ಉಡುಪಿ ಎಸ್ ಪಿ ಫೋನ್ ಕಾರ್ಯಕ್ರಮ :ಸಾರ್ವಜನಿಕರಿಂದ ಸಮಸ್ಯೆಗಳ ದೊಡ್ಡ ಪಟ್ಟಿ

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಅಂಬಲಪಾಡಿ, ಕಟಪಾಡಿ ಹಾಗೂ ಸಂತೆಕಟ್ಟೆ ಜಂಕ್ಷನ್ ನಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸುವಂತೆ ಕೋರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.

ಅವರು ಶುಕ್ರವಾರ ಉಡುಪಿ ಎಸ್ಪಿ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಕರೆಗಳನ್ನು ಆಲಿಸಿ ಮಾತನಾಡಿದರು.

ಟ್ರಾಫಿಕ್ ಸಿಗ್ನಲ್ ಅಳವಡಿಸಲು ಅವಕಾಶ:

ರಾ.ಹೆ.66ರ ಈ ಮೂರು ಜಂಕ್ಷನ್ ಗಳಲ್ಲಿ ತುಂಬಾ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ಸರ್ವಿಸ್ ರಸ್ತೆಯಲ್ಲಿ ದ್ವಿಪಥ ಇಲ್ಲದಿರುವುದರಿಂದ ಟ್ರಾಫಿಕ್ ದಟ್ಟನೆಯನ್ನು ನಿಯಂತ್ರಿಸುವುದು ಸಹ ಬಹಳ ಕಷ್ಟವಾಗುತ್ತಿದೆ. ಸಾರ್ವಜನಿಕರಿಂದಲೂ ಸಾಕಷ್ಟು ದುರುಗಳು ಬರುತ್ತಿವೆ. ಹಾಗಾಗಿ ರಾ.ಹೆ.ಗಳಲ್ಲಿ ವಿಶೇಷ ಮನವಿಯ ಮೇರೆಗೆ ಟ್ರಾಫಿಕ್ ಸಿಗ್ನಲ್ ಗಳನ್ನು ಅಳವಡಿಸಲು ಅವಕಾಶ ಇದೆ ಎಂದರು.

ಉಡುಪಿ ನಗರದಲ್ಲಿ ಸಂಚಾರ ದಟ್ಟಣೆ: ಸಾರ್ವಜನಿಕರ ದೂರು

ನಗರಸಭೆಯ ಎದುರಿನ ಮುಖ್ಯ ರಸ್ತೆಯಲ್ಲಿಯೇ ಆಟೋ ಪಾರ್ಕಿಂಗ್ ಮಾಡಲಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿದೆ. ಅಲ್ಲದೆ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರು ಇರುವ ಸಾರ್ವಜನಿಕರ ವಾಹನ ನಿಲುಗಡೆಯ ಸ್ಥಳದಲ್ಲಿ ಸ್ಥಳೀಯ ಟೂರಿಸ್ಟ್ ವಾಹನಗಳನ್ನು ನಿಲ್ಲಿಸುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಎಂದು ಸಾರ್ವಜನಿಕರೊಬ್ಬರು ಕರೆ ಮಾಡಿ ದೂರು ನೀಡಿದರು. ಇದಕ್ಕೆ ಉತ್ತರಿಸಿದ ಎಸ್ಪಿ, ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಮಲ್ಪೆ :ಕಸದ ಸಮಸ್ಯೆ ಪ್ರಸ್ತಾಪ

 ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ತೆಂಕನಿಡಿಯೂರು ಪ್ರದೇಶದಲ್ಲಿ ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದು,ಇದರಿಂದ ಸುತ್ತಮುತ್ತಲಿನಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ ಎಂದು ಸಾರ್ವಜನಿಕರೊಬ್ಬರು ಕರೆ ಮಾಡಿ ದೂರು ನೀಡಿದರು. ಮಲ್ಪೆ ಠಾಣಾ ವ್ಯಾಪ್ತಿಯ ಮಲ್ಪೆ– ಪಡುಕೆರೆ ರಸ್ತೆಯಲ್ಲಿ ವಾಹನ ಸವಾರರು ಅತೀವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಿದ್ದಾರೆ. ಇದರಿಂದ ಇತರ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿದೆ ಎಂದು ದೂರು ನೀಡಿದರು.

ಪರ್ಮಿಟ್ ಇಲ್ಲದ ಬಸ್ ಗಳು:ಆರೋಪ

ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪರ್ಮಿಟ್ ಇಲ್ಲದೆ ಕೆಲ ಬಸ್  ಓಡಾಡುತ್ತಿದೆ. ಸಂಜೆ ವೇಳೆಗೆ ಖಾಸಗಿ ಬಸ್ ಗಳು ಗಂಗೊಳ್ಳಿ ಪೇಟೆಗೆ ಹೋಗುತ್ತಿಲ್ಲ. ಗಂಗೊಳ್ಳಿಯಿಂದ ಕುಂದಾಪುರ ಕಡೆಗೂ ಹೋಗುತ್ತಿಲ್ಲ. ಬಸ್ ಪರ್ಮಿಟ್ ಒಬ್ಬರ ಹೆಸರಿನಲ್ಲಿದ್ದು, ಬಸ್ ಮಾಲೀಕರು ಇನ್ನೊಬ್ಬರಾಗಿದ್ದಾರೆಂದು ಸಾರ್ವಜನಿಕರೊಬ್ಬರು ದೂರು ನೀಡಿದರು. ಇದಕ್ಕೆ ಉತ್ತರಿಸಿದ ಎಸ್ಪಿ ಪರ್ಮಿಟ್ ಕುರಿತು ಪರಿಶೀಲನೆ ನಡೆಸುವಂತೆ ಆರ್ ಟಿಒಗೆ ಸೂಚಿಸಲಾಗುವುದು ಎಂದರು.