟು ಬಡ್ಡಿದರದೊಂದಿಗೆ ಬಾಕಿ ವೇತನವನ್ನು 8 ವಾರದೊಳಗೆ ನೀಡುವಂತೆ ಆದೇಶಿಸಿದೆ. ಇದರಿಂದ ಈ 37 ವಿವಿಧ ಕೆಲಸಗಳಲ್ಲಿ ತೊಡಗಿರುವ ಕಾರ್ಮಿಕರ ಮೂಲ ವೇತನ ಹೆಚ್ಚಳವಾಗಿದೆ. ಅಧಿಸೂಚನೆಗಿಂತ ಕಡಿಮೆ ಕೂಲಿ ನೀಡುತ್ತಿರುವ ಆಡಳಿತ ಮಂಡಳಿ ಹಾಗೂ ಮಾಲೀಕರು ತಕ್ಷಣವೇ ಬಾಕಿ ಸಮೇತ ಕನಿಷ್ಠ ಕೂಲಿಯನ್ನು ನೀಡಬೇಕು. ಆದೇಶವನ್ನು ಸಮರ್ಪಕವಾಗಿ ಜಾರಿಗೊಳಿಸಲು ಸರ್ಕಾರ, ಜಿಲ್ಲಾಡಳಿತ ಹಾಗೂ ಕಾರ್ಮಿಕ ಇಲಾಖೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಿಐಟಿಯು ಜಿಲ್ಲಾ ಸಂಚಾಲಕ ಕೆ. ಶಂಕರ್‌ ಮಾತನಾಡಿ,  ಕೆರೆ,ನದಿ ಸೇರಿದಂತೆ ಜಲಮೂಲಗಳ ಹೊಳೆತ್ತಲು ಯೋಜನೆ ರೂಪಿಸಬೇಕಿತ್ತು. ಆದರೆ ಜಿಲ್ಲಾಡಳಿತ ಸರಿಯಾದ ಮುಂಜಾಗೃತ ಕ್ರಮಕೈಗೊಳ್ಳದಿರುವ ಪರಿಣಾಮ ಉಡುಪಿ ನಗರ ಸೇರಿದಂತೆ ಜಿಲ್ಲೆಯಲ್ಲಿ ನೀರಿನ ಅಭಾವ ಸೃಷ್ಟಿಯಾಗಿದೆ ಎಂದರು.
ಸಿಐಟಿಯು ಜಿಲ್ಲಾಧ್ಯಕ್ಷ ಪಿ. ವಿಶ್ವನಾಥ ರೈ, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಮುಖಂಡರಾದ ವಿಠಲ ಪೂಜಾರಿ, ಶಶಿಧರ್‌ ಗೊಲ್ಲ, ಕವಿರಾಜ್‌, ನಳಿನಿ, ಸುಶೀಲಾ ನಾಡ, ಸುರೇಶ್‌ ಕಲ್ಲಗಾರ, ಶೇಖರ ಬಂಗೇರ, ದಾಸು ಭಂಡಾರಿ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.