ಲೋಕಸಭಾ ಚುನಾವಣೆ: ಬೈಂದೂರು ಕ್ಷೇತ್ರದಲ್ಲಿ ಹಲವೆಡೆ ಬಿರುಸಿನ ಮತದಾನ

ಕುಂದಾಪುರ: ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಮಂಗಳವಾರ ನಡೆಯುತ್ತಿದ್ದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ಕ್ಷೇತ್ರದಲ್ಲಿ ಬೆಳಗ್ಗೆಯಿಂದ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿರುವುದು ಕಂಡುಬಂದಿದೆ.
ಹೆಮ್ಮಾಡಿ, ವಂಡ್ಸೆ ಸೇರಿದಂತೆ ಕೆಲವು ಕಡೆಗಳಲ್ಲಿ ಇವಿಎಂ ಸಮಸ್ಯೆಯಿಂದ ಮತದಾನ ಅರ್ಧಗಂಟೆಗಳ ಕಾಲ ತಡವಾಗಿ ಆರಂಭಗೊಂಡಿತ್ತು. ಹೆಮ್ಮಾಡಿ ಸಖಿ ಮತಗಟ್ಟೆಯಲ್ಲಿ ಇವಿಎಂ ದೋಷದಿಂದ ಮತದಾನ ವಿಳಂಬವಾಗಿದ್ದು ಸುಮಾರು ಮುಕ್ಕಾಲು ಗಂಟೆ ತಡವಾಗಿ ಆರಂಭಗೊಂಡ ಮತದಾನ ಪ್ರಕ್ರಿಯೆಯಿಂದ ಮತದಾರರು ಇರುಸುಮುರುಸುಗೊಂಡರು. ಇನ್ನು ಮತಯಂತ್ರದ ಬಳಿ ಬೆಳಕಿನ ಕೊರತೆಯಿಂದಾಗಿ ಕೆಲವು ಚಿಹ್ನೆ ಕಾಣಿಸದೆ ಮತದಾರರು ಪರದಾಡಿದರು. ನೆಂಪುವಿನ ಮತದಾನ ಕೇಂದ್ರದಲ್ಲಿ ತಾಂತ್ರಿಕ ದೋಷದಿಂದ ಮತದಾನ ಬಹಳಷ್ಟು ನಿಧಾನಗತಿಯಲ್ಲಿ ಸಾಗಿತು. ಇದೇ ಸಮಸ್ಯೆ ಹಲವು ಮತಕೇಂದ್ರಗಳಲ್ಲಿ ಕಂಡುಬಂದಿದ್ದು ಮತದಾರರು ಸರತಿ ಸಾಲಿನಲ್ಲಿ ನಿಂತು ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. 
ಬೈಂದೂರು ಶಾಸಕರ ಮತ ಚಲಾವಣೆ:
ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ  ವಂಡ್ಸೆಯ ಬೆಳ್ಳಾಲದ ಮೂಡಮುಂದ ಶಾಲೆಯಲ್ಲಿ ಮತ ಚಲಾಯಿಸಿದರು. ಬಳಿಕ ಮಾತನಾಡಿದ ಅವರು ಅಭಿವೃದ್ಧಿಶೀಲ ಭವ್ಯ ಭಾರತದ ನಿರ್ಮಾಣಕ್ಕೆ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಕರೆಕೊಟ್ಟರು. ಇನ್ನು ಬೈಂದೂರಿನ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಕನ್ಯಾನ ಶಾಲೆಯಲ್ಲಿ ಮತದಾನ ಮಾಡಿದರು. ೮ ಗಂಟೆ ಸುಮಾರಿಗೆ ಕುಟುಂಬಿಕರ ಜೊತೆ ಮತದಾನ ಕೇಂದ್ರಕ್ಕೆ ಆಗಮಿಸಿ ಮತ ಚಲಾಯಸಿದ ಗೋಪಾಲ ಪೂಜಾರಿ ಮಧುಬಂಗಾರಪ್ಪ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
ವಿಶೇಷ ಚೇತನರಿಗೆ ವಾಹನ ವ್ಯವಸ್ಥೆ, ಕೆಲವು ಮತದಾನ ಕೇಂದ್ರಗಳಲ್ಲಿ ವೈದ್ಯಕೀಯ ತಪಾಸಣೆ ಸೌಲಭ್ಯ, ಮಹಿಳಾ ಸಿಬ್ಬಂದಿಗಳಿಂದಲೇ ನಿರ್ವಹಿಸಲ್ಪಡುವ ಸಖಿ ಮತಗಟ್ಟೆಗಳಲ್ಲಿ ಚಿಣ್ಣರಿಗೆ ಆಟೋಪಕರಣ ವ್ಯವಸ್ಥೆ, ಕೆಲವೆಡೇ ದಣಿದು ಬಂದವರಿಗೆ ಮಜ್ಜಿಗೆ ವಿತರಣೆ, ವಿಶೇಶ ಚೇತನರು, ಅಂಗವಿಕಲರಿಗೆ ವೀಲ್ ಚೇರ್ ವ್ಯವಸ್ಥೆಯಿತ್ತು. ಇನ್ನು ನಕ್ಸಲ್ ಪೀಡಿತ ಪ್ರದೇಶಗಳಲ್ಲಿಯೂ ಉತ್ತಮ ಮತದಾನ ನಡೆಯುತ್ತಿದೆ. ಹೊಸ ಮತದಾರರು ಉತ್ಸಾಹದಿಂದ ಮತಚಲಾವಣೆಗೆ ಬಂದರೆ ಹಿರಿಯ ನಾಗರಿಕರು ಅದೊಂದು ಹಕ್ಕು ಯಾವುದೇ ಕಾರಣಕ್ಕೂ ಮತ ಹಾಕದೇ ಇರಬಾರದು ಎಂಬ ಅಭಿಲಾಷೆಯಲ್ಲಿ ಮತಗಟ್ಟೆಗೆ ಬರುತ್ತಿದ್ದುದು ಕಂಡುಬಂತು. ವಂಡ್ಸೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಾದ ಸಂಜೀವ ವಂಡ್ಸೆ ಹಾಗೂ ಅಶ್ವಿಜ್ ಮತದಾನ ಮಾಡಿದರು.